ಜನಸೇವೆ ಮಾಡಿದ ಖುಷಿ ನನ್ನಲ್ಲಿದೆ
ಶಿರಾ: ಇಂದಿಗೆ ನಾನು ರಾಜಕೀಯ ಪ್ರವೇಶ ಮಾಡಿ 35 ವರ್ಷಗಳಾಗಿವೆ. 5 ಬಾರಿ ಶಾಸಕನಾಗಿ ಆಯ್ಕೆ ಮಾಡಿ ಸುಮಾರು 25 ವರ್ಷ ನಿಮ್ಮ ಸೇವೆ ಮಾಡಿದ ಖುಷಿ ಇದೆ. ನಿಮ್ಮ ಋಣ ತೀರಿಸುವ ಮತ್ತು ಜನಸೇವೆ ಮಾಡಿದ ಸಂತಸ ನನ್ನಲ್ಲಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಕ್ಷೇತ್ರದ ಶಾಸಕ ಟಿ.ಬಿ.ಜಯಚಂದ್ರ ತಿಳಿಸಿದರು.
ಅವರು ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ಚಿಕ್ಕದಾಸರಹಳ್ಳಿಯಲ್ಲಿ ನಡೆದ ಕಳ್ಳಂಬೆಳ್ಳ ಹಾಗೂ ಶಿರಾ ಕೆರೆಗಳಿಗೆ ಹೇಮಾವತಿ ನೀರು ಹರಿದ ದಶಮಾನೋತ್ಸವ ಸಮಾರಂಭ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಿರಾ ಕ್ಷೇತ್ರದ ಶಾಸಕನಾಗಿ ಆಯ್ಕೆಗೊಂಡ ನಂತರ ನನ್ನ ಮೊದಲ ಕೆಲಸವೆ ಮದಲೂರು ಕೆರೆಗೆ ಜೀವ ತುಂಬಿದ್ದು, ಈ ನಿಟ್ಟಿನಲ್ಲಿ ನಾನು ಕಾಲುವೆ ನಿರ್ಮಿಸುವುದರ ಮೂಲಕ ಯಶಸ್ಸು ಕಂಡಿದ್ದೇನೆ. ವಿರೋಧ ಪಕ್ಷಗಳ ತಂತ್ರಗಾರಿಕೆ ನಡುವೆಯೂ ನೂರೆಂಟು ವಿಘ್ನಗಳ ನಡುವೆ ಮದಲೂರು ಕೆರೆಯ ಕಾಮಗಾರಿ ಕೆಲವೇ ದಿವಸಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು.
ನನ್ನ ಗುರಿ 1000 ಕೋಟಿ: ಶಿರಾ ಕ್ಷೇತ್ರಕ್ಕೆ ನನ್ನ ಅಧಿಕಾರವಧಿಯಲ್ಲಿ 1000 ಕೋಟಿ ರೂಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಸಂಕಲ್ಪ ನನ್ನಲ್ಲಿತ್ತು. ಈಗ 850 ಕೋಟಿ ರು.ಗಳ ಅಭಿವೃದ್ಧಿ ಕಾಮಗಾರಿ ಚಾಲನೆಯಲ್ಲಿವೆ. ಮುಂದಿನ 2 ವರ್ಷದ ಒಳಗೆ ಈ ಎಲ್ಲಾ ಕಾಮಗಾರಿಗಳು ಸಾರ್ವಜನಿಕ ಬಳಕೆಗೆ ಲಭ್ಯವಾಗಲಿವೆ. ತಾಲೂಕಿನಲ್ಲಿ ಕೇಂದ್ರ ಸರ್ಕಾರದ ಅನುದಾನದಡಿಯಲ್ಲಿ 25 ಬ್ಯಾರೇಜ್ಗಳ ನಿರ್ಮಾಣಕ್ಕೆ ಹಣ ಮಂಜೂರಾಗಿದ್ದು, ಈಗಾಗಲೇ ಹಲವು ಬ್ಯಾರೇಜ್ಗಳ ಕಾಮಗಾರಿ ಪೂರ್ಣಗೊಂಡಿದೆ. ಇದರಿಂದ ಅಂತರ್ಜಲದ ಅಭಿವೃದ್ಧಿಯಾಗಲಿದೆ ಎಂದರು.
ಬೃಹತ್ ಸಮಾರಂಭವನ್ನು ನೀರಾವರಿ ತಜ್ಞ ನಿವೃತ್ತ ಐಎಎಸ್ ಅಧಿಕಾರಿ ಗಂಗಪ್ಪ ಉದ್ಘಾಟಿಸಿ ಇಂದು ಶಿರಾ ತಾಲೂಕಿನ ಜನತೆ ಇಂತಹ ಬೇಸಿಗೆ ಕಾಲದಲ್ಲೂ ಹೇಮಾವತಿ ನೀರನ್ನು ಉಪಯೋಗಿಸುವುದರ ಮೂಲಕ ಟಿ.ಬಿ.ಜಯಚಂದ್ರ ಅವರಿಗೆ ಮತ ಹಾಕಿ ಗೆಲ್ಲಿಸಿದ್ದಕ್ಕೆ ಸಾರ್ಥಕವಾಗಿದೆ. ಇನ್ನು ಮುಂದೆಯೂ ಕ್ಷೇತ್ರದ ಮತದಾರರ ಆಶೀರ್ವಾದ ಜಯಚಂದ್ರರ ಮೇಲಿರಲಿ ಎಂದರು.
ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಸ್.ಎನ್.ಕೃಷ್ಣಯ್ಯ, ಡಿ.ಸಿ.ಸಿ. ಬ್ಯಾಂಕ್ ನಿರ್ದೆಶಕ ಹಂದುಕುಂಟೆ ರವಿ, ಮಾಜಿ ನಗರಸಭೆ ಸದಸ್ಯೆ ಪಾರ್ವತಮ್ಮ ಎಸ್.ಕೆ.ದಾಸಪ್ಪ, ಮಾತನಾಡಿ ಮುಂದಿನ ಚುನಾವಣೆಯಲ್ಲಿ ಜಯಚಂದ್ರ ರವರನ್ನು ಗೆಲ್ಲಿಸುವಂತೆ ಕೋರಿದರು.
ಜಿ.ಪಂ. ಸದಸ್ಯ ಅರೇಹಳ್ಳಿ ರಮೇಶ್, ಮಾಜಿ ಜಿ.ಪಂ. ಸದಸ್ಯ ಎಂ.ಆರ್.ಪರ್ವತಪ್ಪ ಆಯೋಜಿಸಿದ್ದ ಸದರಿ ಬೃಹತ್ ಸಮಾರಂಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಲ್ಲಾಬಕ್ಷ್ ಪ್ಯಾರು, ಕೆ.ಪಿ.ಸಿ.ಸಿ. ಸದಸ್ಯ ಸಂತೋಷ್ ಜಯಚಂದ್ರ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂಗಾವರ ಮಾರಣ್ಣ, ಎ.ಪಿ.ಎಂ.ಸಿ. ಅಧ್ಯಕ್ಷ ಶಶಿಧರ ಗೌಡ, ಮುಖಂಡರಾದ ಸಚಿನ್ ಹೊನ್ನೇಶ್ ಗೌಡ, ಡಿ.ಸಿ.ಅಶೋಕ್, ಜಗದೀಶ್ಚಂದ್ರ, ಸೇರಿದಂತೆ ಹಲವರ ಹಾಜರಿದ್ದರು.
ಸಮಾರಂಭದಲ್ಲಿ ಇತ್ತೀಚಿನ ನಗರಸಭೆ ಚುನಾವಣೆಯಲ್ಲಿ ವಿಜೇತರಾದ 20 ಜನ ಸದಸ್ಯರಿಗೆ ಸನ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

