ಚುನಾವಣಾ ಕರ್ತವ್ಯಕ್ಕೆ ಸಿದ್ಧರಾಗಿ
ಕ.ಪ್ರ. ವಾರ್ತೆ ್ಣ ತುಮಕೂರು ್ಣ ಮಾ.21
ರಾಜ್ಯ ವಿಧಾನಸಭಾ ಚುನಾವಣೆಯನ್ನು ಪಾರದರ್ಶಕ, ಶಾಂತಿಯುತ ಮತ್ತು ಮುಕ್ತವಾಗಿ ನಡೆಸುವ ಸಂಬಂಧ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿ ಪರಸ್ಪರ ಸಹಕಾರ ಮನೋಭಾವದೊಂದಿಗೆ ಚುನಾವಣಾ ಕರ್ತವ್ಯಕ್ಕೆ ಸನ್ನದ್ಧರಾಗುವಂತೆ ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ರಾಜ್ಯ ವಿಧಾನಸಭಾ ಚುನಾವಣಾ ಪೂರ್ವಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚುನಾವಣೆ ಹಿನ್ನಲೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರುವಂತಹ ಎಲ್ಲಾ ರೀತಿಯ ಹೋರ್ಡಿಂಗ್ಸ್ ಮತ್ತು ಬಂಟಿಂಗ್ಸ್‌ಗಳನ್ನು ಕಡ್ಡಾಯವಾಗಿ ತೆಗೆಯುವಂತೆ ಮತ್ತು ಪ್ರವಾಸಿ ಮಂದಿರ ಮತ್ತು ವಾಹನಗಳನ್ನು ತಮ್ಮ ವಶಕ್ಕೆ ಪಡೆದು ಈ ಕುರಿತಂತೆ ನಾಳೆ ಸಂಜೆಯೊಳಗಾಗಿ ತಮಗೆ ವರದಿ ನೀಡುವಂತೆ ಎಲ್ಲಾ ಉಪವಿಭಾಗಾಧಿಕಾರಿಗಳು ಮತ್ತು ತಹಸೀಲ್ದಾರರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ನಿಗಾವಹಿಸಿ: ಸಮಾಜ ಘಾತುಕ ಶಕ್ತಿಗಳು, ರೌಡಿಪಟ್ಟಿಯಲ್ಲಿರುವ ಆಸಾಮಿಗಳ ಬಗ್ಗೆ ತೀವ್ರ ನಿಗಾವಹಿಸುವಂತೆ ಮತ್ತು ಇಂತಹ ಶಕ್ತಿಗಳನ್ನು ನಿಯಂತ್ರಿಸಲು ಕ್ರಮಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಈವರೆಗಿನ ಮಾಹಿತಿಯಂತೆ 4478 ಲೈಸನ್ಸ್ ಹೊಂದಿರುವ ಆಯುಧಗಳಿದ್ದು, ಈ ಕುರಿತು ಸಹ ಪಟ್ಟಿ ಸಿದ್ದಪಡಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ದೊಡ್ಡ ಜಿಲ್ಲೆ: ತುಮಕೂರು ಜಿಲ್ಲೆ ಹತ್ತು ತಾಲೂಕುಗಳನ್ನು ಒಳಗೊಂಡಂತಹ ದೊಡ್ಡ ಜಿಲ್ಲೆಯಾಗಿದ್ದು, ಒಂದು ರಾಜ್ಯದೊಂದಿಗೆ ಭೌಗೋಳಿಕ ಪ್ರದೇಶವನ್ನೂ ಸಹ ಹಂಚಿಕೊಂಡಿದೆ. ಜಿಲ್ಲೆಯಲ್ಲಿ ಹಲವು ರಾಷ್ಟ್ರ ಹಾಗೂ ರಾಜ್ಯ ಹೆದ್ದಾರಿಗಳು ಹಾದು ಹೋಗಿದ್ದು, ಕಳ್ಳಭಟ್ಟಿ ಸಾಗಾಣಿಕೆ ಮತ್ತಿತರೆ ನೀತಿ ಸಂಹಿತೆ ಉಲ್ಲಂಘನೆಯಾಗುವಂತಹ ಪ್ರಕರಣಗಳನ್ನು ನಿಯಂತ್ರಿಸಲು ತ್ವರಿತಗತಿಯಲ್ಲಿ ಜಿಲ್ಲೆಯ ವಿವಿಧೆಡೆ ಚೆಕ್ ಪೋಸ್ಟ್‌ಗಳನ್ನು ತೆರೆಯುವ ಅವಶ್ಯಕತೆ ಇದ್ದು, ಎಲ್ಲಾ ತಾಲೂಕುಗಳ ಡಿ.ಎಸ್.ಪಿ.ಗಳು ಹಾಗೂ ತುಮಕೂರು, ಮಧುಗಿರಿ, ತಿಪಟೂರು ಉಪವಿಭಾಗಾಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುವ ಮೂಲಕ ಇನ್ನೆರಡು ದಿನದೊಳಗಾಗಿ ಚೆಕ್ ಪೋಸ್ಟ್‌ಗಳನ್ನು ತೆರೆಯುವ ಸ್ಥಳ ಹಾಗೂ ಇನ್ನಿತರೆ ಮಾಹಿತಿಯನ್ನು ತಮಗೆ ಸಲ್ಲಿಸುವಂತೆ ಸೂಚಿಸಿದರು.
ಸ್ಥಳ ಪರಿಶೀಲಿಸಿ: ಅಂತೆಯೇ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲು ಹಾಗೂ ಮತಗಟ್ಟೆಗಳನ್ನು ಸ್ಥಾಪಿಸಲು ಸ್ಥಳ ಪರಿಶೀಲನೆ ನಡೆಸಿ, 4 ದಿನದೊಳಗಾಗಿ ತಮಗೆ ವರದಿ ನೀಡುವಂತೆ ಎಲ್ಲಾ ತಹಶೀಲ್ದಾರರುಗಳಿಗೆ ಜಿಲ್ಲಾಧಿಕಾರಿಗಳು ಈ ಸಂದರ್ಭ ಸೂಚಿಸಿದರು.
ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ಕಾರ್ಯಕ್ಕೆ ಸಾಕಷ್ಟು ವಾಹನಗಳ ಅವಶ್ಯಕತೆ ಇದ್ದು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸರ್ಕಾರಿ ಹಾಗೂ ಖಾಸಗಿ ವಾಹನಗಳ ಲಭ್ಯತೆ ಕುರಿತಂತೆ ತಮಗೆ ಪಟ್ಟಿ ಸಿದ್ದಪಡಿಸಿ ನೀಡುವುದು ಮತ್ತು ಖಾಸಗಿ ವಾಹನ ಮಾಲೀಕರಿಗೆ ಖಾಸಗಿ ವಾಹನಗಳನ್ನು ಬಾಡಿಗೆಗೆ ಪಡೆಯುವ ಸಂಬಂಧ ಪೂರ್ವ ಸಿದ್ಧತೆಯನ್ನು ಮಾಡಿಟ್ಟುಕೊಳ್ಳುವಂತೆ ತಿಳಿಸಿದರು.
ತಹಸೀಲ್ದಾರ್ ಮತ್ತು ಸರ್ಕಲ್ ಇನ್ಸ್‌ಪೆಕ್ಟರ್‌ಗಳು ಜಂಟಿಯಾಗಿ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಸ್ಥಳ ನಿಗದಿಪಡಿಸುವಂತೆ ಹಾಗೂ ಮತದಾನದ ದಿನ ಸಂತೆ, ಜಾತ್ರೆ ನಡೆಯುವ ಗ್ರಾಮಗಳ ಪಟ್ಟಿ ನೀಡುವಂತೆ ತಿಳಿಸಿದರು.
ಮರಳು ಅಕ್ರಮ ಸಾಗಣೆ ತಡೆಗಟ್ಟಿ: ಜಿಲ್ಲೆಯಲ್ಲಿ ಮರಳು ಅಕ್ರಮ ಸಾಗಣೆಯನ್ನು ಸಂಪೂರ್ಣ ತಡೆಗಟ್ಟಲು ಅಧಿಕಾರಿಗಳು ತಮ್ಮೊಂದಿಗೆ ಸಹಕರಿಸಬೇಕು, ಯಾವುದೇ ರೀತಿಯ ಒತ್ತಡ ಬಂದರೂ ಅಧಿಕಾರಿಗಳು ಹಿಂಜರಿಯದೆ ಮರಳು ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು ಎಂದು ಈ ಸಂದರ್ಭ ಅವರು ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ದೊಡ್ಡಪ್ಪ, ಜಿಲ್ಲಾ ಪಂಚಾಯತ್ ಸಿ.ಇ.ಓ. ಗೋವಿಂದರಾಜು, ಟೂಡಾ ಆಯುಕ್ತರಾದ ಆದರ್ಶಕುಮಾರ್ ಸೇರಿದಂತೆ ಉಪವಿಭಾಗಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ತಹಸೀಲ್ದಾರರುಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

