ಯುವ ಜನಾಂಗ ತಾತ್ವಿಕ ನಾಯಕರಾಗಿ ರೂಪುಗೊಳ್ಳುವುದು ಅಗತ್ಯ
ಕ.ಪ್ರ. ವಾರ್ತೆ ್ಣ ತುಮಕೂರು ್ಣ ಮಾ.21
ದೇಶದ ಭವಿಷ್ಯವಾಗಿರುವ ಯುವ ಜನಾಂಗ ತಾತ್ವಿಕ ನಾಯಕರಾಗಿ ರೂಪುಗೊಳ್ಳುವ ಅಗತ್ಯವಿದೆ ಎಂದು ಚಿತ್ರ ನಿರ್ದೇಶಕ ಪ್ರಕಾಶ್ ಬೆಳವಾಡಿ ಅಭಿಪ್ರಾಯಪಟ್ಟರು.
ನಗರದ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಏರ್ಪಟ್ಟಿರುವ ಮೂರು ದಿನಗಳ ಹ್ಯಾಲ್ಸಿಯನ್ 2013 ಬೇಸಿಗೆ ಹಬ್ಬಕ್ಕೆ ಕಾಲೇಜಿನ ಬಿರ್ಲಾ ಸಭಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿದರು.
ದೇಶದ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ ಯುವಜನಾಂಗದ ಮೇಲಿದ್ದು, ಯುವ ಜನಾಂಗ ತಾತ್ವಿಕ ಚಿಂತಕರಾಗಿ ಬೆಳೆಯಬೇಕಿದೆ. ಈ ನಿಟ್ಟಿನಲ್ಲಿ ಹ್ಯಾಲ್ಸಿಯನ್ ಅಂತಹ ಸಾಂಸ್ಕೃತಿಕ ಹಬ್ಬಗಳು ಬರೀ ಮನೋರಂಜನೆಗೆ ಸೀಮಿತವಾಗದೆ ಯುವಜನರಲ್ಲಿ ತಾತ್ವಿಕ ಬದ್ಧತೆಯನ್ನು ಬೆಳೆಸಬೇಕಿದೆ ಎಂದು ಆಶಿಸಿದರು. ಲೆಕ್ಕಚಾರ ಮತ್ತು ಸಿದ್ಧಾಂತಗಳನ್ನು ಎಡ ಮೆದುಳು ಚಿಂತಿಸಿದರೆ ನೋಡಿದ್ದನ್ನು ಗ್ರಹಿಸಿ, ಹಿಡಿದಿಟ್ಟುಕೊಳ್ಳುವ ಶಕ್ತಿ ಬಲ ಮೆದುಳಿಗಿದೆ. ಬಲ ಮೆದುಳು ದೇಹದ ಎಡ ಭಾಗವನ್ನು, ಎಡ ಮೆದುಳು ಬಲ ಭಾಗವನ್ನು ನಿಯಂತ್ರಿಸುತ್ತದೆ. ಇವರೆಡು ಮೆದುಳಿನ ಭಾಗವನ್ನು ಸಂಯೋಜಿದರೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು. ಮೆದುಳಿನ ಸಂಯೋಜನೆಯ ಶಕ್ತಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗಿದೆ ಎಂದು ಪ್ರತಿಪಾದಿಸಿದರು.
ಸಮಾಜಕ್ಕೆ ಕೊಡುಗೆ ನೀಡಲಿ: ಎಂಜಿನಿಯರಿಂಗ್ ಓದುವ ಅವಕಾಶ ಎಲ್ಲರಿಗೂ ಲಭ್ಯವಾಗುವುದಿಲ್ಲ. ದೇಶದ ಶೇ.1ರಷ್ಟು ಮಂದಿ ಈ ಅವಕಾಶ ಪಡೆದಿದ್ದಾರೆ. ಆದ್ದರಿಂದ ಎಂಜಿನಿಯರಿಂಗ್ ವಿದ್ಯಾರ್ಥಿಗಳು ತಮಗೆ ಸಿಕ್ಕಿರುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡಬೇಕು. 50 ವರ್ಷ ಇತಿಹಾಸವಿರುವ ಸಿದ್ಧಗಂಗಾ ತಾಂತ್ರಿಕ ಕಾಲೇಜು, ಶತಾಯುಷಿ ಡಾ.ಶಿವಕುಮಾರ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಉನ್ನತ ಸಾಧನೆ ಮಾಡಿದ್ದು, ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ನಿಜಕ್ಕೂ ಪುಣ್ಯವಂತರು ಎಂದು ಬಣ್ಣಿಸಿದರು.
ಪ್ರಶ್ನಿಸುವ ಮನಭವ ಅಗತ್ಯ: ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದ ಬೆಳವಾಡಿ, ಯಾವುದೇ ವಿಷಯ, ವಸ್ತುವಿನ ಬಗ್ಗೆ ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡರೆ ಅದು ನಮ್ಮಲ್ಲಿ ಕ್ರಿಯಾಶೀಲತೆಯನ್ನು ಬೆಳೆಸುತ್ತದೆ. ಕ್ರಿಯಾಶೀಲತೆ ಮೂಲಕ ಜಗತ್ತನ್ನು ಅರ್ಥೈಸಿಕೊಳ್ಳಬೇಕಿದೆ. ಕುಶಲತೆ ಮೈಗೂಡಿಸಿಕೊಂಡ ವ್ಯಕ್ತಿ ಏನನ್ನಾದರೂ ಸಾಧನೆ ಮಾಡಬಲ್ಲ ಎಂದು ಕಿವಿಮಾತು ಹೇಳಿದರು.
ಸ್ಥಳೀಯ ಸಂಸ್ಕೃತಿ ಅರಿಯುವ ಕೆಲಸ : ಹಿರಿಯ ಪತ್ರಕರ್ತೆ ವಾಸಂತಿ ಹರಿಪ್ರಕಾಶ್ ಮುಖ್ಯ ಅತಿಥಿಯಾಗಿ ಮಾತನಾಡಿ ಎಂಜಿನಿಯರಿಂಗ್ ಓದಿ ಉನ್ನತ ಉದ್ಯೋಗ ಹಿಡಿದ ಅಭ್ಯರ್ಥಿಗಳಿಗೆ ಜನ ಸಂಪರ್ಕ ಕಡಿಮೆ. ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಿ ಮೊದಲು ಜನ ಸಂಪರ್ಕ ಸಾಧಿಸಿ. ಜನ ಸಾಮಾನ್ಯರ ನಾಡಿ ಮಿಡಿತ ಅರ್ಥೈಸಿಕೊಂಡು, ಒಡನಾಟ ಬೆಳೆಸಿಕೊಂಡ ವ್ಯಕ್ತಿ ತನ್ನ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಲು ಸಾಧ್ಯವಾಗುತ್ತದೆ. ನೀವು ಯಾವ ಸ್ಥಳದಲ್ಲೇ ಕೆಲಸ ಮಾಡಿ ಆ ಸ್ಥಳೀಯ ಸಂಸ್ಕೃತಿಯನ್ನು ಅರಿಯುವ ಕೆಲಸ ಮಾಡಿ ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳು ಎಷ್ಟೇ ಬುದ್ಧಿವಂತರಾದರೂ ಸಕಾರಾತ್ಮಕ ಆಲೋಚನೆ ಹೊಂದದಿದ್ದರೆ ಬದುಕು ಅರ್ಥ ಹೀನವಾಗುತ್ತದೆ ಎಂದ ಅವರು ನಿಮ್ಮ ವರ್ತನೆ ನಿಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಉನ್ನತ ವಿದ್ಯಾಭ್ಯಾಸ ಮಾಡಿ ಪಿಎಚ್ಡಿ ಗಳಿಸಿದ್ದರೂ ವಿಭಿನ್ನ ಆಲೋಚನ ಕ್ರಮವನ್ನು ಹೊಂದಿಲ್ಲದಿದ್ದರೆ ಪ್ರತಿಭೆ ನಿಮಗೆ ಮಾತ್ರ ಸೀಮಿತವಾಗುತ್ತದೆ. ಕೆಲಸ ಮಾಡುವ ಸ್ಥಳದಲ್ಲಿ ನೀಮೊಬ್ಬ ಉದ್ಯೋಗಿ ಮಾತ್ರ ಆಗಿರದೇ ಕೆಲಸ ಕೊಟ್ಟ ಸಂಸ್ಥೆಯ ಆಸ್ತಿಯಾಗಿ ಸಾಧನೆ ಮಾಡಿ ತೋರಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವ್ಯಕ್ತಿತ್ವ ನಿರ್ಮಿಸುವ ಕಾರ್ಯ: ಕಾಲೇಜಿನ ಪ್ರಿನ್ಸಿಪಾಲ್ ಡಾ.ಶಿವಕುಮಾರಯ್ಯ ಮಾತನಾಡಿ ಪ್ರತೀ ವರ್ಷ ಹ್ಯಾಲ್ಸಿಯನ್, ಸ್ಪಂದನ, ವಿಭಾಗವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕಾಲೇಜು ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಅರಿವಿನ ಜತೆಗೆ ವ್ಯಕ್ತಿತ್ವ ನಿರ್ಮಿಸುವ ಕಾರ್ಯ ಮಾಡುತ್ತಿದೆ ಎಂದರು.
ಎಸ್ಐಟಿ ನಿರ್ದೇಶಕ ಡಾ.ಎಂ.ಎನ್. ಚನ್ನಬಸಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಲೇಜಿನ ಡೀನ್ ಪ್ರೊ.ಬಸವರಾಜಯ್ಯ, ಅರವಿಂದ ತಿವಾರಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಗಾಯತ್ರಿ ನವೀನ್, ನಿಧಿ ಪೊರವಾಲ್ ಅತಿಥಿಗಳನ್ನು ಪರಿಚಯಿಸಿದರು. ಲತಾ ಮತ್ತು ಅಕ್ಷತಾ ಭಾಸ್ಕರ್ ಕೊಳಲು ವಾದನದೊಂದಿಗೆ ಪ್ರಾರ್ಥಿಸಿದರು. ಪ್ರೊ.ಬಿ.ಸುದರ್ಶನ್ ಸ್ವಾಗತಿಸಿದರು. ಕಾರ್ಯಕ್ರಮ ಸಂಚಾಲಕ ಸಿ.ಪಿ. ಶಿವಸ್ವರೂಪ್ ಹ್ಯಾಲಿಯನ್ ವಿವರಣೆ ನೀಡಿದರು. ಅನನ್ಯ ಪ್ರಕಾಶ್ ವಂದಿಸಿದರು. ಸ್ವಾತಿ ಮತ್ತು ಸುವಿಗ್ಯ ತಿವಾರಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

