ರಾಘವಾಂಕನ ಹರಿಶ್ಚಂದ್ರ ಕಾವ್ಯ ರಸಿಕರ ರಸಾಯನ: ಮುರುಳಿ ಕೃಷ್ಣಪ್ಪ ಅಭಿಮತ
ಕ.ಪ್ರ. ವಾರ್ತೆ ್ಣ ತುಮಕೂರು ್ಣ ಮಾ.21
ರಾಘವಾಂಕ ಕವಿಯು ತನ್ನದೇ ಆದ ವಿಶಿಷ್ಟ ಷಟ್ಪದಿ ಶೈಲಿಯಲ್ಲಿ ರಚಿಸಿರುವ ಹರಿಶ್ಚಂದ್ರ ಕಾವ್ಯ ರಸಪ್ರಧಾನ ಹಾಗೂ ಭಾವಪ್ರಧಾನವಾಗಿದ್ದು ರಸಿಕರ ಪಾಲಿಗೆ ರಸಾಯನವಾಗಿದೆ ಎಂದು ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಮಾಜಿ ಅಧ್ಯಕ್ಷ ಟಿ. ಮುರುಳಿಕೃಷ್ಣಪ್ಪ ತಿಳಿಸಿದರು.
ಅವರು ತುಮಕೂರಿನ ಕೃಷ್ಣ ನಗರದ ವಿದ್ಯಾವಾಹಿನಿ ಕಾಲೇಜಿನ ಸಭಾಂಗಣದಲ್ಲಿ ಜ್ಞಾನಬುತ್ತಿ ಸತ್ಸಂಗ ಕೇಂದ್ರ ಏರ್ಪಡಿಸಿದ್ದ 192 ನೇ ವಾರದ ಉಪನ್ಯಾಸ ಕಾರ್ಯಕ್ರಮದಲ್ಲಿ ಹರಿಶ್ಚಂದ್ರ ಕಾವ್ಯದಲ್ಲಿ ಕೌಶಿಕನ ಕಾಟ ಎಂಬ ವಿಷಯದ ಬಗ್ಗೆ ಮಾತನಾಡಿದರು.
ಈ ಕಾವ್ಯದಲ್ಲಿ ಘರ್ಷಣೆಯೇ ಜೀವಾಳವಾಗಿದ್ದು ಸಂಘರ್ಷಗಳ ನಡುವೆ ಪಾತ್ರಗಳ ಪೋಷಣೆ ನಡೆಯುತ್ತದೆ. ವಿಶ್ವಾಮಿತ್ರ ಮಹರ್ಷಿಯು ಹರಿಶ್ಚಂದ್ರನನ್ನು ಹುಸಿಕನನ್ನಾಗಿ ಮಾಡಲು ಎಡೆಬಿಡದೆ ಕಾಡುವುದು, ಸತ್ಯವಂತನಾಗಿ ಉಳಿಯಲು ಹರಿಶ್ಚಂದ್ರ ಹೆಣಗುವುದು ಈ ಪ್ರಸಂಗದಲ್ಲಿ ಋಜುತ್ವದ ತುತ್ತ ತುದಿಯನ್ನು ಕಾಣಬಹುದಾಗಿದೆ ಎಂದರು.
ಪೂರ್ವಜನ್ಮದ ಪುಣ್ಯ: ನಿರ್ಭೀತಿಯೇ ಸತ್ಯ ಹಾಗೂ ಹರನೆಂಬುದೇ ಸತ್ಯ ಎಂಬ ನೀತಿಯನ್ನು ಈ ಕಾವ್ಯದ ಮೂಲಕ ಕಲಿಯಬೇಕಾಗಿದೆ. ಕಂಬನಿಯ ಕಾಲುವೆಯೂ ಆಗಿರುವ ಹರಿಶ್ಚಂದ್ರ ಕಾವ್ಯ ಓದುಗರ ಮನಸೂರೆಗೊಳ್ಳುತ್ತದೆ. ಈ ಕಾವ್ಯದ ಕಥೆಯನ್ನು ಕೇಳುವುದೇ ನಮ್ಮ ಪೂರ್ವಜನ್ಮದ ಪುಣ್ಯ ಎಂದು ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಲಂಕಪ್ಪನವರು ಮಾತನಾಡಿ ಜ್ಞಾನಬುತ್ತಿ ಸತ್ಸಂಗ ಕೇಂದ್ರವು ಜೀವನ ಶಿಕ್ಷಣವನ್ನು ನೀಡುತ್ತಾ ಜ್ಞಾನವನ್ನು ಹಂಚುತ್ತಾ ವ್ಯಕ್ತಿತ್ವವನ್ನು ಬೆಳೆಸುವ ವಿಶಿಷ್ಟ ಸಂಸ್ಥೆಯಾಗಿದೆ. ಸಂಸ್ಕೃತಿ ಹಾಗೂ ಸಂಸ್ಕಾರಯುತ ಸಮಾಜವನ್ನು ಉಳಿಸಿ ಬೆಳೆಸುವಲ್ಲಿ ಈ ಸತ್ಸಂಗ ಕೇಂದ್ರದ ಶ್ರಮ ಶ್ಲಾಘನೀಯ ಎಂದರು.
ಟಿ.ಎಸ್. ರುದ್ರಾಂಬ ಪ್ರಾರ್ಥಿಸಿದರು. ಕಾರ್ಯದರ್ಶಿ ಡಾ. ಬಿ.ಪಿ. ಮಲ್ಲಿಕಾರ್ಜುನಸ್ವಾಮಿ ಸ್ವಾಗತಿಸಿದರು. ನಿವೃತ್ತ ವಿಷಯ ಪರಿವೀಕ್ಷಣಾಧಿಕಾರಿ ಹಾಗೂ ಲೇಖಕರಾದ ಎಂ.ಡಿ. ಶ್ರೀನಿವಾಸ್ ನಿರೂಪಿಸಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

