ತುಮಕೂರು

ವಿಶ್ವ ಜಲದಿನಾಚರಣೆ ಜಾಥಾಗೆ ಚಾಲನೆ

Published On :

ಕ.ಪ್ರ. ವಾರ್ತೆ ತುಮಕೂರು ಮಾ.22
ತುಮಕೂರಿನಲ್ಲಿ ವಿವಿಧ ಕಾಲೇಜುಗಳ ವತಿಯಿಂದ ವಿಶ್ವ ಜಲದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಖ್ಯಾತ ಪರಿಸರವಾದಿ ಸಾಲು ಮರದ ತಿಮ್ಮಕ್ಕನವರು ಈ ಜಲದಿನಾಚರಣೆ ಜಾಥಾಕ್ಕೆ ಚಾಲನೆ ನೀಡಿದರು.
ನೀರಿನ ಮೌಲ್ಯ, ಬಳಕೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ಜಾಥಾ ಹಮ್ಮಿಕೊಳ್ಳಲಾಗಿತ್ತು. ವಿಶ್ವ ಇಂದು ಶುದ್ಧ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದು, ಅಂತರ್ಜಲದ ಪ್ರಮಾಣ ದಿನದಿಂದ, ದಿನಕ್ಕೆ ಕುಗ್ಗುತ್ತಿದೆ.
ಭಾರತದಂತಹ ಕೃಷಿ ಪ್ರಧಾನ ದೇಶದಲ್ಲಿ ರೈತನ ಜೀವನಾಡಿ ನೀರು. ಮುಂದೊಂದು ದಿನ ನೀರಿನ ಹಾಹಾಕಾರದಿಂದ ಮಹಾಯುದ್ಧವೇ ನಡೆದರೂ ಆಶ್ಚರ್ಯವಿಲ್ಲ. ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿದರೆ, ತುಮಕೂರು ಜಿಲ್ಲೆ ಕೂಡ ಈ  ಸ್ಥಿತಿಯಿಂದ ಹೊರತಾಗಿಲ್ಲ.
ಜಿಲ್ಲೆಯಲ್ಲಿ ಜಲಕ್ಷಾಮದ ಭೀತಿ ಹೆಚ್ಚುತ್ತಿದೆ. ಬೇಸಿಗೆಯ ಬಿಸಿಲಿನ ತಾಪ ದಿನೇ-ದಿನೇ ಹೆಚ್ಚುತ್ತಿದ್ದು, ನೀರಿನ ಬಗ್ಗೆ ಯಾರಿಗೂ ಕಾಳಜಿ ಇಲ್ಲವೇನೋ ಎಂಬ ಆತಂಕದ ಪರಿಸ್ಥಿತಿ ಉಂಟಾಗಿದೆ ಎಂದು ಜಾಥಾದಲ್ಲಿ ಪಾಲ್ಗೊಂಡಿದ್ದ ಕಾಲೇಜುಗಳ ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನೀರಿನ ಮೌಲ್ಯ, ಬಳಕೆಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತುಮಕೂರಿನ ಹೇಮಾದ್ರಿ ಇನ್ಸಿಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ಸ್ನಾತಕೋತ್ತರ ವಿಭಾಗದ ನೇತೃತ್ವದಲ್ಲಿ ತುಮಕೂರು ವಿವಿ ಸಮಾಜ ಕಾರ್ಯ ವಿಭಾಗ, ಯೂನಿಯನ್ ಕ್ರಿಶ್ಚಿಯನ್ ಕಾಲೇಜು, ಸುಪ್ಹಾ  ಇನ್ಸಿಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್, ಗುರುಶ್ರೀ ಕಾಲೇಜ್ ಆಫ್ ಕಾಮರ್ಸ್ ಅಂಡ್ ಸೋಷಿಯಲ್ ವರ್ಕ್, ಸರ್ಕಾರಿ ಐಟಿಐ ಕಾಲೇಜು, ರಾಘವೇಂದ್ರ ಐಟಿಐ ಕಾಲೇಜು, ವಿದ್ಯಾವಾಹಿನಿ ಕಾಲೇಜು  ಸೇರಿದಂತೆ ಇತರೆ ಕಾಲೇಜುಗಳ ಸಹಯೋಗದೊಂದಿಗೆ ಈ ಜಲ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಜಾಥಾ ಡಾ. ಶಿವಕುಮಾರಸ್ವಾಮಿಗಳ ವೃತ್ತದಿಂದ ಆರಂಭಗೊಂಡು, ಟೌನ್‌ಹಾಲ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.