ಕ.ಪ್ರ.ವಾರ್ತೆ ತುಮಕೂರು ಮಾ.30
ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಜನರ ಮತ್ತು ಕಾರ್ಮಿಕರ ಸಮಸ್ಯೆಗಳು ಪರಿಹಾರವಾಗಬೇಕಾದರೆ ಜನ ಚಳುವಳಿಯಿಂದ ಮಾತ್ರ ಸಾಧ್ಯ. ಕಾರ್ಮಿಕರು ಜನರನ್ನು ಜಾಗೃತಿಗೊಳಿಸಿ ಜನಚಳುವಳಿಗೆ ಅಣಿಯಾಗಿಸಲು ಮುಂದಾಗಬೇಕೆಂದು ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಕರೆ ನೀಡಿದರು.
ಅವರು ಕೊರಟಗೆರೆ ಪಟ್ಟಣದಲ್ಲಿ ಸಿಐಟಿಯು ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ದೇಶದಲ್ಲಿ ಜನರು ಸಂಕಷ್ಟದ ಸ್ಥಿತಿಯಲ್ಲಿ ಬದುಕುತ್ತಿದ್ದು ಒಂದು ಹನಿ ನೀರಿಗೂ ಪರದಾಡುವಂತಾಗಿದೆ. ಜೊತೆಗೆ ಆಳುವ ಸರ್ಕಾರಗಳು ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದ್ದು ಈ ನಿಟ್ಟಿನಲ್ಲಿ ಸಿಐಟಿಯುವಿನ ಎಲ್ಲಾ ಸದಸ್ಯರು ಜನಸಾಮಾನ್ಯರಲ್ಲಿ ಜನವಿರೋಧಿ ನೀತಿಗಳ ಬಗ್ಗೆ ಜಾಗೃತಿ ಮೂಡಿಸುವಂತಹ ಕೆಲಸ ಮಾಡಬೇಕೆಂದು ತಿಳಿಸಿದರು.
ಗ್ರಾಮಪಂಚಾಯಿತಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಎನ್.ಕೆ. ಸುಬ್ರಹ್ಮಣ್ಯ ಮಾತನಾಡಿ ಗ್ರಾಮಪಂಚಾಯ್ತಿ ಸೇರಿದಂತೆ ಹಲವಾರು ವಿಭಾಗಗಳಲ್ಲಿ ದುಡಿಯುವ ಪ್ರತಿಯೊಬ್ಬರಿಗೂ ಕನಿಷ್ಠ ಹತ್ತುಸಾವಿರ ಕೂಲಿ ಖಾತ್ರಿಯಾದ ಪಿಂಚಣಿಯೊಂದಿಗೆ ಸಿಐಟಿಯು ನಿರಂತರ ಹೋರಾಟ ನಡೆಸುತ್ತಿದ್ದು ಕಾರ್ಮಿಕರು ತಮ್ಮ ಹಕ್ಕುಗಳನ್ನು ಪಡೆಯಲು ಸಂಘಟಿತ ಹೋರಾಟಕ್ಕೆ ಸಜ್ಜುಗೊಳ್ಳಲು ಕರೆ ನೀಡಿದರು.
ಸಿಐಟಿಯು ತಾಲೂಕು ಅಧ್ಯಕ್ಷೆ ಎಸ್.ಎನ್. ವಿಜಯಕುಮಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಶಾಂತಮ್ಮ, ಬೀಡಿ ಕಾರ್ಮಿಕರ ಮುಖಂಡರಾದ ಸೈಯಿದಾಬೇಗಂ, ಅಕ್ಷರದಾಸೋಹ ನೌಕರರ ಸಂಘದ ಅಧ್ಯಕ್ಷೆ ನಾಗರತ್ನಮ್ಮ, ಪಾರಂಪರಿಕ ಕಲ್ಲು ಕುಟ್ಟುವ ಕಾರ್ಮಿಕ ಸಂಘದ ಅಧ್ಯಕ್ಷ ಮಲ್ಲಣ್ಣ, ಉಪಸ್ಥಿತರಿದ್ದರು. ಸಿಐಟಿಯು ತಾಲೂಕು ಕಾರ್ಯದರ್ಶಿ ಎಂ. ನೌಷಾದ್ ಸೆಹಗನ್ ಸ್ವಾಗತಿಸಿ, ವಂದಿಸಿದರು.