ಕುಣಿಗಲ್: ಸಾಮಾನ್ಯವಾಗಿ ಯಾವುದೇ ಚುನಾವಣೆಯಲ್ಲಿ ಚುನಾವಣೆ ಮುಗಿದ ಮೇಲೆ, ಅಭ್ಯರ್ಥಿಗಳ ಗೆಲವಿನ ಲೆಕ್ಕಾಚಾರದ ಮೇಲೆ ಬೆಟ್ಟಿಂಗ್ ನಡೆಯುವುದು ಸಹಜವಾದರೆ, ತಾಲೂಕಿನಲ್ಲಿ ಮಾತ್ರ ಯಾವ ಮುಖಂಡ ಯಾವ ಪಕ್ಷದಿಂದ ಅಧಿಕೃತ ಟಿಕೆಟ್ ಪಡೆಯುತ್ತಾರೆ ಎಂಬ ಲೆಕ್ಕಾಚಾರದ ಮೇಲೆ ಬೆಟ್ಟಿಂಗ್ ಭರಾಟೆ ಜೋರಾಗಿ ನಡೆಯುತ್ತಿರುವುದು ವಿಶೇಷವಾಗಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದಲ್ಲಿನ ಟಿಕೆಟ್ ಗೊಂದಲ ಬೆಟ್ಟಿಂಗ್ದಾರರ ಫೇವರೇಟ್ ಅಗಿದ್ದು, ಜೆಡಿಎಸ್ನಿಂದ ಎಸ್.ಪಿ. ಮುದ್ದುಹನುಮೇಗೌಡರ ಪರ ಒಂದಕ್ಕೆ ಒಂದಾದರೆ, ಮಾಜಿ ಸಚಿವರ ಪರ ಒಂದಕ್ಕೆ ಎರಡಷ್ಟು ನೀಡುವ ಬೆಟ್ಟಿಂಗ್ ನಡೆಯುತ್ತಿದೆ. ಕಾಂಗ್ರೆಸ್ನಲ್ಲಿ ಹಾಲಿ ಶಾಸಕ ಬಿ.ಬಿ.ರಾಮಸ್ವಾಮಿಗೌಡರ ಒಂದಕ್ಕೆ ಒಂದರಷ್ಟಾದರೆ,ಮತ್ತೊರ್ವ ಮುಖಂಡ ರವಿಕಿರಣ್ ಪರವೂ ಒಂದಕ್ಕೆ ಒಂದರಷ್ಟಿದೆ. ಇನ್ನು ಮಾಜಿ ಸಚಿವ ಡಿ.ನಾಗರಾಜಯ್ಯ ಪಕ್ಷದಲ್ಲೆ ಉಳಿಯುತ್ತಾರೋ, ತೊರೆದು ಬೇರೊಂದು ಪಕ್ಷ ಸೇರುತ್ತಾರೋ ಎಂಬ ಲೆಕ್ಕಾಚಾರದ ಬೆಟ್ಟಿಂಗ್ ಆದರೆ, ಒಂದು ವೇಳೆ ಟಿಕೆಟ್ ವಂಚಿತರಾದ ಎಸ್.ಪಿ. ಮುದ್ದುಹನುಮೇಗೌಡ ತಟಸ್ಥರಾಗುತ್ತಾರೆಯೇ ಅಥವಾ ಅಖಾಡಕ್ಕೆ ಇಳಿಯುತ್ತಾರೆಯೆ ಎಂಬ ಲೆಕ್ಕಾಚಾರದ ಬೆಟ್ಟಿಂಗ್ ಸಹ ನಡೆಯುತ್ತಿದೆ. ಮಾಜಿ ಸಚಿವ ವೈ.ಕೆ.ರಾಮಯ್ಯ ಅವರ ಪತ್ನಿ ಅನಸೂಯಮ್ಮ ವೈಕೆಆರ್ ಯಾವ ಪಕ್ಷದಿಂದ ನಿಲ್ಲುತ್ತಾರೆ ಎಂಬ ವಿಷಯವಾಗಿ ಪರ, ವಿರೋಧ ಬೆಟ್ಟಿಂಗ್ ಪ್ರಾರಂಭಗೊಂಡಿದೆ. ವಿವಿಧ ಪಕ್ಷಗಳ ಕೆಳಹಂತದ ಮುಖಂಡರು, ತಮ್ಮ ನಾಯಕರ ಪರ ಸದ್ದಿಲ್ಲದೆ ಪಟ್ಟಣ, ಗ್ರಾಮಾಂತರ ಪ್ರದೇಶ ಎಂಬ ಭೇದಭಾವವಿಲ್ಲದೆ ಬೆಟ್ಟಿಂಗ್ ಕಾರ್ಯದಲ್ಲಿ ತೊಡಗಿದ್ದು, ಸಾವಿರ ರು.ನಿಂದ ಹಿಡಿದು ಲಕ್ಷಾಂತರ ರು.ವರೆಗಿನ ಬೆಟ್ಟಿಂಗ್ ನಡೆಯುತ್ತಿದೆ. ಚುನಾವಣೆ ಮುನ್ನವೆ ಬೆಟ್ಟಿಂಗ್ ಭರಾಟೆ ಜೋರಾಗಿರುವುದು ಈ ಬಾರಿಯ ಚುನಾವಣೆಯ ವಿಶೇಷ.
ಇನ್ನೂ ಪತ್ತೆಯಾಗದ ಭಾರ್ಗವ
ತುಮಕೂರು: ಹಣಕ್ಕಾಗಿ ಪದೇ ಪದೇ ಪ್ರಿಯತಮನ ಪೀಡನೆಯಿಂದ ರೋಸಿ ಹೋಗಿ ಬ್ರೌಸಿಂಗ್ ಸೆಂಟರ್ನ ಒಡತಿ ಸ್ವೀಟಿ ಮರ್ಲಿನ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಖಾಸಗಿ ವಾಹಿನಿಯ ಕ್ಯಾಮೆರಾಮನ್ ಭಾರ್ಗವನನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಇನ್ನೂ ಸಫಲರಾಗಿಲ್ಲ. ಈ ಪ್ರಕರಣ ದಿನೇ ದಿನೇ ವಿಚಿತ್ರ ತಿರುವು ಪಡೆದುಕೊಳ್ಳುತ್ತಿದ್ದು ರಾಜ್ಯದ ಗಮನ ಸೆಳೆದಿದೆ. ಕಳೆದ 27 ರಂದು ಸಂಜೆ ಸ್ವೀಟಿ ಮರ್ಲಿನ್ ತನ್ನ ಸದಾಶಿವನಗರದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಸಂಬಂಧ ಈಕೆಯ ಪೋಷಕರು ಮೃತಳ ಪ್ರಿಯತಮ ಭಾರ್ಗವನ ವಿರುದ್ಧ ದೂರು ನೀಡಿದ್ದರು. ಘಟನೆ ನಡೆದು ನಾಲ್ಕು ದಿನ ಕಳೆದರೂ ಆರೋಪಿಯನ್ನು ಪತ್ತೆ ಮಾಡಲು ಪೊಲೀಸರು ಸಫಲರಾಗಿಲ್ಲ. ಏತನ್ಮಧ್ಯೆ ತಿಲಕ್ ಪಾರ್ಕ್ ಪೊಲೀಸರು ಭಾರ್ಗವನ ಪೋಷಕರನ್ನು ಕರೆಸಿ ಮಾಹಿತಿ ಕಲೆ ಹಾಕಿದ್ದಾರೆ. ಅತಿ ಶೀಘ್ರದಲ್ಲೇ ಭಾರ್ಗವನನ್ನು ಬಂಧಿಸುವುದಾಗಿ ತಿಲಕ್ ಪಾರ್ಕ್ ಪೊಲೀಸರು ತಿಳಿಸಿದ್ದಾರೆ.