ಶಾಸ್ತ್ರಿಗಳ ಅನುಕರಣೀಯ ವ್ಯಕ್ತಿತ್ವ ಇಂದಿಗೂ ಪ್ರೇರಕ

Updated on: 

ಕ.ಪ್ರ. ವಾರ್ತೆ ತುಮಕೂರು ಮಾ.30
ಇಲ್ಲಿನ ನಗೆಮುಗುಳು ಹಾಸ್ಯ ಪತ್ರಿಕೆ ಮತ್ತು ಪೂರ್ಣಿಮಾ ಸಾಹಿತ್ಯ ಮಂದಿರ ಪುಸ್ತಕ ಪ್ರಕಾಶನ ಸಂಸ್ಥೆ ಆಶ್ರಯದಲ್ಲಿ ಆಯೋಜಿಸುತ್ತಿರುವ ಮಾಸಿಕ ಅಧ್ಯಯನ ಗೋಷ್ಠಿಯ 48ನೇ ಕಾರ್ಯಕ್ರಮದಲ್ಲಿ ನೈಜ ಗಾಂಧಿವಾದಿ, ಆದರ್ಶ ಶಿಕ್ಷಕ, ಖ್ಯಾತ ಬರೆಹಗಾರ ದಿ. ಬೆಳೆಗೆರೆ ಕೃಷ್ಣಶಾಸ್ತ್ರಿಗಳ ಸ್ಮರಣೆ ನಡೆಯಿತು.
ಈ ನುಡಿನಮನ ಕಾರ್ಯಕ್ರಮದಲ್ಲಿ ತುಮಕೂರು ನಗರ ಮತ್ತು ಇತರೆಡೆಗಳ ವಿವಿಧ ಕ್ಷೇತ್ರಗಳ ಗಣ್ಯರು ಶ್ರೀ ಕೃಷ್ಣಶಾಸ್ತ್ರಿಗಳ ಬದುಕು-ಬರಹ-ಸೇವೆ-ಸಾಧನೆ ಮತ್ತು ಅವರೊಂದಿಗಿನ ಒಡನಾಟವನ್ನು ಸ್ಮರಿಸಿ ಶಾಸ್ತ್ರಿಗಳ ಅನುಕರಣೀಯ ವ್ಯಕ್ತಿತ್ವ ಲಕ್ಷಾಂತರ ಮಂದಿಗೆ ಇಂದಿಗೂ ಪ್ರೇರಕ ಹಾಗೂ ಆದರ್ಶಪ್ರಾಯವಾಗಿದೆ ಎಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ತಮ್ಮ ಮತ್ತು ಕೃಷ್ಣಮೂರ್ತಿ ಹನೂರು ಅವರ ಸಂಪಾದಕತ್ವದಲ್ಲಿ 1979 ರಲ್ಲಿ ಹೊರತಂದ ಚಿನ್ಮಯ ಬೆಳಗೆರೆ ಕೃಷ್ಣಶಾಸ್ತ್ರಿಗಳ ಸಂಭಾವನಾ ಗ್ರಂಥ ಶಾಸ್ತ್ರಿಗಳ ಬಗ್ಗೆ ಸಮಗ್ರ ಚಿತ್ರಣ ಒದಗಿಸಿದೆ ಎಂದು ಎಂ.ವಿ. ಶ್ರೀನಿವಾಸ್ ವಿವರಿಸಿದರು.
ಶಾಶ್ವತವಲ್ಲ: ಉಪನ್ಯಾಸಕ ನಂದೀಶ್ ಅವರು ಕೃಷ್ಣಶಾಸ್ತ್ರಿಗಳ  ಪ್ರಸಿದ್ಧ ಕೃತಿ ಯೇಗ್ದಾಗೆಲ್ಲಾ ಐತೆ ಪುಸ್ತಕದಲ್ಲಿನ ಸ್ವಾರಸ್ಯಕರ ಘಟನೆಗಳನ್ನು ವಿವರಿಸುತ್ತಾ ಅಹಂಕಾರವೆಂಬುದು ಮನುಷ್ಯನನ್ನು ಮೃಗೀಯ ವರ್ತನೆಗೆ ತಳ್ಳುತ್ತದೆ. ಗರ್ವ ಮತ್ತು ಸ್ವಾರ್ಥವನ್ನು ತ್ಯಜಿಸಿದರೆ ಮಾತ್ರ ಮನುಷ್ಯ ಉತ್ತಮ ಸಮಾಜ ಜೀವಿಯಾಗಲು ಸಾಧ್ಯ. ಸಂಪತ್ತು ಮತ್ತು ಸೌಕರ್ಯಗಳು ತಾತ್ಕಾಲಿಕವಾದವು, ಶಾಶ್ವತವಾದವಲ್ಲ ಎಂಬುದನ್ನು ಕೃತಿಯಲ್ಲಿ ಮನಮುಟ್ಟುವಂತೆ ವಿವರಿಸಿದ್ದಾರೆ. ಈ ಕೃತಿ ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಿಗೂ ಅನುವಾದಗೊಂಡಿದೆ. ಕನ್ನಡದ ಆವೃತ್ತಿ 17 ಮುದ್ರಣಗಳನ್ನು ಕಂಡು ಜನಪ್ರಿಯ ಕೃತಿಯೆನಿಸಿದೆ ಎಂದು ವಿವರಿಸಿದರು.
ದುರದೃಷ್ಟ: ಹಿರಿಯ ಗಾಂಧಿವಾದಿ ಹಾಗೂ ಪ್ರಕೃತಿ ಪ್ರತಿಷ್ಠಾನದ  ಸ್ಥಾಪಕ ಜಿ.ವಿ.ವಿ.ಶಾಸ್ರ್ರಿಅವರು ಕೃಷ್ಣಶಾಸ್ತ್ರಿಗಳು ಇನ್ನೆರಡು ವರ್ಷ ಬದುಕಿದ್ದರೆ ಜೀವನದ ಶತಕ ಬಾರಿಸುತ್ತಿದ್ದರು. ಅವರು ಶತಕ ಬಾರಿಸದಿರುವುದು ನಮ್ಮ ದುರದೃಷ್ಟ ಎಂದರು. ಮುಕುಂದೂರು ಸ್ವಾಮಿಗಳು, ರಮಣ ಮಹರ್ಷಿಗಳು ಮತ್ತು ಗಾಂಧೀಜಿಯವರನ್ನು ನಾವು ನೋಡಿಲ್ಲ. ಇವರಿಂದ ಪ್ರಭಾವಿತರಾಗಿದ್ದ ಕೃಷ್ಣಶಾಸ್ತ್ರಿಗಳು ಇವರ ಆದರ್ಶಗಳ ಮೂರ್ತರೂಪವಾಗಿದ್ದವರು. ಕೃಷ್ಣಶಾಸ್ತ್ರಿಗಳ ಒಡನಾಟದಿಂದ ಉಲ್ಲೇಖಿತ ಮಹಾತ್ಮರು ನೋಡಿದಂತಾಯಿತು ಎಂದರು.
ಕೃಷ್ಣಶಾಸ್ತ್ರಿಗಳು ಮತ್ತು ತುಮಕೂರಿನ ಸಂಬಂಧವನ್ನು ಎಳೆ ಎಳೆಯಾಗಿ ವಿವರಿಸಿದರು. ಕೃಷ್ಣಶಾಸ್ತ್ರಿಗಳ ಯೇಗ್ದಾಗೆಲ್ಲ ಐತೆ ಕೃತಿಯ ಮಾರಾಟದಿಂದ ಬಂದ ಹಣದಿಂದ ಶಾರದಾ ವಿದ್ಯಾಮಂದಿರವನ್ನು ಬೃಹತ್ ಸಂಸ್ಥೆಯಾಗಿ ಬೆಳೆಸಲು ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ, ಶಿಕ್ಷಣ ನೀಡಲು ಸಾಧ್ಯವಾದುದು ಕೃಷ್ಣಶಾಸ್ತ್ರಿಗಳ ಬಹುದೊಡ್ಡ ಸಾಧನೆ ಎಂದು ಜಿ.ವಿ.ವಿ.ಶಾಸ್ತ್ರಿ ವಿವರಿಸಿದರು.
ಕಾರ್ಯಕ್ರಮದ ಆಯೋಜಕರಾದ ಹಿರಿಯ  ಪತ್ರಕರ್ತ ಹೆಚ್.ಎಸ್.ರಾಮಣ್ಣ ಅವರು ಕೃಷ್ಣಶಾಸ್ತ್ರಿಗಳು ತಮ್ಮ ಮನೆಗೆ ಬಂದದ್ದನ್ನು ಆ ಸಂದರ್ಭದಲ್ಲಿ ಹಲವು ಸ್ನೇಹಿತರುಗಳೊಡನೆ ಶಾಸ್ತ್ರಿಗಳು ತಮ್ಮ ಅಪಾರ ನೆನಪುಗಳನ್ನು ಹಂಚಿಕೊಂಡಿದ್ದನ್ನು  ಈ ಭೇಟಿಯೇ ನಂತರ ತಮಗೆ ಬೆಳದಿಂಗಳ ಕೂಟ ಮಾಸಿಕ ಕಾರ್ಯಕ್ರಮ ಏರ್ಪಾಡಿಗೆ ಪ್ರೇರಣೆಯಾದುದನ್ನು ಸ್ಮರಿಸಿದರು.
ಅಪಾರ ಜ್ಞಾನ: ನಿವೃತ್ತ ಅಧಿಕಾರಿ ಟಿ.ಎನ್. ವಾಸುದೇವ ಆಚಾರ್ಯ ಅವರು ಕೃಷ್ಣಶಾಸ್ತ್ರಿಗಳು ತಮ್ಮ ಮನೆಗೆ ಭೇಟಿ ನೀಡಿದ್ದನ್ನು ಸ್ಮರಿಸಿ ಶಾಸ್ತ್ರಿಗಳ ಆಧ್ಯಾತ್ಮಿಕ ಚಿಂತನೆ ಮತ್ತು ಅಪಾರ ಜ್ಞಾನದ ಬಗ್ಗೆ ವಿವರಿಸಿದರು.
ನಿವೃತ್ತ ಪ್ರಾಂಶುಪಾಲ ಕೆ.ಜಿ. ಬಸವಲಿಂಗಪ್ಪ ಅವರು ಕೃಷ್ಣಶಾಸ್ತ್ರಿಗಳ ಒಡನಾಟದ ನೆನಪುಗಳನ್ನು  ಸ್ಮರಿಸುತ್ತಾ ಅವರ ಸರಳತೆ ಮತ್ತು ಅಗಾಧ ಜ್ಞಾಪಕಶಕ್ತಿಯನ್ನು ಉಲ್ಲೇಖಿಸಿದರು.
ನಿವೃತ್ತ ಬ್ಯಾಂಕ್ ಅಧಿಕಾರಿ ಕೆ. ಪಾಂಡುರಂಗ ಶಾನುಭೋಗ್ ಅವರು ತತ್ವಪದಗಳನ್ನು ಹಾಡಿ ಶಾಸ್ತ್ರಿಗಳಿಗೆ  ನುಡಿನಮನ ಸಲ್ಲಿಸಿದರು.
ನುಡಿನಮನ ಕಾರ್ಯಕ್ರಮದಲ್ಲಿ ಸಿಪಿಐ ಮುಖಂಡ ಟಿ.ಆರ್. ರೇವಣ್ಣ, ಡಾ. ರಾಜಶೇಖರ್, ಕಿರುತೆರೆ ಕಲಾವಿದ ಎಂ.ಎಸ್. ರಮಾನಂದ, ಚಿಂತನ ಬಳಗದ ಕೆ.ಪಿ. ಲಕ್ಷ್ಮೀಕಾಂತರಾಜೇ ಅರಸ್ ಅವರನ್ನೊಳಗೊಂಡಂತೆ ಕೃಷ್ಣಶಾಸ್ತ್ರಿಗಳ ತುಮಕೂರಿನ ಅಪಾರ ಅಭಿಮಾನಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com