ನಾನ್ಯಾರೆಂದು ಚುನಾವಣೆ ಬಳಿಕ ಉತ್ತರ: ಸಾ. ಲಿಂಗಯ್ಯ
ಶಿರಾ: ತಾಲೂಕಿನ ಮಣ್ಣಿನಲ್ಲಿ ಹುಟ್ಟಿ ಬೆಳೆದ ನನ್ನನ್ನು ಯಾರು ಎಂದು ಕೇಳುವ ಮೂಲಕ ಟಿ.ಬಿ. ಜಯಚಂದ್ರ ಅವರು ವಾಲ್ಮೀಕಿ ಮತ್ತು ಹಿಂದುಳಿದ ವರ್ಗಕ್ಕೆ ಅವಮಾನ ಮಾಡಿದ್ದಾರೆ ಎಂದು ಮಾಜಿ ಶಾಸಕ ಸಾ.ಲಿಂಗಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಅವರು ಪಟ್ಟಣದ ತಮ್ಮ ನಿವಾಸದಲ್ಲಿ ಕೆರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಇಲ್ಲಿಯೇ ಹುಟ್ಟಿ ಬೆಳೆದ ಈ ಮಣ್ಣಿನವನಾದ ಹಾಗೂ ಮಾಜಿ ಶಾಸಕನಾದ ನನ್ನನ್ನು ಯಾರು ಎಂದು ಕೇಳುವುದು ಚಿಕ್ಕನಾಯಕನಹಳ್ಳಿಯಿಂದ ಶಿರಾಕ್ಕೆ ವಲಸೆ ಬಂದ ಶಾಸಕ ಟಿ.ಬಿ.ಜಯಚಂದ್ರ ಅವರ ಉದ್ಧಟತನ ತೋರಿಸುತ್ತಿದ್ದು, ಚುನಾವಣೆಯ ನಂತರ ನಾನು ಯಾರು ಎಂಬುದು ಅವರಿಗೆ ಗೊತ್ತಾಗಲಿದೆ ಎಂದರು.
ಸ್ವಂತ ಅಭಿವೃದ್ಧಿಕೋರ: ಸಾ.ಲಿಂಗಯ್ಯ ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಜಯಚಂದ್ರ ಕೇಳುತ್ತಾರೆ. ಆದರೆ ಅವರಿಗೆ ಗೊತ್ತಿಲ್ಲ, ಅಭಿವೃದ್ಧಿಯ ವಿಚಾರದಲ್ಲಿ ನನ್ನನ್ನು ಯಾರೂ ಮೀರಿಸಲು ಸಾಧ್ಯವಿಲ್ಲ ಎಂದು. ಜಾತಿ ಭೇದವಿಲ್ಲದೆ ಎಲ್ಲ ವರ್ಗದವರಿಗೂ ನೆರವಾಗಿದ್ದೇನೆ. ಹಿಂದಿನ ಚುನಾವಣಾ ಸಂದರ್ಭದಲ್ಲಿ ಅವರು ಘೋಷಿಸಿಕೊಂಡಿದ್ದ ಚರ ಮತ್ತು ಸ್ಥಿರ ಆಸ್ತಿ ಮೊತ್ತ 24 ಕೋಟಿಯಷ್ಟಿದ್ದರೆ ಈ ಬಾರಿ 48 ಕೋಟಿಗೂ ಹೆಚ್ಚು ಆಸ್ತಿ ಘೋಷಿಸಿಕೊಂಡಿದ್ದಾರೆ. ಇದು ಅವರ ಸ್ವಂತ ಅಭಿವೃದ್ಧಿಯನ್ನು ತೋರಿಸುತ್ತದೆ ಎಂದು ಟೀಕಿಸಿದರು.
ಕ್ಷೇತ್ರದಲ್ಲಿ 850 ಕೋಟಿಗೂ ಅಧಿಕ ಅನುದಾನ ತಂದಿದ್ದೇನೆ ಎಂದು ಪುಸ್ತಕ ಮುದ್ರಿಸಿ ಹಂಚುತ್ತಿದ್ದಾರೆ. ಆದರೆ ಅದೇ ಪುಸ್ತಕದಲ್ಲಿ ಹುಣಸೆಹಳ್ಳಿ ಮಸೀದಿಗೆ 12 ಲಕ್ಷ ಅನುದಾನ ನೀಡಲಾಗಿದೆ ಎಂದು ಮುದ್ರಿಸಲಾಗಿದೆ. ಆದರೆ 1 ರುಪಾಯಿ ಕೂಡ ನೀಡಿಲ್ಲ ಎಂದರು.
ಸತ್ಯನಾರಾಯಣ ಸಜ್ಜನ: ತಾಲೂಕಿನಲ್ಲಿ ತೃತೀಯ ಶಕ್ತಿ ಹುಟ್ಟು ಹಾಕಬೇಕೆಂದಿದ್ದೆ. ಆದರೆ ಈಗಿನ ಚುನಾವಣೆಗೆ ಸಾಕಷ್ಟು ಹಣ ಬೇಕಾಗುತ್ತದೆ. ಅದು ನಮ್ಮಿಂದ ಸಾಧ್ಯವಿಲ್ಲ ಎಂದು ಸುಮ್ಮನಾಗಿದ್ದು, ಈಗ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ಬಿ.ಸತ್ಯನಾರಾಯಣ ಒಬ್ಬ ಸರಳ ಸಜ್ಜನಿಕೆಯ ಪ್ರಾಮಾಣಿಕ ವ್ಯಕ್ತಿಯಾಗಿರುವುದರಿಂದ ಅವರಿಗೆ ಬೆಂಬಲ ಸೂಚಿಸಿದ್ದು, ಅವರ ಪರ ಪ್ರಚಾರ ಕೈಗೊಂಡಿದ್ದೇನೆ ಎಂದರು.
ನಾನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಕೆಲವು ಕಡೆ ಹೇಳುವ ಜಯಚಂದ್ರ ಕುರುಬ ಸಮಾಜದವರ ಬಳಿ ಮತ ಕೇಳುವಾಗ ನನಗೆ ಮತ ನೀಡಿದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳುತ್ತಾರೆ. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕನಾಗುವುದಕ್ಕೆ ತೊಡರುಗಾಲು ಆಗಿದ್ದ ಜಯಚಂದ್ರ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಒಪ್ಪುತ್ತಾರೆಯೇ ಎಂದು ಪ್ರಶ್ನಿಸಿದರು.
ನಾನು ಚಿಕ್ಕನಾಯಕನಹಳ್ಳಿಯಿಂದ ಪಕ್ಷೇತರವಾಗಿ ಸ್ಪರ್ಧಿಸುತ್ತೇನೆ. ಅದೇ ಭಾಗದವರಾದ ಅವರು ಕಾಂಗ್ರೆಸ್ನಿಂದಲೇ ಸ್ಪರ್ಧಿಸಲಿ. ನನಗಿಂತ ಹೆಚ್ಚು ಮತ ಪಡೆದು ತೋರಿಸಲಿ ಎಂದು ಸವಾಲು ಹಾಕಿದ ಸಾಲಿಂಗಯ್ಯ ಅವರು, ವಾಲ್ಮೀಕಿ ಸಮಾಜದವರು ಜಯಚಂದ್ರರ ವಿರುದ್ಧ ಮತ ಚಲಾಯಿಸುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಚಂಗಾವರ ಶಿವು ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

