ಕುಲಪತಿ ಶರ್ಮಾಗೆ ಹೃದಯಸ್ಪರ್ಶಿ ಬೀಳ್ಕೊಡುಗೆ
ಕ.ಪ್ರ.ವಾರ್ತೆ ತುಮಕೂರು ಮೇ 3
ಏನನ್ನಾದರೂ ಒಳ್ಳೆಯದು ಮಾಡಬೇಕೆಂಬ ಸದುದ್ದೇಶದಿಂದ ನಾಲ್ಕು ವರ್ಷಗಳ ಹಿಂದೆ ತುಮಕೂರು ವಿಶ್ವವಿದ್ಯಾನಿಲಯ ಪ್ರವೇಶಿಸಿದೆ. ಈಗ ಅತ್ಯಂತ ಸಂತೃಪ್ತಿಯಿಂದ ಹಿಂತಿರುಗುತ್ತಿದ್ದೇನೆ ಎಂದು ತುಮಕೂರು ವಿವಿ ನಿರ್ಗಮಿತ ಕುಲಪತಿ ಪ್ರೊ.ಎಸ್. ಸಿ.ಶರ್ಮಾ ಹೇಳಿದರು.
ಕುಲಪತಿಯಾಗಿ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಹೃದಯಸ್ಪರ್ಶಿ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಎಂತಹ ಕಷ್ಟಗಳೇ ಎದುರಾದರೂ ಖಾಲಿ ಮನಸ್ಸಿನೊಂದಿಗೆ ಇಲ್ಲಿಂದ ಹಿಂತಿರುಗಬಾರದು ಎಂಬ ದೃಢ ನಿಶ್ಚಯ ಮಾಡಿಕೊಂಡಿದ್ದೆ. ಇದೀಗ ವಿಶ್ವವಿದ್ಯಾನಿಲಯಕ್ಕಾಗಿ ಒಂದಿಷ್ಟು ಅಳಿಲುಸೇವೆ ಸಲ್ಲಿಸಿದ ಸಂತೃಪ್ತ ಮನಸ್ಥಿತಿಯೊಂದಿಗೆ ಮರಳುತ್ತಿದ್ದೇನೆ ಎಂದರು.
ತಮ್ಮ ಅಧಿಕಾರಾವಧಿಯ ಆರಂಭದಿಂದಲೂ ಎದುರಿಸಿದ ಅಡೆತಡೆ ಆತಂಕಗಳನ್ನು ಮೆಲುಕು ಹಾಕಿದ ಪ್ರೊ.ಶರ್ಮಾ, ಅಡ್ಡಿ ಆತಂಕಗಳು ನನ್ನನ್ನು ಇನ್ನಷ್ಟು ಗಟ್ಟಿಗೊಳಿಸಿದವೇ ವಿನಾ ಎದೆಗುಂದುವಂತೆ ಮಾಡಲಿಲ್ಲ. ಕಷ್ಟಗಳ ಸರಮಾಲೆಯೊಂದಿಗೆ ಸಾಕಷ್ಟು ಜೀವನಾನುಭವಗಳನ್ನು ಪಡೆದುಕೊಂಡೆ. ಇದಕ್ಕಾಗಿ ವಿಷಾದವೇನೂ ಇಲ್ಲ ಎಂದರು.
ಬೋಧಕ-ಬೋಧಕೇತರರ ನೇಮಕಾತಿಯಿಂದ ತೊಡಗಿ ಪ್ರತಿಯೊಂದು ಹಂತದಲ್ಲೂ ಸಾಲು ಸಾಲು ವಿಘ್ನಗಳು ಎದುರಾದವು. ಕೇವಲ ಒಂದೂವರೆ ವರ್ಷದಲ್ಲಿ 76 ಕೋರ್ಟು ಕೇಸುಗಳನ್ನು ಎದುರಿಸಬೇಕಾಯಿತು.ಆದರೆ, ಎಲ್ಲ ಸಮಸ್ಯೆಗಳೂ ಒಂದೊಂದಾಗಿಯೇ ಪರಿಹಾರವಾಗುತ್ತಾ ಬಂದವು. ಅಧಿಕಾರಾವಧಿಯುದ್ದಕ್ಕೂ ತನಗೆ ಸಮಭುಜರಾಗಿ ನಿಂತ ಕುಲಸಚಿವರು, ಆಡಳಿತ ಸಿಬ್ಬಂದಿ ಹಾಗೂ ಅಧ್ಯಾಪಕರನ್ನು ಮಾತ್ರ ಎಂದಿಗೂ ಮರೆಯಲಾರೆ ಎಂದರು.
ಇದೇ ಸಂದರ್ಭ ಮಾತನಾಡಿದ ಕುಲಸಚಿವ ಪ್ರೊ. ಡಿ. ಶಿವಲಿಂಗಯ್ಯ, ತಾವು ಹಾಗೂ ಕುಲಪತಿ ಕೊನೆಯವರೆಗೂ ಯಾವುದೇ ಮನಸ್ತಾಪಗಳಿಲ್ಲದೆ ಅಣ್ಣ-ತಮ್ಮಂದಿರಂತೆ ವಿಶ್ವವಿದ್ಯಾನಿಲಯದ ಏಳಿಗೆಗೆ ಶ್ರಮಿಸಿದ್ದೇವೆ ಎಂದು ಸ್ಮರಿಸಿಕೊಂಡರು.
ಮೂಲ ಸೌಕರ್ಯಗಳ ಕೊರತೆ, ಆಡಳಿತದ ಅವ್ಯವಸ್ಥೆ, ಕಾಯಂ ಸಿಬ್ಬಂದಿ ಕೊರತೆ, ನಿರಂತರ ಪ್ರತಿಭಟನೆ, ಕೋರ್ಟು ವ್ಯಾಜ್ಯಗಳು ತಾವು ಕುಲಸಚಿವರಾಗಿ ಬಂದ ಆರಂಭದ ದಿನಗಳಲ್ಲಿ ಕಂಗೆಡಿಸಿದ್ದು ನಿಜ. ಆದರೆ ಪ್ರೊ.ಶರ್ಮಾ ಅವರ ಜತೆಗಿನ ಒಡನಾಟದಿಂದ ಎಲ್ಲ ಆತಂಕಗಳೂ ದೂರಾದವು. ಅವರ ಜೊತೆ ಕೆಲಸ ಮಾಡುವುದರಲ್ಲಿ ವಿಶೇಷ ಸಂತೃಪ್ತಿಯಿದೆ ಎಂದರು.
ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಡಾ. ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಕೋಮಾದಲ್ಲಿದ್ದ ತುಮಕೂರು ವಿವಿಯನ್ನು ಮೇಲೆತ್ತಿರುವ ಶರ್ಮಾ ತಮ್ಮ ಕರ್ತೃತ್ವ ಶಕ್ತಿಯಿಂದ ತುಮಕೂರಿನಲ್ಲೊಂದು ಸಾರ್ವಕಾಲಿಕ ಗುರುತು ಮೂಡಿಸಿದ್ದಾರೆ ಎಂದರು.
ಇದೆ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯದ ಪರವಾಗಿ ಪ್ರೊ.ಎಸ್.ಸಿ. ಶರ್ಮಾ ಹಾಗೂ ಅವರ ಪತ್ನಿ ಡಾ.ಅಹಲ್ಯಾ ಶರ್ಮಾ ಅವರನ್ನು ಗೌರವಿಸಲಾಯಿತು. ಇದೇ ಸಂದರ್ಭ ವಿಶ್ವವಿದ್ಯಾನಿಲಯದ ಪ್ರಸಾರಾಂಗದ ನಿರ್ದೇಶಕ ಡಾ.ನಿತ್ಯಾನಂದ ಬಿ. ಶೆಟ್ಟಿ ಸಂಪಾದಿಸಿದ ಅಭಿನಂದನಾ ಗ್ರಂಥ 'ದಕ್ಷ' ಬಿಡುಗಡೆ ಮಾಡಲಾಯಿತು.
ಸಿಂಡಿಕೇಟ್ ಸದಸ್ಯ ಪ್ರೊ.ಕೃ.ನರಹರಿ ಹಾಗೂ ಶೈಕ್ಷಣಿಕ ಪರಿಷತ್ ಸದಸ್ಯ ಡಾ.ಜಯರಾಮರಾವ್ ಉಪಸ್ಥಿತರಿದ್ದರು.
ವಿವಿ ಸ್ನಾತಕೋತ್ತರ ವಿಭಾಗಗಳ ನಿರ್ದೇಶಕ ಹಾಗೂ ಕಲಾ ಕಾಲೇಜು ಪ್ರಾಂಶುಪಾಲ ಡಾ.ಎಂ.ಜಯರಾಮು, ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಎಚ್.ವೈ.ಈಶ್ವರ್ಮಾತನಾಡಿದರು. ಅಭಿನಂದನಾ ಸಮಿತಿ ಅಧ್ಯಕ್ಷ ಎಚ್.ವಿ.ಚಂದ್ರಶೇಖರ್ ಸ್ವಾಗತಿಸಿದರು. ಕುಲಸಚಿವ (ಪರೀಕ್ಷಾಂಗ) ಎನ್.ಲಕ್ಷ್ಮೀಕಾಂತ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

