ತುಮಕೂರು

ಪಕ್ಷೇತರ ಶಾಸಕರಿಂದಲೇ ಕ್ಷೇತ್ರದ ಅಭಿವೃಧಿ

Published On :

ಕ.ಪ್ರ. ವಾರ್ತೆ   ತುರುವೇಕೆರೆ   ಮೇ 3
ನಾನು ಪಕ್ಷೇತರ ಅಭ್ಯರ್ಥಿ, ಸರ್ವ ಪಕ್ಷಗಳಿಗೆ ಬೇಕಾದವನು. ನನ್ನನ್ನು ಮತದಾರ ಪ್ರಭುಗಳು ಈ ಕ್ಷೇತ್ರದ ಶಾಸಕನನ್ನಾಗಿ ಆಯ್ಕೆ ಮಾಡಿದರೆ ಕ್ಷೇತ್ರದ ಸರ್ವಾಂಗೀಣ ಅಭಿವೃಧ್ಧಿಗೆ ಕಂಕಣಬದ್ಧನಾಗಿರುತ್ತೇನೆ ಎಂದು ಪಕ್ಷೇತರ ಅಭ್ಯರ್ಥಿ ಎಚ್.ಮಹೇಶ್ ಹೇಳಿದರು.
ಮತಯಾಚನೆ ವೇಳೆ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ನಾನು ಗೆದ್ದು ಬಂದರೆ, ನೀರಾವರಿಗೆ ಆದ್ಯತೆ ನೀಡುತ್ತೇನೆ. ತೆಂಗು ಹಾಗೂ ಅಡಿಕೆಗೆ ಸೂಕ್ತ ಬೆಲೆ ನೀಡುವಂತೆ ಹೋರಾಟ ಮಾಡುತ್ತೇನೆ. ಈ ಬಾರಿಯ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬಾರದು. ಯಥಾ ಪ್ರಕಾರ ಸರ್ಕಾರ ರಚನೆ ವೇಳೆ ಪಕ್ಷೇತರ ಅಭ್ಯರ್ಥಿಗಳ ಮೊರೆ ಹೋಗುವುದು ಸಹಜ. ಆಗ ಈ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗುವ ನನಗೆ ಸಚಿವ ಸ್ಥಾನ ಸಿಕ್ಕರೂ ಆಶ್ಚರ್ಯವಿಲ್ಲ. ಕ್ಷೇತ್ರದ ಅಭಿವೃಧ್ಧಿಗೆ ಒತ್ತು ನೀಡುವ ಮೂಲಕ ತಮ್ಮೆಲ್ಲರ ಋಣ ತೀರಿಸುವುದಾಗಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿ ಎಚ್.ಮಹೇಶ್ ಹೇಳಿದರು.  ಯಾವುದೇ ಪಕ್ಷದಿಂದ ಗೆದ್ದು ಬಂದಲ್ಲಿ ಪಕ್ಷದ ಹಿಡಿತವಿರುತ್ತದೆ. ಕ್ಷೇತ್ರದ ಅಭಿವೃಧ್ಧಿಗೆ ಒತ್ತಡ ತರಲು ಸಾಧ್ಯವಿಲ್ಲ. ಸ್ವತಂತ್ರ ನಿರ್ಣಯ ತೆಗೆದುಕೊಳ್ಳಲೂ ಆಗುವುದಿಲ್ಲ. ಪಕ್ಷದ ಆದೇಶದನ್ವಯ ನಡೆದುಕೊಳ್ಳಬೇಕು. ಹಾಗಾಗಿ ಕ್ಷೇತ್ರದ ಅಭಿವೃಧ್ಧಿ ಸಾಧ್ಯವಾಗುವುದಿಲ್ಲ ಎಂದು ಭಾವಿಸಿಯೇ ತಾವು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದಾಗಿ ಹೇಳಿದರು. ತಾವು ವೀರಶೈವ ಸಮುದಾಯಕ್ಕೆ ಸೇರಿದವರಾದರೂ ತಮಗೆ ಎಲ್ಲಾ ಸಮುದಾಯದ ಜನರ ಸಹಕಾರವಿದೆ. ಕ್ಷೇತ್ರದಲ್ಲಿ 2 ನೇ ಅತಿದೊಡ್ಡ ಸಂಖ್ಯೆಯಲ್ಲಿರುವ ವೀರಶೈವ ಜನಾಂಗಕ್ಕೆ ರಾಜಕೀಯವಾಗಿ ಯಾವುದೇ ಪಕ್ಷಗಳು ಅವಕಾಶ ನೀಡದೇ ಇರುವ ಕಾರಣ, ಎಲ್ಲಾ ಸಮುದಾಯದ ಜನರು ನಿರ್ಲಕ್ಷಕ್ಕೆ ಒಳಗಾಗಿರುವ ತಮ್ಮ ಸಮುದಾಯಕ್ಕೆ ಪಕ್ಷಾತೀತವಾಗಿ ಬೆಂಬಲಿಸುವರು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪಟ್ಟಣ ಹಾಗೂ ಅಕ್ಕಪಕ್ಕದ ಗ್ರಾಮಗಳಲ್ಲಿ ಎಚ್.ಮಹೇಶ್, ಪತ್ನಿ ಸುಕನ್ಯಾರವರೊಂದಿಗೆ ಮತಯಾಚನೆ ಮಾಡಿದರು. ಮುಖಂಡರಾದ ಜಯಪ್ರಕಾಶ್, ರಾಘದೇವನಹಳ್ಳಿ ಸುರೇಶ್ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.