ಮತದಾನಕ್ಕೆ ತೆರೆ: ಅಭ್ಯರ್ಥಿಗಳ ಚಿತ್ತ 8 ರತ್ತ
ಕ.ಪ್ರ.ವಾರ್ತೆ ತುಮಕೂರು ಮೇ 5
ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ಚುನಾವಣಾ ಪ್ರಕ್ರಿಯೆಗೆ ಭಾನುವಾರ ಮತದಾನ ನಡೆಯುವ ಮೂಲಕ ತೆರೆಬಿದ್ದಿದೆ.
ಈಗ ಎಲ್ಲರ ಚಿತ್ತ ಮೇ 8 ರ ಫಲಿತಾಂಶ ದತ್ತ ನೆಟ್ಟಿದೆ. ಯಾರಿಗೆ ಗೆಲವು, ಯಾರಿಗೆ ಸೋಲು, ಯಾರು ಎಷ್ಟು ಅಂತರದಲ್ಲಿ ಗೆಲ್ಲುತ್ತಾರೆ, ಯಾವ ಪಕ್ಷಕ್ಕೆ ಹೆಚ್ಚು ಸೀಟು ಲಭಿಸುತ್ತದೆ ಎಂಬ ಚರ್ಚೆ ಈಗಾಗಲೇ ಆರಂಭವಾಗಿದೆ. ತುಮಕೂರು ನಗರ ಹಾಗೂ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಈ ಬಾರಿ ಮತದಾರರು ಅತ್ಯುತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.
ಕೊರಟಗೆರೆ ಮೀಸಲು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೆಳಧರ, ಜಟ್ಟಿ ಅಗ್ರಹಾರ, ಹೊನ್ನಾರನಹಳ್ಳಿ, ಹೊಳವನಹಳ್ಳಿ ಮುಂತಾದ ಕಡೆ ಜನ ಸ್ವಯಂಪ್ರೇರಿತರಾಗಿ ಸರತಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸಿದರು.
ಊರ ಹೊರಗೆ, ಮತಗಟ್ಟೆ ಬಳಿ, ಹೊಟೇಲ್, ಕೈಮರದ ಸುತ್ತಮುತ್ತ ಜನ ಚುನಾವಣೆ ಬಗ್ಗೆ ಚರ್ಚಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬೆಳಗ್ಗೆಯಿಂದ ಆರಂಭವಾಗಿ ಮತದಾನ ಮುಗಿದ ಸಂಜೆಯವರೆಗೂ ಮತಗಟ್ಟೆ ಹಾಗೂ ಗ್ರಾಮದಲ್ಲೆಲ್ಲಾ ಚುನಾವಣೆ ಬಗ್ಗೆಯೇ ಮಾತುಕತೆ ಇತ್ತು.
ವಯೋವೃದ್ಧರಿಂದ: ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೂ ಇದೇ ದೃಶ್ಯ ಕಾಣುತ್ತಿತ್ತು. ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗೂಳೂರು, ಹೆಬ್ಬೂರಿನಲ್ಲೂ ಕೂಡ ವಯೋವೃದ್ಧರು ಮತಗಟ್ಟೆ ಆಗಮಿಸಿ ಮತ ಚಲಾಯಿಸಿದ್ದು ವಿಶೇಷ. ಹಾಗೆಯೇ ತುಮಕೂರು ನಗರದ ಗಾಂಧಿನಗರ, ಹೆಗಡೆ ಕಾಲೋನಿ, ನಜರಾಬಾದ್, ಎಸ್ಐಟಿ, ಗೋಕುಲ, ಕ್ಯಾತ್ಸಂದ್ರ, ಸೋಮೇಶ್ವರಪುರಂ, ಕೋತಿತೋಪಿನಲ್ಲೂ ಕೂಡ ಜನತೆ ಉತ್ಸಾಹದಿಂದ ಮತ ಚಲಾಯಿಸಿದರು. ನಜರಾಬಾದ್ ಸೇರಿದಂತೆ ಹಲವು ಭಾಗದಲ್ಲಿ ಮಹಿಳೆಯರು ದೊಡ್ಡ ಮಟ್ಟದಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದು ವಿಶೇಷ. ಯಾವ ಲೋಪವೂ ಆಗದಂತೆ ಜಿಲ್ಲಾಡಳಿತ ಈ ಬಾರಿ ಚುನಾವಣೆಯನ್ನು ನಿರ್ವಹಿಸಿತ್ತು. ಎಲ್ಲೋ ಒಂದೆರೆಡು ಕಡೆ ಮಾತಿನ ಚಕಮಕಿ ಬಿಟ್ಟರೆ ಮಿಕ್ಕ ಕಡೆಯಲ್ಲೆಲ್ಲಾ ಶಾಂತಿಯುತ ಮತದಾನವಾಗಿದ್ದು ಈ ಬಾರಿಯ ವಿಶೇಷ. ಹಲವು ಕಡೆ ಅಭ್ಯರ್ಥಿ ಪರ ಅಭಿಮಾನಿಗಳು ಆಯಾ ಪಕ್ಷದ ಕಾರ್ಯಕರ್ತರು ಮತದಾರರ ಕೊನೆ ಕ್ಷಣದ ಮನವೊಲಿಕೆಗೆ ಯತ್ನಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ತೆರೆ ಬಿತ್ತು: ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ಚುನಾವಣಾ ಪ್ರಕ್ರಿಯಿಗೆ ಈಗ ಸಂಪೂರ್ಣವಾಗಿ ತೆರೆ ಬಿದ್ದಿದೆ. ಇನ್ನೇನಿದ್ದರೂ ಯಾರಿಗೆ ಜಯ ಸಿಗುತ್ತದೆ ಎಂಬ ಕುತೂಹಲ ತಣಿಯಬೇಕಾದರೆ ಮೇ 8 ರವರೆಗೂ ಕಾಯಬೇಕು.
ಮತದಾನ ಆಗಿ ಮಧ್ಯಾಹ್ನ ಕಳೆಯುತ್ತಿದ್ದಂತೆಯೇ ಯಾವ ಅಭ್ಯರ್ಥಿ ಪರ ಮತದಾರರ ಒಲವಿದೆ ಎಂಬ ಚರ್ಚೆ ಆರಂಭವಾಗಿತ್ತು. ಕೆಲವರಂತೂ ಯಾರಿಗೆ ಮತ ಹಾಕಿದ್ದೀರ ಎಂದು ಬಹಿರಂಗವಾಗಿಯೇ ಕೇಳುತ್ತಿದ್ದ ದೃಶ್ಯ ಕೂಡ ಸಾಮಾನ್ಯವಾಗಿತ್ತು. ತುಮಕೂರು ನಗರ ಸೇರಿದಂತೆ ಜಿಲ್ಲೆಯ ಎಲ್ಲಾ 11 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆಯಿಂದ ಚುರುಕಿನ ಮತದಾನ ಆಗಿದ್ದು ವಿಶೇಷ.
ವಿಶೇಷ: ಮೊದಲ ಬಾರಿಗೆ ಮತದಾನ ಹಕ್ಕು ಪಡೆದ ಯುವಕ, ಯುವತಿಯರು ಅತ್ಯುತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು ಈ ಬಾರಿಯ ವಿಶೇಷ. ಹಾಗೆಯೇ ವಯೋವೃದ್ಧರು, ಮಹಿಳೆಯರು ಕೂಡ ದೊಡ್ಡ ಮಟ್ಟದಲ್ಲಿ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾದಾಗ ಮಂದಗತಿಯಲ್ಲಿ ಮತದಾನ ನಡೆಯಿತು. 10 ಗಂಟೆಯ ನಂತರ ಚೇತರಿಕೆ ಕಂಡು ಬಂತು. ಮಧ್ಯಾಹ್ನದೊಳಗೆ ದೊಡ್ಡ ಮಟ್ಟದಲ್ಲೇ ಮತದಾನ ಪ್ರಕ್ರಿಯೆ ನಡೆದದ್ದು ವಿಶೇಷ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

