ಶಿರಾ: ಕ್ಷೇತ್ರದಲ್ಲಿ ಬೆಟ್ಟಿಂಗ್ ಬಲು ಜೋರು
ಕ.ಪ್ರ. ವಾರ್ತೆ ಶಿರಾ ಮೇ 6
ಈಗ ಚುನಾವಣೆ ಮುಗಿದು ಕ್ಷೇತ್ರದಲ್ಲಿ ಬೆಟ್ಟಿಂಗ್ ಕಾಲ ಶುರುವಾಗಿದೆ. ಜೆಡಿಎಸ್ ಗೆಲ್ಲುತ್ತದೆ ಎಂದು ಕೆಲವರು ಕಾಂಗ್ರೆಸ್ ಗೆಲ್ಲುತ್ತದೆ ಎಂದು ಮತ್ತೆ ಕೆಲವರು ಬೆಟ್ಟಿಂಗ್ ಶುರು ಮಾಡಿದ್ದಾರೆ.
ಮತದಾನ ಮುಗಿದಿದ್ದು, ಅಭ್ಯರ್ಥಿಗಳಿಗೆ ಸೋಲು ಗೆಲವಿನ ಲೆಕ್ಕಾಚಾರ ಪ್ರಾರಂಭವಾಗಿದೆ. ಒಟ್ಟಾರೆ ಶಿರಾ ಕ್ಷೇತ್ರದಲ್ಲಿ ಶಾಂತಿಯುತವಾಗಿ ಶೇ. 78.81 ಮತದಾನ ನಡೆದಿದೆ.
ತಾಲೂಕಿನ ದಾವೂದ್ ಪಾಳ್ಯದಲ್ಲಿ ಮತಗಟ್ಟೆಯನ್ನು ಸ್ಥಾಪಿಸುವಂತೆ ಪ್ರತಿಭಟಿಸಿದ ಘಟನೆಯನ್ನು ಬಿಟ್ಟರೆ ಕ್ಷೇತ್ರದ 264 ಮತಗಟ್ಟೆಗಳಲ್ಲಿಯೂ ಯಾವುದೇ ರೀತಿ ಗೊಂದಲ ಗಲಾಟೆ ಇಲ್ಲದೆ ಮತದಾನ ಶಾಂತಿಯುತವಾಗಿ ನಡೆಯಿತು.
ತಡವಾದ ಮತದಾನ: ಕಸಬಾ ಹೋಬಳಿಗೆ ಸೇರಿರುವ ದಾವೂದ್ ಪಾಳ್ಯ ಗ್ರಾಮದಲ್ಲಿ ಮತಯಂತ್ರ ಬಟನ್ ಚಾಲನೆ ಮಾಡಲು ತೊಂದರೆ ಮಾಡಿದ್ದರಿಂದ ಬೇರೆ ಮತಯಂತ್ರವನ್ನು ಅಳವಡಿಸಿ ಮತದಾನವನ್ನು 1 ಗಂಟೆ ತಡವಾಗಿ ಪ್ರಾರಂಭ ಮಾಡಲಾಯಿತು.
ಕೊಟ್ಟರಂಗಾಪುರ ಗೊಲ್ಲರಹಟ್ಟಿಯಲ್ಲಿ ಮೊದಲಿಂದಲೂ ಮತಗಟ್ಟೆ ಕೇಂದ್ರವಿತ್ತು. ಆದರೆ ಈ ಬಾರಿ ಮತಗಟ್ಟೆಯನ್ನು ಆದಲೂರು ಗ್ರಾಮಕ್ಕೆ ಬದಲಾಯಿಸಿದ್ದರಿಂದ ಗೊಲ್ಲರಹಟ್ಟಿ ಗ್ರಾಮಸ್ಥರು ತಮಗೆ ಮಾಮೂಲಿನಂತೆ ಮತಗಟ್ಟೆಯನ್ನು ಸ್ಥಾಪಿಸಬೇಕು. ಇಲ್ಲವಾದರೆ ನಾವು ಮತದಾನವನ್ನು ಬಹಿಷ್ಕರಿಸುತ್ತೇವೆ ಎಂದು ರಸ್ತೆಗಿಳಿದು ಪ್ರತಿಭಟನೆಯನ್ನು ಮಾಡಿದರು. ತಕ್ಷಣವೆ ಉಪ ಚುನಾವಣಾಧಿಕಾರಿಯಾದ ತಹಸೀಲ್ದಾರ್ ಕುಲಕರ್ಣಿ ಅವರು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತನಾಡಿ ಈ ಭಾರಿ ಆಗಿರುವ ಅಚಾತುರ್ಯದಿಂದ ಮತಗಟ್ಟೆಯು ಬದಲಾಗಿದ್ದು, ಇನ್ನು ಮುಂದೆ ಇಲ್ಲಿಯೂ ಮತಗಟ್ಟೆಯನ್ನು ಮರು ಸ್ಥಾಪಿಸುತ್ತೇವೆ ಎಂದು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಟ್ಟ ಗ್ರಾಮಸ್ಥರು ಮತದಾನ ಮಾಡಿದರು.
ಪೊಲೀಸರು ಮಧ್ಯ ಪ್ರವೇಶ: ತಾಲೂಕಿನ ಕಸಬಾ ಹೋಬಳಿ ಮೇಲ್ಕುಂಟೆ ಗೊಲ್ಲರಹಟ್ಟಿಯಲ್ಲಿ ಮತದಾನದ ವೇಳೆ ಬೇರೆ ಊರಿನ ಜೆಡಿಎಸ್ ಪಕ್ಷದವರು ಪ್ರಚಾರ ಮಾಡುವಾಗ ಕಾಂಗ್ರೆಸ್ ಕಾರ್ಯಕರ್ತರು ತಡೆಯಲು ಮುಂದಾದರು. ಆಗ ಅವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆದಿದ್ದು, ಕೃಷ್ಣ ಎಂಬುವರು ಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ನಂತರ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿದ್ದಾರೆ.
ಇಂತಹ ಸಣ್ಣ ಪುಟ್ಟ ಘಟನೆಯನ್ನು ಹೊರತುಪಡಿಸಿದರೆ ತಾಲೂಕಿನಾದ್ಯಾಂತ ಯಾವುದೇ ಅಹಿತಕರ ಘಟನೆ, ಮತಯಂತ್ರಗಳ ತೊಂದರೆ ಹಾಗೂ ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಶಾಂತಿಯುತವಾಗಿ ಮತದಾನ ನಡೆಯಿತು.
ಪಟ್ಟಣದ ಸರ್ಕಾರಿ ಪ.ಪೂ. ಕಾಲೇಜು ಆವರಣದಲ್ಲಿ ಡಿ ಮಸ್ಟರಿಂಗ್ ರಾತ್ರಿ 10 ಗಂಟೆಯವರೆಗೂ ನಡೆದು ಪರ ಊರಿಂದ ಬಂದ ಚುನಾವಣಾ ಸಿಬ್ಬಂದಿಗೆ ಊಟ ಮತ್ತು ಅವರ ಊರಿಗೆ ತೆರಳಲು ಬಸ್ಸಿನ ವ್ಯವಸ್ಥೆ ಏರ್ಪಡಿಸಲಾಗಿತ್ತು. ತಾಲೂಕಿನಾದ್ಯಂತ ಶಾಂತಿಯುತ ಚುನಾವಣೆಗೆ ಸಹಕರಿಸಿದ ಮತದಾರರು ಮತ್ತು ಚುನಾವಣಾ ಸಿಬ್ಬಂದಿ ಹಾಗೂ ಪೋಲಿಸ್ ಇಲಾಖೆಗೆ ಚುನಾವಣಾಧಿಕಾರಿ ದೊರೆರಾಜ್ ಅಭಿನಂದನೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

