ತುಮಕೂರು

ಸ್ಲಂ ಮಕ್ಕಳ ಪ್ರತಿಭೆ ಅದ್ಭುತ: ಕೆ. ದೊರೈರಾಜ್

Published On :

ಕ.ಪ್ರ. ವಾರ್ತೆ, ತುಮಕೂರು, ಮೇ 6
ಎಲ್ಲರಲ್ಲಿ ಇರದಂತಹ ಪ್ರತಿಭೆ ಸ್ಲಂ ಮಕ್ಕಳಲ್ಲಿದೆ ಎಂದು ಚಿಂತಕ ಕೆ. ದೊರೈರಾಜು ಅಭಿಪ್ರಾಯಪಟ್ಟಿದ್ದಾರೆ.
ಅವರು ನಗರದ ಬಾಪೂಜಿ ಪ.ಪೂ. ಕಾಲೇಜಿನಲ್ಲಿ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಆಯೋಜಿಸಲಾಗಿದ್ದ ಸಮಾನ ಮಕ್ಕಳ ಮಂಟಪದ ಮಕ್ಕಳಿಗೆ ಐದು ದಿನಗಳ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ನಾವು ಹೇಗಿದ್ದೀವಿ ಎನ್ನುವುದಕ್ಕಿಂತ ನಾವು ಏನಾಗಬೇಕೆಂಬ ಕನಸು ಇಟ್ಟುಕೊಳ್ಳಬೇಕು. ಎಲ್ಲರಲ್ಲಿ ಇರದಂತಹ ಪ್ರತಿಭೆ ಸ್ಲಂ ಮಕ್ಕಳಲ್ಲಿದೆ. ನಮ್ಮ ಮಕ್ಕಳಲ್ಲಿ ಡ್ಯಾನ್ಸ್, ಚಿತ್ರಕಲೆ ಮತ್ತು ನಾಟಕಗಳಲ್ಲಿ ಒಳ್ಳೆಯ ಪಾತ್ರವನ್ನು ಅಭಿನಯಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅದ್ಭುತವಾದ ಪ್ರದರ್ಶನ ನೀಡುವಂತಹ ಪ್ರತಿಭೆಯುಳ್ಳವರಿದ್ದಾರೆ ಎಂದರು.
ಪ್ರತಿಭೆಯನ್ನು ಹೆಚ್ಚಿಸಿಕೊಳ್ಳಿ: ಜನಪದ ಕಲೆಗಳಲ್ಲಿ ನಮ್ಮ ಶ್ರೀಮಂತಿಕೆ ಸಮಾಜ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು ನಮಗೆ ಅವಕಾಶಗಳನ್ನು ದೊರಕಿಸಿಕೊಳ್ಳುವುದರ ಜೊತೆಗೆ ಅವಕಾಶ ಸಿಕ್ಕಿದ ಸಂದರ್ಭದಲ್ಲಿ ಸಮರ್ಥವಾದ ಬಳಸಿಕೊಳ್ಳಬೇಕು. ಈ ಶಿಬಿರದಲ್ಲಿ ನಿಮ್ಮಲ್ಲಿರುವ ಪ್ರತಿಭೆಯನ್ನು ಹೆಚ್ಚಿಸಿಕೊಳ್ಳಬೇಕಿದೆ. ಅಭಿನಯ ಕಲೆಗಳಿಗೆ ಪೂರಕವಾಗಿ ಈ ತರಬೇತಿ ಎಲ್ಲಾ ಅವಕಾಶ ಮಾಡಿಕೊಡುತ್ತಿದ್ದು ನಾವು ಗುರಿ ಇಟ್ಟುಕೊಂಡು ಸಾಧನೆಯನ್ನು  ಬಿಡದಂತೆ ಮಾಡಬೇಕು ಎಂದು ಆಶಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಂ. ಬಸವಯ್ಯ ಅವರು ಮಾತನಾಡಿ ಮಕ್ಕಳಲ್ಲಿ ಕನಸುಗಳಿರಬೇಕು. ಈ ಮನಸ್ಸನ್ನು ಈಗಿನಿಂದಲೇ ಬೆಳೆಸಿಕೊಳ್ಳಬೇಕು. ಇದು ಒಂದಲ್ಲ ಒಂದು ದಿನ ನನಸಾಗುತ್ತದೆ. ಇದಕ್ಕೆ ಅನುಗುಣವಾಗಿ ನಾವು ಜೀವನದಲ್ಲಿ ವರ್ತಿಸಬೇಕಾಗುತ್ತದೆ. ನಮ್ಮಲ್ಲಿರುವ ಪ್ರತಿಭೆಗಳನ್ನು ಅಭ್ಯಾಸ ಮಾಡಿಕೊಂಡು ಬೆಳವಣಿಗೆ ಹೊಂದಬೇಕು. ಕೊಳಗೇರಿ ಮಕ್ಕಳಿಗೆ ಜಿಲ್ಲೆಯಲ್ಲಿರುವ ಯಾವ ಶಿಕ್ಷಣ ಸಂಸ್ಥೆಗಳು ಬೇಸಿಗೆ ಶಿಬಿರವನ್ನು ಆಯೋಜಿಸಿಲ್ಲ, ಇದನ್ನು ಕೊಳಗೇರಿ ಸಮಿತಿ ಮಾಡುತ್ತಿರುವುದು ಅಭಿನಂದನಾರ್ಹ ಎಂದರು.
ಜ್ಞಾನ ಹೆಚ್ಚಿಸಿಕೊಳ್ಳಿ: ಖ್ಯಾತ ವ್ಯಂಗ್ಯಚಿತ್ರಕಾರ ಪ್ರಸನ್ನ ಅವರು ಮಾತನಾಡಿ ನಾವು ನಮ್ಮಲ್ಲಿರುವ ಕೀಳರಿಮೆಯನ್ನು ಬಿಡಬೇಕು. ಕಲೆಯಲ್ಲಿ ನಮಗೆ ಹೆಚ್ಚು ಜ್ಞಾನ ಬೆಳಸಿಕೊಂಡಾಗ ನಮ್ಮ ಮನಸ್ಸು ಕೋಮಲವಾಗಿರುತ್ತದೆ. ನಾವು ನಮ್ಮಿಂದ ಪ್ರಪಂಚ ದೂರವಾಗುತ್ತದೆ ಎಂದುಕೊಳ್ಳುತ್ತೇವೆ, ಆದರೆ ನಾವೇ ಪ್ರಪಂಚದಿಂದ ದೂರವಾಗುತ್ತಿದ್ದೇವೆ. ಇದಕ್ಕೆ ಪ್ರಸ್ತುತ ಸಂದರ್ಭಗಳು ಕಾರಣವಾಗಿದ್ದು ನಮ್ಮಲ್ಲಿ ಮಾನವೀಯತೆ ಮೌಲ್ಯಗಳು ಬೆಳೆಯಬೇಕಾದರೆ ಕಲೆಯ ಜ್ಞಾನ ಮುಖ್ಯವಾಗಿದೆ. ಇದರಿಂದ ಸಮಾಜಕ್ಕೆ ನಾವು ಏನನನ್ನಾದರೂ ಕೊಡಲು ಸಾಧ್ಯವಾಗುತ್ತದೆ. ನಮ್ಮ ಸುತ್ತಲಿನ ವಾತಾವರಣದಲ್ಲಿ ಶ್ರೀಮಂತರಾಗಬೇಕೆನ್ನುವುದು ಸಹ ಛಲವಾಗಬೇಕು ಎಂದರು.
ಅಧ್ಯಕ್ಷತೆಯನ್ನು  ಸ್ಲಂ ಜನಾಂದೋಲನಾ ಕರ್ನಾಟಕದ ರಾಜ್ಯ ಸಂಚಾಲಕ  ಎ.ನರಸಿಂಹಮೂರ್ತಿ ವಹಿಸಿದ್ದರು. ವೇದಿಕೆಯಲ್ಲಿ ಸಯ್ಯದ್ ಅಲ್ತಾಫ್ ಉಪಸ್ಥಿತರಿದ್ದರು. ಸಮಾನ ಮಕ್ಕಳ ಮಂಟಪದ ಸುಮಾರು 48 ಮಕ್ಕಳು ಮತ್ತು 8 ಶಿಕ್ಷಕರು ಈ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿದ್ದು, ಈ ಐದು ದಿನಗಳಲ್ಲಿ ಚಿತ್ರಕಲೆ, ರಂಗ ತಾಲೀಮು, ಬೀದಿ ನಾಟಕ, ಹಾಡು, ತಮಟೆ ತರಬೇತಿ ಮತ್ತು ರೂಪಕಗಳನ್ನು ಕಲಿಸಿಕೊಡಲಾಗುತ್ತಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ರಾಷ್ಟ್ರೀಯ ಏಕಲವ್ಯ ಪ್ರಶಸ್ತಿ ಪುರಸ್ಕೃತ ಡಿಂಗ್ರಿ ನರೇಶ್ ಪಾಲ್ಗೊಳ್ಳುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.