ಹಿಂದುಳಿದ ತಾಲೂಕಿಗೆ ಯಾರಾಗುತ್ತಾರೆ ಭಗೀರಥರು?
ಉಗಮ ಶ್ರೀನಿವಾಸ್
ಕ.ಪ್ರ. ವಾರ್ತೆ ತುಮಕೂರು ಮೇ 7
ಅತ್ತ ಇಡೀ ರಾಜ್ಯವೇ ಯಾವ ಅಭ್ಯರ್ಥಿ ಗೆಲ್ಲುತ್ತಾನೆ, ಯಾವ ಪಕ್ಷ ಅಧಿಕಾರಕ್ಕೆ ಬರುತ್ತೆ ಮತ್ತು ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂದು ಯೋಚಿಸುತ್ತಿದ್ದರೆ ತುಮಕೂರು ಜಿಲ್ಲೆಯ ಅತ್ಯಂತ ಹಿಂದುಳಿದ 4 ತಾಲೂಕಿನವರು ಮಾತ್ರ ನಮ್ಮ ತಾಲೂಕಿಗೆ ನೀರು ಕೊಡಿಸುವವರು ಶಾಸಕರಾಗಿ ಆಯ್ಕೆಯಾಗಲಿ ಎಂದು ನಿರೀಕ್ಷಿಸುತ್ತಿದ್ದಾರೆ.
ತುಮಕೂರು ಜಿಲ್ಲೆಯ ಶಿರಾ, ಮಧುಗಿರಿ, ಕೊರಟಗೆರೆ, ಪಾವಗಡ ತಾಲೂಕುಗಳು ಅತ್ಯಂತ ಹಿಂದುಳಿದ ತಾಲೂಕೆಂದು ನಂಜುಂಡಪ್ಪ ವರದಿಯಲ್ಲಿ ನಮೂದಾಗಿದ್ದು ಈ ನಾಲ್ಕು ತಾಲೂಕಿನ ಜನತೆ ಎದುರಿಸುತ್ತಿರುವುದು ನೀರಿನ ಸಮಸ್ಯೆ. ಒಂದೆಡೆ ಫ್ಲೋರೈಡ್ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಇನ್ನೊಂದೆಡೆ ಕುಡಿಯುವ ನೀರಿನ ಸಮಸ್ಯೆಯಿಂದ ನರಳುತ್ತಿದ್ದಾರೆ.
ಕೇವಲ ಮಳೆಯಾಶ್ರಿತ ಪ್ರದೇಶವನ್ನು ಹೊಂದಿರುವ ಈ ನಾಲ್ಕು ತಾಲೂಕುಗಳಲ್ಲಿ ಹೇಳಿಕೊಳ್ಳುವಂತಹ ಯಾವುದೇ ನೀರಾವರಿ ಯೋಜನೆಗಳಲ್ಲಿ. ಎಲ್ಲಾ ಕಡೆ ಮಳೆ ಬಿದ್ದರೂ ಈ ನಾಲ್ಕು ತಾಲೂಕುಗಳು ಮಾತ್ರ ಸದಾ ಬರಗಾಲದಿಂದ ತತ್ತರಿಸುತ್ತಿದ್ದಾರೆ.
ಕೊರಟಗೆರೆ, ಮಧುಗಿರಿ, ಪಾವಗಡ, ಶಿರಾ ಈ ನಾಲ್ಕು ಕ್ಷೇತ್ರಗಳನ್ನು ಪ್ರಭಾವಿ ವ್ಯಕ್ತಿಗಳು ಪ್ರತಿನಿಧಿಸುತ್ತಾ ಬಂದಿದ್ದಾರೆ. ತಕ್ಕ ಮಟ್ಟಿಗೆ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿದ್ದಾರೆ. ಆದರೆ ನಿರೀಕ್ಷಿಸಿದ ಪ್ರಮಾಣದಲ್ಲಿ ನೀರಾವರಿ ಯೋಜನೆಯಾಗಿಲ್ಲ. ಅತ್ಯಂತ ಬರಗಾಲ ಎದುರಿಸುವ ಶಿರಾಕ್ಕೆ ಒಂದಷ್ಟು ನೀರನ್ನು ಹರಿಸಲು ಜಯಚಂದ್ರ ಶ್ರಮಿಸಿದ್ದು ಈಗ ಅವರು ಮತ್ತೆ ಕಣದಲ್ಲಿದ್ದಾರೆ. ಇವರಿಗೆ ಪ್ರತಿಸ್ಪರ್ಧಿಯಾಗಿ ಮಾಜಿ ಸಚಿವ ಬಿ. ಸತ್ಯನಾರಾಯಣ ಸ್ಪರ್ಧಿಸುತ್ತಿದ್ದಾರೆ. ಇವರಿಬ್ಬರ ನಡುವೆ ಪ್ರಬಲ ಪೈಪೋಟಿ ಎದುರಾಗಿದೆ. ಇವರಿಬ್ಬರಲ್ಲಿ ಯಾರೇ ಗೆಲ್ಲಲಿ ನಮಗೆ ನೀರು ಕೊಟ್ಟರೆ ಸಾಕು ಎಂಬುದು ಈ ಭಾಗದ ಮತದಾರರ ಅಂಬೋಣ.
ನೀರಾವರಿ ಸೌಲಭ್ಯವಿಲ್ಲ: ಇನ್ನು ಮೀಸಲು ಕ್ಷೇತ್ರವಾಗಿರುವ ಕೊರಟಗೆರೆ ಮತ್ತು ಪಾವಗಡದ ಸ್ಥಿತಿಯೂ ಇದೇ ಆಗಿದೆ. ಕೊರಟಗೆರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಸ್ಪರ್ಧಿಸಿದ್ದಾರೆ. ಈ ಭಾಗದಲ್ಲೂ ಕೂಡ ಹೇಳಿಕೊಳ್ಳುವಂತಹ ನೀರಾವರಿ ಸೌಲಭ್ಯವಿಲ್ಲ. ಇವರಿಗೆ ಪ್ರತಿಸ್ಪರ್ಧಿಯಾಗಿ ಜೆಡಿಎಸ್ನಿಂದ ಸುಧಾಕರ್ ಲಾಲ್ ಸ್ಪರ್ಧಿಸುತ್ತಿದ್ದಾರೆ. ಇಲ್ಲೂ ಕೂಡ ಫ್ಲೋರೈಡ್ ಸಮಸ್ಯೆ ಇದೆ. ಈ ಭಾಗದ ಜನರ ಒಂದಂಶದ ಬೇಡಿಕೆ ಎಂದರೆ ಯಾರೇ ಗೆಲ್ಲಲಿ ನಮಗೆ ನೀರು ಕೊಡಲಿ ಎಂಬುದಾಗಿದೆ. ಕೊರಟಗೆರೆ ನಂತರ ಮತ್ತೊಂದು ಮೀಸಲು ಕ್ಷೇತ್ರ ಪಾವಗಡ ಮಾತ್ರ ಬೇರೆ ಎಲ್ಲಾ ತಾಲೂಕಿಗಿಂತ ಭಿನ್ನ. ಗಡಿಭಾಗದಲ್ಲಿರುವ ಪಾವಗಡದಲ್ಲಿ ಈಗಲೂ ದುಡ್ಡು ಕೊಟ್ಟು ನೀರು ಪಡೆಯಬೇಕಾದ ಸ್ಥಿತಿ ಇದೆ. ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿದ್ದ ವೆಂಕಟರಮಣಪ್ಪ ಬಿಟ್ಟರೆ ಬೇರೆ ಯಾರೂ ಸಚಿವರಾಗಿಲ್ಲ. ವೆಂಕಟರಮಣಪ್ಪ ಅವರು ತಾಲೂಕಿಗೆ ನೀರು ಕೊಡಿಸುತ್ತಾರೆ ಎಂಬ ನಿರೀಕ್ಷೆ ಕಾಲಕ್ರಮೇಣ ಹುಸಿಯಾಯಿತು. ಅವರು ಸರ್ಕಾರದಲ್ಲಿ ಭಾಗಿಯಾದರೂ ಶಾಸಕರ ಅನರ್ಹ ವಿಷಯದಲ್ಲಿ ಬ್ಯೂಸಿಯಾಗಿಬಿಟ್ಟರು. ಇಲ್ಲಿ ಈ ಬಾರಿ ವೆಂಕಟರಮಣಪ್ಪ ಅವರ ಪುತ್ರ ವೆಂಕಟೇಶ್ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದರೆ, ಜೆಡಿಎಸ್ನಿಂದ ತಿಮ್ಮರಾಯಪ್ಪ ಕಣದಲ್ಲಿದ್ದಾರೆ. ಈ ಭಾಗದ ಜನರ ಬೇಡಿಕೆ ಕೂಡ ನೀರಾವರಿ ಸೌಕರ್ಯವೇ ಆಗಿದೆ.
ಅನಿತಾ ಸ್ಪರ್ಧೆ ಇಲ್ಲ: ಇನ್ನು ಆಪರೇಷನ್ ಕಮಲದಿಂದಾಗಿ ಅನಿತಾ ಕುಮಾರಸ್ವಾಮಿ ಅವರು ಕಳೆದ ಚುನಾವಣೆಯಲ್ಲಿ ಮಧುಗಿರಿ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಈ ಬಾರಿ ಅವರು ಸ್ಪರ್ಧಿಸುತ್ತಿಲ್ಲ. ಇಲ್ಲಿ ಕಾಂಗ್ರೆಸ್ನಿಂದ ಕೆ.ಎನ್. ರಾಜಣ್ಣ ಹಾಗೂ ಜೆಡಿಎಸ್ನಿಂದ ವೀರಭದ್ರಯ್ಯ ಸ್ಪರ್ಧಿಸುತ್ತಿದ್ದಾರೆ. ಏಕಶಿಲಾ ಬೆಟ್ಟ ಹೊಂದಿರುವ ಖ್ಯಾತಿ ಗಳಿಸಿರುವ ಮಧುಗಿರಿ ಕೂಡ ನೀರಾವರಿ ಸೇರಿದಂತೆ ಮೂಲಭೂತ ಸಮಸ್ಯೆಯಿಂದ ನರಳುತ್ತಿದೆ. ಈ ಭಾಗದ ಜನರದ್ದು ಕೂಡ ಒಂದೇ ಬೇಡಿಕೆ. ನಮಗೆ ನೀರು ಬೇಕು ಎಂಬುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

