ಮತದಾರರ ತೀರ್ಪಿಗೆ ತಲೆಬಾಗುವೆ: ಲೋಕೇಶ್ವರ
ತಿಪಟೂರು: ನಾನೊಬ್ಬ ಸರ್ಕಾರಿ ಅಧಿಕಾರಿಯಾಗಿ ಸ್ವಯಂ ನಿವೃತ್ತಿ ಪಡೆದು ರಾಜಕೀಯ ಅಖಾಡಕ್ಕೆ ಧುಮುಕಿದ ಕೇವಲ 4 ತಿಂಗಳಲ್ಲಿ ತಿಪಟೂರು ತಾಲೂಕಿನಲ್ಲಿ ಕೆಜೆಪಿ ಪಕ್ಷ ಹುಟ್ಟು ಹಾಕಿ 29ಸಾವಿರ ಮತಗಳಿಸುವಲ್ಲಿ ಯಶಸ್ವಿಯಾಗಿದ್ದೇನೆ. ಅಖಾಡದಲ್ಲಿ ಮತದಾರ ನೀಡಿರುವ ತೀರ್ಪನ್ನು ಮನಸಾರೆ ಒಪ್ಪಿಕೊಳ್ಳುವ ಮೂಲಕ ಅದಕ್ಕೆ ತಲೆಬಾಗುತ್ತೇನೆ. ಮುಂದಿನ ದಿನದಲ್ಲಿ ತಾಲೂಕಿನ ವಿರೋಧ ಪಕ್ಷದ ನಾಯಕನಾಗಿ ಜನಪರ ಹೋರಾಟ ಮಾಡುತ್ತೇನೆಂದು ಕೆಜೆಪಿ ಮುಖಂಡ ಲೋಕೇಶ್ವರ ತಿಳಿಸಿದರು.
ನಗರದ ಕೆಜೆಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, 2 ಬಾರಿ ಸೋತು ಈ ಬಾರಿ ಜನತೆಯ ಅನುಕಂಪದಿಂದ ವಿಜಯಿಯಾಗಿರುವ ಕಾಂಗ್ರೆಸ್ನ ಕೆ. ಷಡಕ್ಷರಿಯವರಿಗೆ ಅಭಿನಂದನೆ ಸಲ್ಲಿಸುತ್ತಾ, ತಾಲೂಕಿನ ಯಾವುದೇ ಪಕ್ಷದ ಯಾವುದೇ ಕಾರ್ಯಕರ್ತರು ದ್ವೇಷರಾಜಕಾರಣಕ್ಕೆ ಅವಕಾಶ ನೀಡದಂತೆ ಶಾಂತಿಯುತವಾಗಿ ವರ್ತಿಸಬೇಕೆಂದು ಕರೆ ನೀಡಿದರು. ಚುನಾವಣಾ ಫಲಿತಾಂಶವನ್ನು ನಾನು, ಪಕ್ಷದ ಕಾರ್ಯಕರ್ತರು ಒಪ್ಪಿಕೊಂಡಿದ್ದು, ಕೋಮುವಾದಿ ಪಕ್ಷದ ದುರಾಡಳಿತ ಅಂತ್ಯಗೊಳಿಸಲು ನಾನು ಮಹತ್ತರ ಪಾತ್ರ ವಹಿಸಿದ್ದೇನೆ. ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡು ಜಾತಿ, ಮಿತಿಮೀರಿದ ಹಣ-ಹೆಂಡ ನೀಡಿ ಚುನಾವಣೆ ನಡೆಸಿದ್ದರಿಂದ ನನ್ನ ಸೋಲಿಗೆ ಕಾರಣವಾಯಿತು ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದಿದ್ದು, ತಾಲೂಕಿನಲ್ಲಿ ಕಾಂಗ್ರೆಸ್ನಿಂದ ಗೆದ್ದಿರುವ ಷಡಕ್ಷರಿಯವರು ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವಂತಾಗಬೇಕು. ತಾಲೂಕಿನಲ್ಲಿ ಅರ್ಧಕ್ಕೆ ನಿಂತಿರುವ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ರೈತರಿಗೆ ಅನುಕೂಲವಾಗುವಂತೆ ತೆಂಗಿನ ಬೆಳೆಗೆ ಪ್ರೋತ್ಸಾಹ, ಕೊಬ್ಬರಿಗೆ ಬೆಂಬಲ ಬೆಲೆ ನಿಗದಿ, ನಿವೇಶನ ರಹಿತ ಬಡವರಿಗೆ ನಿವೇಶ ನೀಡುವಿಕೆ, ಅರ್ಹ ಅಂಗವಿಕಲರಿಗೆ ಮಾಸಾಶನ, ಪಡಿತರ ಚೀಟಿ, ವಯೋವೃದ್ಧರಿಗೆ ಮಾಸಾಶನ ಸೇರಿದಂತೆ ಮುಂತಾದ ಜನಪರ ಕೆಲಸಗಳನ್ನು ಮಾಡಬೇಕೆಂದರು.
ಇದೇ ಸಂದರ್ಭದಲ್ಲಿ ಕೆಜೆಪಿ ಪಕ್ಷಕ್ಕೆ ಮತ ನೀಡಿದ ಕಲ್ಪತರು ನಾಡಿನ ಎಲ್ಲಾ ಮತದಾರರಿಗೆ, ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕಾರ, ಮಾರ್ಗದರ್ಶನ ನೀಡಿದ ಎಲ್ಲರಿಗೂ ನಾನು ಚಿರಋಣಿಯಾಗಿದ್ದು, ಕಾರ್ಯಕರ್ತರ ಜೊತೆಯಲ್ಲೇ ಇದ್ದು ಅವರ ಮತ್ತು ಕ್ಷೇತ್ರದ ಕಷ್ಟ ಸುಖಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

