2ನೇ ಬಾರಿ ಜೆಡಿಎಸ್ಗೆ ಒಲಿದ ಚಿ.ನಾ.ಹಳ್ಳಿ ಕ್ಷೇತ್ರ
ಹುಳಿಯಾರು : ಚಿ.ನಾ.ಹಳ್ಳಿ ಕ್ಷೇತ್ರದಲ್ಲಿ ಒಂದು ಬಾರಿ ಗೆದ್ದವರು ಪುನಃ ಗೆಲ್ಲುವುದಿಲ್ಲ ಎಂಬ ಮೌಢ್ಯತೆಯನ್ನು ಹುಸಿಗೊಳಿಸುವ ಮೂಲಕ ಜೆಡಿಎಸ್ ಅಭ್ಯರ್ಥಿ ಸಿ.ಬಿ.ಸುರೇಶ್ಬಾಬು 60,759 ಮತಗಳನ್ನು ಪಡೆದು ಸತತ ಎರಡನೇ ಬಾರಿ ವಿಜಯ ಮಾಲೆ ಧರಿಸಿದರು.
ಈ ಬಾರಿಯ ಚಿ.ನಾ.ಹಳ್ಳಿ ಕ್ಷೇತ್ರದ ಮತ ಎಣಿಕೆಯಲ್ಲಿ ಕೆಜೆಪಿ, ಜೆಡಿಎಸ್, ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆದಿದ್ದು ಮೊದಲ ಹಂತದ ಮತ ಎಣಿಕೆ ಸಂರ್ಭದಲ್ಲಿ ಕೆಜೆಪಿ ಅಭ್ಯರ್ಥಿ ಮಾಧುಸ್ವಾಮಿ ಅವರು ಮುಂದಿರುವುದು ಕಂಡು ಬಂತು. ಬಿಜೆಪಿ ಹಾಗೂ ಕೆಜೆಪಿ ಪಕ್ಷಗಳ ತೀವ್ರ ಪೈಪೋಟಿಯ ನಡುವೆಯೂ ನಂತರದ ಸುತ್ತುಗಳಲ್ಲಿ ಜೆಡಿಎಸ್ ಅಂತರವನ್ನು ಕಾಯ್ದುಕೊಂಡು ಕೆಜೆಪಿಯ ಮಾಧುಸ್ವಾಮಿಯವರಿಗಿಂತ 11,139 ಹೆಚ್ಚಿನ ಮತಗಳನ್ನು ಪಡೆಯುವ ಮೂಲಕ ಜೆಡಿಎಸ್ ಅಭ್ಯರ್ಥಿ ಸಿ.ಬಿ.ಸುರೇಶ್ ಬಾಬು ಜಯಶೀಲರಾಗಿದ್ದು ಕ್ಷೇತ್ರದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದೆ.
ಕಳೆದ ಚುನಾವಣೆಯಲ್ಲಿ ಜೆಡಿಯುನಿಂದ ಸ್ಪರ್ಧಿಸಿದ್ದ ಮಾಧುಸ್ವಾಮಿ ಮೂರನೇ ಸ್ಥಾನ ಪಡೆದಿದ್ದರು. ಆದರೆ ಈ ಬಾರಿ ಜೆಡಿಯು ತೊರೆದು ಯಡಿಯೂರಪ್ಪನವರೊಂದಿಗೆ ಸೇರಿ ಕೆಜೆಪಿಯಿಂದ ಕಣಕಿಳಿದಿದ್ದು 49,620 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ 38,002 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದ ಬಿಜೆಪಿಯ ಕೆ.ಎಸ್.ಕಿರಣ್ ಕುಮಾರ್ ಈ ಬಾರಿ 29,150 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಕಾಂಗ್ರೆಸ್ನ ಸಾಸಲು ಸತೀಶ್ 10,344 ಮತಗಳನ್ನು ಪಡೆದು ನಾಲ್ಕನೇ ಸ್ಥಾನವನ್ನು ಹಾಗೂ ರೈತಸಂಘದ ಅಭ್ಯರ್ಥಿ ಕೆಂಕೆರೆ ಸತೀಶ್ 2086 ಪಡೆದಿದ್ದು, ಇತರೆ ಅಭ್ಯರ್ಥಿಗಳು 8082 ಮತಗಳನ್ನು ಪಡೆದಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 1,60,041ರಷ್ಟು ಮತದಾನವಾಗಿದೆ.
ಜೆಡಿಎಸ್ ಹಾಲಿ ಶಾಸಕರಾಗಿದ್ದ ಸಿ.ಬಿ.ಸುರೇಶ್ಬಾಬು ಮತ್ತೆ ಮರು ಆಯ್ಕೆ ಬಯಸಿ ಈ ಬಾರಿ ಕಣದಲಿದ್ದರು. ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯ ಮಾಡಿಲ್ಲ, ಗೆದ್ದ ಮೇಲೆ ಜನರ ಕೈಗೆ ಸಿಗದಂತೆ ಬೆಂಗಳೂರಲ್ಲಿ ಕುಳಿತು ಆಡಳಿತ ನಡೆಸುತ್ತಾರೆಂಬ ಪ್ರತಿ ಪಕ್ಷಗಳ ಆರೋಪಗಳ ನಡುವೆ ಈ ಬಾರಿ ಜಯಶೀಲರಾಗಿದ್ದು ಗಮನಾರ್ಹ. ಆದರೆ ಈ ಬಾರಿ 60,759 ಮತಗಳನ್ನು ಪಡೆದು 11,139 ಮತಗಳ ಅಂತರದಲ್ಲಿ ಜಯಗಳಿಸಿದ್ದರೂ ಸಹ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 17,905 ಮತಗಳು ಕಡಿಮೆಯಾಗಿರುವುದು ಸ್ವಲ್ಪ ಹಿನ್ನೆಡೆಯೆ ಎನ್ನಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

