ಜೆಡಿಎಸ್ ಜತೆ ಒಳ ಒಪ್ಪಂದದಿಂದ ಸೋತ 'ಕೈ'
ಕ.ಪ್ರ. ವಾರ್ತೆ ತುರುವೇಕೆರೆ ಮೇ 11
ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ರಾಜಣ್ಣ ಅವರು ಜೆಡಿಎಸ್ನೊಂದಿಗೆ ಮಾಡಿಕೊಂಡ ಒಳ ಒಪ್ಪಂದದಿಂದಾಗಿ ಕಾಂಗ್ರೆಸ್ಗೆ ಮುಖಭಂಗವಾಯಿತೇ ವಿನಃ ಪಕ್ಷದ ಮುಖಂಡರಿಂದಾಗಲಿ ಅಥವಾ ಕಾರ್ಯಕರ್ತರಿಂದಾಗಲೀ ಕಾಂಗ್ರೆಸ್ಗೆ ತೊಡಕಾಗಿಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಎನ್. ಶಿವರಾಜು ಹೇಳಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿ, ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿಗೆ ಪಕ್ಷದ ಮುಖಂಡರೇ ಕಾರಣ ಎಂದು ಅಭ್ಯರ್ಥಿ ಗೀತಾ ರಾಜಣ್ಣ ಅವರು ಆರೋಪಿಸಿದ್ದ ಹಿನ್ನೆಲೆಯಲ್ಲಿ ಅವರು ಪ್ರತಿಕ್ರಿಯೆ ನೀಡಿದರು.
ಈ ಹಿಂದೆ ಕಾಂಗ್ರೆಸ್ನಿಂದ ಗೆಲವು ಕಂಡಿದ್ದ ಜಗ್ಗೇಶ್ ಅವರು ಚುನಾವಣೆಯ ನಂತರ ಬಿಜೆಪಿ ಆಮಿಷಕ್ಕೆ ಒಳಗಾಗಿ ಕಾಂಗ್ರೆಸ್ಗೆ ಮೋಸ ಮಾಡಿದರು. ಆದರೆ, ಅವರು ಚುನಾವಣೆಗೆ ಮುನ್ನವೇ ಜೆಡಿಎಸ್ನೊಂದಿಗೆ ಒಳಒಪ್ಪಂದ ಮಾಡಿಕೊಂಡು ಕಾಂಗ್ರೆಸ್ಗೆ ಮೋಸ ಮಾಡಿದರು. ಚುನಾವಣೆ ಆರಂಭದಿಂದಲೂ ಜೆಡಿಎಸ್ ಅಭ್ಯರ್ಥಿಯೊಂದಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಗೀತಾ ಅವರ ಪತಿ ರಾಜಣ್ಣ ಅವರು ಪಕ್ಷದ ಎಲ್ಲಾ ಆಗುಹೋಗುಗಳ ಬಗ್ಗೆ ಚರ್ಚಿಸುತ್ತಿದ್ದರು ಎಂದು ಆರೋಪಿಸಿದರು. ನಾಮಪತ್ರ ಸಲ್ಲಿಕೆಯಿಂದ ಪ್ರಾರಂಭ ಮಾಡಿ ಅಂತಿಮ ದಿನದವರೆಗೂ ಕ್ಷೇತ್ರದ ಕಾಂಗ್ರೆಸ್ ಮುಖಂಡರನ್ನಾಗಲಿ ಅಥವಾ ಕಾರ್ಯಕರ್ತರನ್ನಾಗಲಿ ವಿಶ್ವಾಸಕ್ಕೆ ತೆಗೆದುಕೊಳ್ಳಲೇ ಇಲ್ಲ ಎಂದು ಶಿವರಾಜು ಆರೋಪಿಸಿದರು.
ಪಕ್ಷದಿಂದ ಬಂದಿದ್ದ ಹಣವನ್ನೂ ಕಾರ್ಯಕರ್ತರಿಗೆ ನೀಡದೇ ವಂಚಿಸಿದರು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಟಿ.ಎಸ್. ದಾನಿಗೌಡ ಆಪಾದಿಸಿದರು. ಮುಖಂಡರಿಗೆ ಪ್ರಚಾರ ಮಾಡುವ ಸಲುವಾಗಿ ಓಡಾಡಲು ಯಾವುದೇ ವಾಹನದ ವ್ಯವಸ್ಥೆ ಕಲ್ಪಿಸಲಿಲ್ಲ. ಟಿಕೆಟ್ ಘೋಷಣೆಯಾದ ಕೆಲ ದಿನಗಳ ಕಾಲ ಕ್ಷೇತ್ರದಲ್ಲೇ ಇರಲಿಲ್ಲ. ಕ್ಷೇತ್ರದ ಕಾಂಗ್ರೆಸ್ ಮುಖಂಡರು ಚುನಾವಣೆಯಲ್ಲಿ ಸಹಕರಿಸಲಿಲ್ಲ ಎಂಬ ದೂರನ್ನು ಅಲ್ಲಗಳೆದ ದಾನೀಗೌಡರು, ಶೀಘ್ರದಲ್ಲೇ ಕಾರ್ಯಕರ್ತರ ಸಭೆ ಕರೆಯಲಿದ್ದು, ಆ ದಿನ ಗೀತಾರಾಜಣ್ಣ ಅವರು ಆಗಮಿಸಿ ತಮ್ಮ ದೂರನ್ನು ಸಮರ್ಥನೆ ಮಾಡಿಕೊಳ್ಳಲಿ ಎಂದು ಸವಾಲು ಹಾಕಿದರು.
ತುರುವೇಕೆರೆ ವಿಧಾನಸಭಾ ಕ್ಷೇತ್ರದ ಮುಖಂಡರ ವಿರುದ್ಧ ಮಾತನಾಡುವ ಗೀತಾ ಅವರು ತಮ್ಮ ಸ್ವಕ್ಷೇತ್ರದಲ್ಲಿ ಪಡೆದುಕೊಂಡಿರುವ ಮತವೆಷ್ಟು ಎಂಬುದನ್ನು ಮನಗಾಣಲಿ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಟಿ.ಎನ್. ಶಶಿಶೇಖರ್ ವ್ಯಂಗ್ಯವಾಡಿದರು. ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಉಗ್ರೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಬಿ. ಹನುಮಂತಯ್ಯ, ಪಟ್ಟಣ ಪಂಚಾಯಿತಿ ಸದಸ್ಯರಾದ ಕೆ.ಟಿ. ಶಿವಶಂಕರ್, ಮಹೇಶ್, ಶ್ರೀನಿವಾಸ್ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

