ಸಿದ್ದರಾಮಯ್ಯರಿಂದ ಅನುಭವ ಮಂಟಪ ಆಶಯ ಈಡೇರಿಕೆ
ತುಮಕೂರು: ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿ, ಮುಖ್ಯಮಂತ್ರಿ ಹುದ್ದೆಗೆ ಬಂದಿರುವ ಸಿದ್ದರಾಮಯ್ಯ, ಅನುಭವ ಮಂಟಪದ ಆಶಯ ಈಡೇರಿಸುವ ಭರವಸೆ ಹೊಂದಿರುವುದಾಗಿ ತುಮಕೂರು ಬಿಜೆಪಿ ಸಂಸದ ಜಿ.ಎಸ್. ಬಸವರಾಜ್ ತಿಳಿಸಿದ್ದಾರೆ.
9 ಜಿಲ್ಲೆಗಳಿಗೆ ಕುಡಿಯುವ ನೀರೊದಗಿಸುವ ವಾಟರ್ಗ್ರಿಡ್ ಕೆನಾಲ್ ಯೋಜನೆ, ತುಮಕೂರು ನಿಮ್ಜ್ ಕುಲಕಸುಬುದಾರರ ಹಬ್, ವಿಜ್ಞಾನ ಗುಡ್ಡ ಸೇರಿದಂತೆ ಜಿಲ್ಲೆಯ ಎಲ್ಲ ಯೋಜನೆಗಳಿಗೆ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸುವ ವಿಶ್ವಾಸವನ್ನು ತುಮಕೂರು ಬಿಜೆಪಿ ಸಂಸದರು ವ್ಯಕ್ತಪಡಿಸಿದ್ದಾರೆ.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರ ವಾಟರ್ ಗ್ರಿಡ್ ಕೆನಾಲ್ ಯೋಜನೆ (ಪರಮಶಿವಯ್ಯ ವರದಿಯಾಧಾರಿತ)ಗೆ ಬಜೆಟ್ನಲ್ಲಿ ಅನುಮೋದನೆ ನೀಡಿ, ಸುತ್ತೋಲೆ ಕಳುಹಿಸಿದೆ. ಈ ಹಿಂದೆ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದ ವೇಳೆ ಪರಮಶಿವಯ್ಯನವರ ವರದಿ ಜಾರಿಗೆ ವಿಧಾನಸಭೆಯಲ್ಲಿ ಒತ್ತಾಯಿಸಿದ್ದರು. ಈಗ ಅವರೇ ಮುಖ್ಯಮಂತ್ರಿಯಾಗಿರುವುದರಿಂದ ವಾಟರ್ಗ್ರಿಡ್ ಕೆನಾಲ್ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ಜಿಎಸ್ಬಿ ವ್ಯಕ್ತಪಡಿಸಿದರು.
ಅದೇ ರೀತಿ ಕುಲಕಸುಬುದಾರರ ಹಬ್, ತುಮಕೂರು ಹೊರವಲಯದಲ್ಲಿ ಸುಮಾರು 1000 ಎಕರೆಯಲ್ಲಿ ವಿಜ್ಞಾನ ಗುಡ್ಡ ನಿರ್ಮಾಣ ಸೇರಿದಂತೆ ಜಿಲ್ಲೆಯ ಎಲ್ಲ ಯೋಜನೆಗಳಿಗೆ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಲಿದ್ದಾರೆ ಎಂಬ ವಿಶ್ವಾಸವನ್ನು ಸಂಸದರು ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ನ್ಯಾಯದ ಹರಿಕಾರ: ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿ, ಮುಖ್ಯಮಂತ್ರಿ ಪದವಿಯವರೆಗೆ ಬಂದಿರುವ ಸಿದ್ದಾರಾಮಯ್ಯ, ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕುಲ-ಕಸುಬುದಾರರ ಹಬ್ನ್ನು ಎಲ್ಲ ಜನಾಂಗದ ಕುಲ ಕಸುಬಿಗೆ, ಜಿಲ್ಲೆಯ ರೈತರ ಉತ್ಪನ್ನಗಳಿಗೆ ಸಹಕಾರ ನೀಡುವರೆಂಬ ಭರವಸೆ ಇಟ್ಟುಕೊಳ್ಳಲಾಗಿದೆ. ಬಸವ ಜಯಂತಿಯಂದು ಅಧಿಕಾರ ಸ್ವೀಕರಿಸುವ ಸಿದ್ದರಾಮಯ್ಯ, ಬಸವಣ್ಣನವರ ಅನುಭವ ಮಂಟಪದಂತೆ ಅಂತಾರಾಷ್ಟ್ರೀಯ ಮಟ್ಟದ ಹಬ್ ನಿರ್ಮಿಸಿ, ನಿರುದ್ಯೋಗಿಗಳಿಗೆ ಅನುಕೂಲ ಮಾಡಿಕೊಡುವಂತೆ ಬಸವರಾಜ್ ಮನವಿ ಮಾಡಿದ್ದಾರೆ.
ಉಸ್ತುವಾರಿ ಸಚಿವರಿಗೆ ಷರತ್ತಿನ ಬೆಂಬಲ: ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಅಭಿವೃದ್ಧಿಯಾಧಾರಿತ ಬೆಂಬಲ ನೀಡುವುದಾಗಿಯೂ, ತುಮಕೂರು ನಗರದ ಸಮಗ್ರ ಅಭಿವೃದ್ದಿಗಾಗಿ ವಿಶೇಷ ಯೋಜನೆ ರೂಪಿಸಿ, ಕಾಲಮಿತಿ ನಿಗದಿ ಯೋಜನೆ ಅನುಷ್ಠಾನಕ್ಕೆ ನೂತನ ಶಾಸಕರ, ನಗರಸಭೆ, ಟೂಡಾ, ವಿಧಾನಪರಿಷತ್ ಸದಸ್ಯರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಲಹೆ ನೀಡಿದ್ದಾರೆ.
ಸಿದ್ದು, ತಾವು ಒಂದೇ ಬಾರಿ ರಾಜಕೀಯಕ್ಕೆ ಬಂದವರು
ಸಿದ್ದರಾಮಯ್ಯ ಹಾಗೂ ತಾವು ಕೆಲ ತಿಂಗಳ ಹಿಂದೆ-ಮುಂದೆ ರಾಜಕೀಯಕ್ಕೆ ಬಂದವರು. 1983 ರಲ್ಲಿ ಆಗ ಮೊದಲ ಬಾರಿಗೆ ಸಿದ್ದರಾಮಯ್ಯ ಶಾಸಕರಾಗಿದ್ದರು. ಅದೇ ಸಂದರ್ಭದಲ್ಲಿ ತಾವು ತುಮಕೂರು ಸಂಸದನಾಗಿದ್ದೆ ಎಂದು ಜಿಎಸ್ಬಿ ತಮ್ಮ ಹಳೇ ನೆನಪುಗಳನ್ನು ಬಿಚ್ಚಿಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

