ದೊಡ್ಡಕೆರೆಯಲ್ಲಿ ನೀರಿಲ್ಲ, ಬರೀ ಬಳ್ಳಾರಿ ಜಾಲಿ...
ಕ.ಪ್ರ.ವಾರ್ತೆ ಅರಸೀಕೆರೆ ಮೇ 13
ಒಂದು ಕಾಲದಲ್ಲಿ ಸಮುದ್ರದಂತೆ ಶೋಭಿಸುತ್ತಿದ್ದ ಕಣಕಟ್ಟೆ ದೊಡ್ಡಕೆರೆ ಹತ್ತಾರು ವರ್ಷಗಳಿಂದ ನೀರಿಲ್ಲದೆ ಬತ್ತಿ ಹೋಗಿದೆ. ಪ್ರಸ್ತುತ ಕೆರೆಯ ಅಂಗಳದಲ್ಲೆಲ್ಲಾ ಬಳ್ಳಾರಿ ಜಾಳಿ ಮುಳ್ಳು ಯಥೇಚ್ಛವಾಗಿ ಬೆಳೆದು ಇದೊಂದು ಕೆರೆಯಾಗಿತ್ತು ಎಂಬುದನ್ನು ಮರೆಸುವಂತಿದೆ.
ಈ ಕೆರೆಗೆ ಹೊನ್ನವಳ್ಳಿ ಏತ ನೀರಾವರಿ ಮೂಲಕ ಕುಡಿಯುವ ನೀರಿನ ಯೋಜನೆಯಡಿ ಕೆರೆಗೆ ಹೇಮಾವತಿ ನೀರು ಹರಿದು ಬರಲಿತ್ತು. ಅದಿನ್ನೂ ಆಗಿಲ್ಲ. ರಾಜ್ಯ ಸರ್ಕಾರ ಕೆರೆಗಳ ಹೂಳೆತ್ತಲು ಕೋಟ್ಯಂತರ ರು. ಗಳನ್ನು ಬಿಡುಗಡೆ ಮಾಡಿದ್ದರೂ ಈ ಕೆರೆಯ ಹೂಳೆತ್ತುವ ಹಾಗೂ ಬಳ್ಳಾರಿ ಜಾಲಿ ತೆಗೆಯುವ ಕಾರ್ಯ ಮಾಡದಿರುವುದು ಸುತ್ತಮುತ್ತಲ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ಲೋರೈಡ್ ಭೀತಿ: ಸತತ ಬರಗಾಲದ ಬವಣೆಯಿಂದ ನಲುಗುತ್ತಿರುವ ತಾಲೂಕಿನ ಎಲ್ಲಾ ಕೆರೆಕಟ್ಟೆಗಳು ನೀರಿಲ್ಲದೆ ಗ್ರಾಮೀಣ ಭಾಗದ ಜನರು ಮತ್ತು ಜಾನುವಾರುಗಳು ಇನ್ನಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ. ಕುಡಿಯುವ ನೀರಿಗಾಗಿ ಕೊರೆಯುವ ಕೊಳವೆ ಬಾವಿಗಳಲ್ಲಿ ಸಾವಿರ ಅಡಿ ಆಳಕ್ಕೆ ಕೊರೆದರೂ ನೀರು ಸಿಗುವುದು ಖಾತರಿ ಇಲ್ಲ ಎನ್ನುವಂತಾಗಿದೆ. ಆಕಸ್ಮಿಕವಾಗಿ ದೊರಕುವ ನೀರಿನಲ್ಲೂ ಪ್ಲೋರೈಡ್ ಅಂಶ ಹೆಚ್ಚಾಗಿರುವ ಭೀತಿ ಎಲ್ಲರನ್ನು ಕಾಡುತ್ತಿದೆ.
ಬೇರೆ ದಾರಿಯಿಲ್ಲದೆ ಕಲ್ಮಶ ನೀರನ್ನೇ ಕುಡಿಯುತ್ತಿರುವ ತಾಲೂಕಿನ ಜನತೆಗೆ ಹೇಮಾವತಿ ನದಿ ಮೂಲದ ಹೊನ್ನವಳ್ಳಿ ಏತನೀರಾವರಿ ಯೋಜನೆಯನ್ನು ಅನೇಕ ಕೋಟಿ ರು. ವೆಚ್ಚದಲ್ಲಿ ಕೈಗೊಂಡಿರುವುದು ಈ ಭಾಗದ ಜನತೆಯ ಅನೇಕ ವರ್ಷಗಳ ಕನಸು ನನಸಾಗಿ ಪರಿಣಮಿಸಲಿದೆ. ಈ ಸಂದರ್ಭದಲ್ಲಾದರೂ ಕೆರೆಯ ಅಂಗಳವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಜನಪ್ರಿಯ ಶಾಸಕರು ಮಾಡಬೇಕೆಂಬುದು ಈ ಭಾಗದ ಜನರ ಬಯಕೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

