ನೂತನ ಕುಲಪತಿ ನಿರೀಕ್ಷೆಯಲ್ಲಿ ವಿವಿ
ಅದಲಗೆರೆ ನಾಗೇಂದ್ರಕುಮಾರ್
ಕ.ಪ್ರ. ವಾರ್ತೆ ತುಮಕೂರು ಮೇ 16
ತುಮಕೂರು ವಿವಿ ನೂತನ ಕುಲಪತಿ ನಿರೀಕ್ಷೆಯಲ್ಲಿದೆ. ವಿವಾದಗಳ ಕುಲಪತಿ ಎಂದೇ ಖ್ಯಾತರಾಗಿದ್ದ ಡಾ.ಎಸ್.ಸಿ. ಶರ್ಮ ಮೇ 3 ರಂದು ನಿವೃತ್ತರಾಗಿದ್ದಾರೆ.
ಇವರ ನಿವೃತ್ತಿಯೊಂದಿಗೆ ತುಮಕೂರು ವಿವಿ ತನ್ನ ಎರಡನೇ ಕುಲಪತಿಯನ್ನು ಬೀಳ್ಕೊಟ್ಟಿದೆ. ಅಭಿವೃದ್ಧಿಯೊಂದಿಗೆ ವಿವಾದಗಳನ್ನು ಹುಟ್ಟಿ ಹಾಕುತ್ತಲೇ 4 ವರ್ಷ ಪೂರೈಸಿದ ಶರ್ಮ, ಬೆಂಗಳೂರಿನ ಖಾಸಗಿ ಆರ್.ವಿ. ಎಂಜಿನಿಯರಿಂಗ್ ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ದವರು. ನೂತನ ಕುಲಪತಿ ಆಯ್ಕೆ ಹಿನ್ನೆಲೆಯಲ್ಲಿ ಎಲ್ಲರ ಚಿತ್ತ ಈಗ ಕಾಂಗ್ರೆಸ್ ಸರ್ಕಾರದತ್ತ ನೆಟ್ಟಿದೆ.
ಕ್ಯಾಂಪಸ್ ಇಲ್ಲದೆ ಕಂಗಾಲಾಗಿದ್ದ ತುಮಕೂರು ವಿವಿಗೆ ಒಂದು ನೆಲೆಯನ್ನು ಒದಗಿಸಿದ ಕೀರ್ತಿ ಸಂಸ್ಥಾಪಕ ಕುಲಪತಿ ಡಾ.ಓ. ಅನಂತರಾಮಯ್ಯ. ಇವರ ಶ್ರಮದ ಫಲವಾಗಿ, ತುಮಕೂರು ವಿವಿಗೆ ತುಮಕೂರು ನಗರದ ಮಧ್ಯಭಾಗದಲ್ಲೇ ಇರುವ ಸರ್ಕಾರಿ ಕಲಾ ಹಾಗೂ ವಿಜ್ಞಾನ ಕಾಲೇಜಿನ ವಿಸ್ತಾರವಾದ ಜಾಗ ಸಿಕ್ಕಿದ್ದು. ನಂತರ ಯುಜಿಸಿ ಮಾನ್ಯತೆ ಪಡೆಯಲು ಅನುಕೂಲವಾಗಿದ್ದು ಬಹಿರಂಗ ಸತ್ಯ. ಮೈಸೂರು ವಿವಿಯಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿದ್ದ ಡಾ.ಓ. ಅನಂತರಾಮಯ್ಯ ಇರುವ ಅತ್ಯಲ್ಪ ಜಾಗದಲ್ಲೇ ರಾಷ್ಟ್ರಮಟ್ಟದ ವಿಚಾರಸಂಕಿರಣ, ಕಾರ್ಯಕ್ರಮಗಳನ್ನು ಆಯೋಜಿಸಿ ಗಮನ ಸೆಳೆದರು. ತುಮಕೂರು ಹೊರ ವಲಯದ ಹೆಬ್ಬೂರು, ನಾಗವಲ್ಲಿ, ಊರ್ಡಿಗೆರೆ, ದೇವರಾಯನದುರ್ಗದ ಬಳಿ ವಿವಿಗೆ ಜಾಗ ಸಿಕ್ಕಿದರೂ ಅರಣ್ಯಕಾಯ್ದೆ ಹಿನ್ನೆಲೆಯಲ್ಲಿ ತುಮಕೂರು ವಿವಿಗೆ ಒಂದು ನೆಲೆ ಸಿಕ್ಕದೆ ಹೋಯಿತು. ಇದು ಈಗಲೂ ಹಾಗೆ ಮುಂದುವರೆದಿದೆ. ಆದರೆ ಅನಂತರಾಮಯ್ಯ ತುಮಕೂರು ವಿಜ್ಞಾನ ಹಾಗೂ ಕಲಾ ಕಾಲೇಜಿನ ವಿಶಾಲ ಕ್ಯಾಂಪಸ್ನ್ನು ತುಮಕೂರು ವಿವಿ ತೆಕ್ಕೆಗೆ ತೆಗೆದುಕೊಳ್ಳುವುದರ ಮೂಲಕ ವಿವಿಗೆ ಒಂದು ಕಾಯಂ ನೆಲೆ ಒದಗಿಸಿದರು ಎಂಬುದರಲ್ಲಿ ಎರಡು ಮಾತಿಲ್ಲ. ನಂತರ ಬಂದ ಕ್ಯಾಂಪಸ್ ಸದುಪಯೋಗ ಮಾಡಿಕೊಂಡ ಡಾ.ಎಸ್.ಸಿ. ಶರ್ಮ ಒಂದಷ್ಟು ಕಟ್ಟಡಗಳನ್ನು ನಿರ್ಮಿಸಿ, ರಾಷ್ಟ್ರ ಮಟ್ಟದ ವಿಚಾರ ಸಂಕಿರಣಗಳನ್ನು ಆಯೋಜಿಸಿ, ರಾಷ್ಟ್ರ-ಅಂತಾರಾಷ್ಟ್ರೀಯ ಗಣ್ಯರಿಂದ ಉಪನ್ಯಾಸ, ವಿದೇಶಿ ನೊಬೆಲ್ ವಿಜ್ಞಾನಿಗಳಿಂದ ಉಪನ್ಯಾಸ ಏರ್ಪಡಿಸಿ ಅವರಿಗೆ ಗೌರವ ಪ್ರಾಧ್ಯಾಪಕ ಹುದ್ದೆ ನೀಡಿ, ಖ್ಯಾತ ನಾಮರ ಕಂಚಿನ ಪ್ರತಿಮೆಗಳನ್ನು ನಿರ್ಮಿಸಿ, ಮ್ಯೂಸಿಯಂ ನಿರ್ಮಿಸಿ ವಿವಿಗೆ ಒಂದು ವಿಶಿಷ್ಟತೆ ನೀಡಿದರು.
ಪತ್ರಕರ್ತರನ್ನೇ ಕೈಬಿಟ್ಟರು: ತುಮಕೂರು ವಿವಿ ಆರಂಭವಾದಾಗಿನಿಂದಲೂ ಅಕಾಡೆಮಿಕ್ ಕೌನ್ಸಿಲ್ ಮೀಟಿಂಗ್ಗಳಿಗೆ ಪತ್ರಕರ್ತರಿಗೆ ಆಹ್ವಾನವಿರುತ್ತಿತ್ತು. ವಿವಿ ಖುದ್ದಾಗಿ ಪತ್ರಕರ್ತರಿಗೆ ಆಹ್ವಾನ ನೀಡುತ್ತಿತ್ತು. ಸಂಸ್ಥಾಪಕ ಕುಲಪತಿ ಡಾ.ಓ. ಅನಂತರಾಮಯ್ಯ ತಮ್ಮ ನಿವೃತ್ತಿಯವರೆಗೆ ಚಾಚೂ ತಪ್ಪದೇ ಈ ಕಾನೂನನ್ನು ಪಾಲಿಸಿದರು. ನಂತರ ಬಂದ ಡಾ.ಎಸ್.ಸಿ. ಶರ್ಮ ಈ ಕಾನೂನನ್ನು ಮೊದ-ಮೊದಲು ಪಾಲಿಸಿದರೂ, ನಂತರ ಏಕಾಏಕಿ ಕಾರಣ ನೀಡದೆ ಕೈಬಿಟ್ಟರು.
ಗುಟ್ಟಾಗಿ ಲೋಗೋ ಬದಲಿಸಿದರು: ನಂತರ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿದ್ದ ವಿವಿ ಕ್ಯಾಂಪಸ್ನ್ನು ಶರ್ಮ, ಅನಂತರಾಮಯ್ಯನವರ ಶ್ರಮದೊಂದಿಗೆ ಸಿಕ್ಕಿದ ಸರ್ಕಾರಿ ವಿಜ್ಞಾನ ಕಾಲೇಜು ಕ್ಯಾಂಪಸ್ಗೆ ಬದಲಿಸಿದರು. ನಂತರ ಏಕಾಏಕಿ, ಗುಟ್ಟಾಗಿ ತುಮಕೂರು ಜಿಲ್ಲೆಯ ಇತಿಹಾಸವನ್ನು ಬಿಂಬಿಸುವ ಲೋಗೋವನ್ನು
ಬದಲಿಸಿದರು. ಜಿಲ್ಲೆಯ ಎಲ್ಲ ವರ್ಗದ ಜನತೆಯಿಂದ ತೀವ್ರ ಪ್ರತಿಭಟನೆ ಎದುರಿಸಿದರು. ಲೋಗೋ ಬದಲಾವಣೆಗೆ ಸಮರ್ಪಕ ಕಾರಣ ನೀಡುವಲ್ಲಿ ವಿಫಲರಾದರು. ಅಷ್ಟೇಕೆ ಜಗತ್ತಿನ ಯಾವುದೇ ದೇಶದಲ್ಲಿ, ಯಾವುದೇ ವಿಶ್ವ ವಿದ್ಯಾಲಯದಲ್ಲಿ ಲೋಗೋ ಬದಲಾದ ಉದಾಹರಣೆ ನೀಡಿ ಎಂದು ಪ್ರತಿಭಟನಾಕರರು ಆಗ್ರಹಿಸಿದರೂ, ಉತ್ತರ ನೀಡುವಲ್ಲಿ ಶರ್ಮ ವಿಫಲರಾದರು. ಅಂದಿನ ರಾಜ್ಯ ಸರ್ಕಾರ, ರಾಜ್ಯಪಾಲರವರೆಗೆ ದೂರು ದಾಖಲಾಯಿತು. ಆದರೆ ಲೋಗೋ ಬದಲಾಗಲಿಲ್ಲ.
ವಿದ್ಯಾರ್ಥಿಗಳ ಸಂಖ್ಯೆ ಕಡಿತ : ಹಾಗೆಯೇ ಗುಣಮಟ್ಟದ ಶಿಕ್ಷಣದ ಹೆಸರಿನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಗೆ ವಿದ್ಯಾರ್ಥಿಗಳ ಸಂಖ್ಯೆಯನ್ನು ಕಡಿಮೆಗೊಳಿಸಿ, ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಕಡಿತಗೊಳಿಸಿ, ಮತ್ತಷ್ಟು ವಿವಾದಕ್ಕೊಳಗಾದರು. ಹಾಸ್ಟೆಲ್ ವಿದ್ಯಾರ್ಥಿಗಳ ವಿರುದ್ಧ ವಿನಾಕಾರಣ ಕೇಸು ದಾಖಲಿಸಲು ಅವಕಾಶ ಮಾಡಿಕೊಟ್ಟು, ನಂತರ ಕಾನೂನು ಸಚಿವ ಸುರೇಶ್ ಕುಮಾರ್ ಮತ್ತಿತರರ ಮಧ್ಯಪ್ರವೇಶದಿಂದ ಕೇಸನ್ನು ವಾಪಸ್ ತೆಗೆದುಕೊಳ್ಳುವ ಪ್ರಸಂಗವನ್ನು ಕುಲಪತಿ ಶರ್ಮ ಎದುರಿಸಿದರು. ಡಾ.ಎಸ್.ಸಿ. ಶರ್ಮ ಸುದ್ದಿಗೋಷ್ಠಿ ಕರೆಯುವುದನ್ನೇ ಕೈಬಿಟ್ಟರು. ಘಟಿಕೋತ್ಸವದ ವೇಳೆ ವರ್ಷಕ್ಕೊಮ್ಮೆ ಸುದ್ದಿಗೋಷ್ಠಿ ಕರೆಯುವ ಹೊಸ ಸಂಪ್ರದಾಯವನ್ನು ಹುಟ್ಟಿಹಾಕಿದರು.
ಅಭಿವೃದ್ಧಿ- ವಿವಾದ: ಒಟ್ಟಾರೆ ಡಾ. ಶರ್ಮ ಒಂದಷ್ಟು ಅಭಿವೃದ್ಧಿ, ಮತ್ತೊಂದಷ್ಟು ವಿವಾದಗಳನ್ನು ಹುಟ್ಟು ಹಾಕಿ, ಹಳೇ ಮಾರ್ಕ್ಸ್ಕಾರ್ಡ್ನಲ್ಲಿನ ಹಳೇ ಲೋಗೋದಂತಹ ಸಮಸ್ಯೆ, ಪದವಿ, ಸ್ನಾತಕೋತ್ತರ ಪದವಿಗೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವಂತಹ ವಿಷಯ, ಸಮಸ್ಯೆಗಳನ್ನು ಒಡ್ಡಿ ಸಮಸ್ಯೆಯೊಡ್ಡಿ ತಮ್ಮ ಸ್ಥಾನವನ್ನು ತೆರವುಗೊಳಿಸಿದ್ದಾರೆ. ನೂತನ ಕುಲಪತಿ ಶರ್ಮರ ನಿಲುವುಗಳಿಗೆ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಈಗ ಹಂಗಾಮಿ ಕುಲಪತಿಯಾಗಿ ಪ್ರೊ. ಡಿ. ಶಿವಲಿಂಗಯ್ಯ ಕಾರ್ಯನಿರ್ವಹಿಸುತ್ತಿದ್ದು, ತುಮಕೂರು ವಿವಿ ಶೀಘ್ರದಲ್ಲೇ ನೂತನ ಕುಲಪತಿಯವರನ್ನು ಪಡೆಯಲಿದ್ದು, ಎಲ್ಲರ ಚಿತ್ತ ಕಾಂಗ್ರೆಸ್ ಸರ್ಕಾರ ಹಾಗೂ ರಾಜ್ಯಪಾಲರತ್ತ ನೆಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

