ತುಮಕೂರು

ಧರ್ಮ, ಧಾರ್ಮಿಕ ಚಿಂತನೆಗಳಿಂದ ಶಾಂತಿ, ನೆಮ್ಮದಿ ಸಾಧ್ಯ

Published On :

ಗುಬ್ಬಿ: ಧರ್ಮ ಮತ್ತು ಧಾರ್ಮಿಕ ಚಿಂತನೆಗಳಿಂದ ಮಾತ್ರ ಸಾಮಾಜಿಕ ವ್ಯವಸ್ಥೆಯಲ್ಲಿ ಶಾಂತಿ ಮತ್ತು ನೆಮ್ಮದಿ ಪಡೆಯಲು ಸಾಧ್ಯ ಎಂದು ಬೆಂಗಳೂರಿನ ಕೊಳದ ಮಠದ ಡಾ. ಶಾಂತವೀರ ಮಹಾಸ್ವಾಮಿ ತಿಳಿಸಿದರು.
 ಪಟ್ಟಣದಲ್ಲಿ ವೀರಶೈವ ಸಮಾಜ ಮತ್ತು ವೀರಶೈವ ಯುವಕ ಸಂಘದ ಸಹಯೋಗದಲ್ಲಿ ನಿರ್ಮಿಸಿರುವ ನೂತನ ವೀರಶೈವ ಸಮಾಜ ಕಾರ್ಯಾಲಯದ ಉದ್ಘಾಟನೆ ಹಾಗೂ ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವೀರಶೈವ ಮಠಗಳು ಅಕ್ಷರ ಮತ್ತು ಅನ್ನದಾಸೋಹಕ್ಕೆ ಮಹತ್ತರ ಕೊಡುಗೆ ನೀಡಿದ್ದು, ಜಾತ್ಯತೀತ ಮನೋಭಾವನೆ ಹೊಂದಿವೆ. ಎಲ್ಲಾ ವರ್ಗದವರನ್ನು ಸಮಾನತೆಯಿಂದ ಕಾಣುತ್ತಿವೆ ಎಂದರು. ವೀರಶೈವ ಧರ್ಮ ಎಲ್ಲಾ ಧರ್ಮಕ್ಕಿಂತಲೂ ಶ್ರೇಷ್ಠವಾದದು. 12ನೇ ಶತಮಾನದಲ್ಲಿ ಬಸವಾದಿ ಪ್ರಮಥರು ಧರ್ಮದ ಜೊತೆಗೆ ಮಾನವೀಯ ನೆಲೆಗಟ್ಟಿನಲ್ಲಿ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಎಲ್ಲಾ ವರ್ಗದವರು ಒಂದೇ ಎಂಬ ಮನೋಭಾವನೆಯಿಂದ ಅನುಭವ ಮಂಟಪದ ಮೂಲಕ ಮಹತ್ವದ ಸಾಧನೆ ಮಾಡಿದ್ದರು. ಅವರ ತತ್ವಾದರ್ಶಗಳು ಪ್ರಸ್ತುತ ಸಾಮಾಜಿಕ ಬದುಕಿನಲ್ಲಿ ಪ್ರತಿಯೊಬ್ಬರು ಅಳವಡಿಸಿಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದರು.
ನಿರಾಸಕ್ತಿ: ಮಹತ್ವದ ಮುಜರಾಯಿ ಇಲಾಖೆ ಬಗ್ಗೆ ಅಧಿಕಾರಿಗಳು ನಿರಾಸಕ್ತಿ ವಹಿಸುತ್ತಿದ್ದು, ಸರ್ಕಾರ ಗಂಭೀರ ಚಿಂತನೆ ನಡೆಸಿ ಕೂಡಲೇ ಮುಜರಾಯಿ ಇಲಾಖೆಯನ್ನು ಕಂದಾಯ ಇಲಾಖೆಯಿಂದ ಬೇರ್ಪಡಿಸಿ ಬೇರೆ ಬೇರೆ ಇಲಾಖೆಯಂತೆ ಪ್ರತ್ಯೇಕ ಇಲಾಖೆಯನ್ನಾಗಿ ಮಾಡಿ ರಾಜ್ಯದಲ್ಲಿರುವ 48ಸಾವಿರ ಮುಜರಾಯಿ ದೇವಾಲಯಗಳ ಸಮಗ್ರ ಅಭಿವೃದ್ಧಿ ಸೇರಿದಂತೆ ದೇವಾಲಯಗಳನ್ನೇ ನಂಬಿರುವ ಲಕ್ಷಾಂತರ ಅರ್ಚಕರು ಹಾಗೂ ಸಿಬ್ಬಂದಿಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಧರ್ಮದಿಂದ ಸಾಧ್ಯ: ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ ಧರ್ಮ ಮತ್ತು ಧಾರ್ಮಿಕ ಚಿಂತೆಗಳಿಂದ ಮಾತ್ರ ಉತ್ತಮ ಸಮಾಜ ನಿರ್ಮಿಸಲು ಸಾಧ್ಯವಿದ್ದು ಇಂದಿನ ಯುವಜನಾಂಗ ಧಾರ್ಮಿಕ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಿಸುವಂತೆ ಕರೆ ನೀಡಿದರು. ವೀರಶೈವ ಸಮುದಾಯ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಮಾಜದ ಅಭಿವೃದ್ಧಿಗೆ ಮಹತ್ವದ ಕಾರ್ಯಗಳನ್ನು ಮಾಡುತ್ತಿದ್ದು ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಭವನಕ್ಕೆ ಎಲ್ಲಾ ರೀತಿಯ ನೆರವು ಮತ್ತು ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸಮಾರಂಭದಲ್ಲಿ ಶಿವಗಂಗೆ ಮೇಲಣಗವಿ ಮಠದ ಶ್ರೀಮಲಯಶಾಂತಮುನಿ, ಶಿವಾಚಾರ್ಯಸ್ವಾಮೀಜಿ, ದೊಡ್ಡಗುಣಿ ಹಿರೇಮಠದ ರೇವಣಸಿದ್ದೇಶ್ವರ ಸ್ವಾಮೀಜಿ, ವೀರಶೈವ ಸಮಾಜದ ಅಧ್ಯಕ್ಷ ಕೆ. ಗಂಗಾಧರ್, ಉಪಾಧ್ಯಕ್ಷ ಜಿ.ಆರ್. ಶಿವಕುಮಾರ್, ಕಾರ್ಯದರ್ಶಿ ಬಸವರಾಜು, ಖಜಾಂಚಿ ಜಿ.ಆರ್. ಸುರೇಶ್, ನಿರ್ದೇಶಕರಾದ ರಾಜೇಶ್.ಬಿ. ಸಿ.ಎಂ.ಶಾಸ್ತ್ರಿ, ಕೆ.ವಿ.ನಟರಾಜು, ಜಿ.ಸಿ. ರಾಜೇಂದ್ರಪ್ರಸಾದ್, ಜಿ.ಸಿ.ರುದ್ರಮೂರ್ತಿ, ರೇಣುಕಪ್ಪ, ಮಹದೇವಪ್ಪ, ಜಯಪ್ರಕಾಶ್, ಟಿ.ಜಿ.ರಾಜು ಇತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.