ಲೋಕಾಯುಕ್ತರ ಭೇಟಿ ಮಾಹಿತಿ ಕೊರತೆಗೆ ಆಕ್ಷೇಪ
ಕ.ಪ್ರ. ವಾರ್ತೆ , ಪಾವಗಡ , ಮೇ 24
ಅಧಿಕಾರಿಗಳ ವಿರುದ್ಧ ಸಾಕಷ್ಟು ಆರೋಪಗಳಿದ್ದು ಲೋಕಾಯುಕ್ತರ ಭೇಟಿಯ ಮಾಹಿತಿ ಕೊರತೆಯಿಂದ ದೂರು ನೀಡುವವರ ಸಂಖ್ಯೆ ಕಡಿಮೆ ಆಗುತ್ತಿರುವುದಾಗಿ ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ಪಟ್ಟಣಕ್ಕೆ ಲೋಕಾಯುಕ್ತ ಡಿವೈಎಸ್ಪಿ ಸಿದ್ಧಲಿಂಗಣ್ಣನವರ್ ಆಗಮಿಸಿದ್ದು ಸಾರ್ವಜನಿಕರಿಗೆ ಮಾಹಿತಿ ಕೊರತೆ ಹಿನ್ನೆಲೆಯಲ್ಲಿ ತಾಪಂ, ಕೃಷಿ, ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಕೇವಲ 2 ಎರಡೇ ಎರಡು ದೂರುಗಳು ಮಾತ್ರ ಲೋಕಾಯುಕ್ತರಿಗೆ ಬಂದಿದ್ದವು.
ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು 2010ರಲ್ಲಿ ಅನುಷ್ಠಾನ ಮಾಡಿದ 10ಲಕ್ಷ ವೆಚ್ಚದ ಡಿ ಫ್ಲೋರೈಡ್ ಪ್ಲಾಂಟೇಷನ್ ತಾಲೂಕಿನ 21ಗ್ರಾಮಗಳಲ್ಲಿ ನಿರ್ಮಿಸಿದ್ದಾರೆ. ರಾಜವಂತಿ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ಈ ಘಟಕಗಳು ನಿಂತು 2 ವರ್ಷ ಕಳೆದರೂ ಸರಿಪಡಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದು ಜಿಪಂ ಎಇಇ ಡಿ.ಫ್ಲೋರೈಡ್ ಪ್ಲಾಂಟೇಷನ್ ನಿರ್ಮಾಣದ ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಲಕ್ಷಾಂತರ ರು.ಗಳು ದುರುಪಯೋಗವಾಗಿದೆ ಎಂದು ಆರೋಪಿಸಿ ರೈತ ಸಂಘದ ಅಧ್ಯಕ್ಷ ವಿ.ನಾಗಭೂಷಣರೆಡ್ಡಿ ದೂರಿದರು.
ದೂರನ್ನು ಪಡೆದ ಲೋಕಾಯುಕ್ತ ಡಿವೈಎಸ್ಪಿ ಸಂಬಂಧಪಟ್ಟ ಎಂಜಿನಿಯರ್ ಅವರನ್ನು ವಿಚಾರಿಸಿ ಸ್ಥಗಿತಗೊಂಡ ಪ್ಲಾಂಟೇಷನ್ಗಳ ತನಿಖೆ ಹಾಗೂ ಘಟಕಗಳನ್ನು ಅಳವಡಿಸಿದ ಗ್ರಾಮಗಳ ವಿವರ ಕೇಳಿದಾಗ ವಿವರ ನೀಡಲು ತಡಬಡಿಸಿದ ಎಂಜಿನಿಯರ್ ಗಂಗಾಧರ್ ಸಬೂಬ್ ಹೇಳಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿದ ಲೋಕಾಯುಕ್ತರು ಎಂಜಿನಿಯರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಸರಿಯಾಗಿ ದಾಖಾಲಾತಿ ನಿರ್ವಹಿಸಿ ಎಂದು ಎಚ್ಚರಿಸಿದರು.
ವ್ಯವಸ್ಥಾಪಕರ ವಿರುದ್ಧ ದೂರು: ಸಾರ್ವಜನಿಕರಿಗೆ ಸಾಲಸೌಲಭ್ಯ ಸೇರಿದಂತೆ ಬ್ಯಾಂಕಿಗೆ ಬಂದ ಗ್ರಾಹಕರೊಂದಿಗೆ ಅನುಚಿತ ವರ್ತನೆ ಮಾಡುವ ಪಟ್ಟಣದ ವೈಶ್ಯ ಬ್ಯಾಂಕ್ ವ್ಯವಸ್ಥಾಪರೊಬ್ಬರ ಕಾರ್ಯವೈಖರಿ ಬಗ್ಗೆ ವಿವರಿಸಿದ ಮತ್ತೊಬ್ಬ ರೈತ ಸಂಘದ ಅಧ್ಯಕ್ಷ ರಾಮಕೃಷ್ಣರಾವ್ ವ್ಯವಸ್ಥಾಪಕರ ವಿರುದ್ಧ ದೂರ ನೀಡಿ ಕ್ರಮಕ್ಕೆ ಒತ್ತಾಯಿಸಿದರು.
ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಮೊರಾರ್ಜಿ ವಸತಿ ಶಾಲೆಗಳಿಗೆ ಪರೀಕ್ಷೆ ಬರೆದ 1500 ವಿದ್ಯಾರ್ಥಿಗಳ ಪೈಕಿ ಬರಿ 250 ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಲ್ಲಿ ಪ್ರವೇಶಾವಕಾಶ ನೀಡುವುದರಿಂದ ಪರೀಕ್ಷೆ ಬರೆದು ಫೇಲಾದ ಬಡ ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗುವುದಲ್ಲದೇ ವಸತಿ ನಿಲಯಗಳ ಪ್ರವೇಶವಕಾಶದಿಂದ ವಂಚಿತರಾಗುತ್ತಾರೆಂದು ಮುಖಂಡ ನಾಗಭೂಷಣ್ರೆಡ್ಡಿ ಲೋಕಾಯುಕ್ತರಿಗೆ ದೂರಿದರು.
ಕೃಷಿ ಇಲಾಖೆಯಲ್ಲಿ ಸರ್ಕಾರಿ ಸೌಲಭ್ಯಗಳ ಮಾಹಿತಿ ಸೇರಿದಂತೆ ಬೆಳೆ ನಷ್ಟಕ್ಕೀಡಾದ ರೈತರಿಗೆ ಪರಿಹಾರ ಕಲ್ಪಿಸುವಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಧರ್ ವಿಫಲರಾಗಿದ್ದಾರೆಂದು ಆರೋಪಿಸಿ ವಿ.ನಾಗಭೂಷಣರೆಡ್ಡಿ ದೂರಿದಿದ್ದು. ದೂರನ್ನು ಸ್ವೀಕರಿಸಿದ ಲೋಕಾಯುಕ್ತ ಅಧಿಕಾರಿಗಳು ಶ್ರೀಧರ್ ಅವರನ್ನು ವಿಚಾರಿಸಿದಾಗ ಅಂಕಿ ಅಂಶಗಳ ಸಮೇತ ವಿವರ ನೀಡಿದ ಕೃಷಿ ಸಹಾಯ ನಿರ್ದೇಶಕ ಶ್ರೀಧರ್ ಕೇಂದ್ರ ಸರ್ಕಾರದಿಂದ ಪರಿಹಾರ ಬಿಡುಗಡೆಯಾಗಿದ್ದು ನಷ್ಟಕೀಡಾದ 5 ಎಕರೆ ಒಳಗಿನ ಸಣ್ಣ ರೈತರಿಗೆ 2ಸಾವಿರ ರು.ಗಳ ಸಹಾಯ ಧನವನ್ನು ಮೇ 25, ಶನಿವಾರದಿಂದಲೇ ಹಂಚಿಕೆ ಮಾಡುವುದಾಗಿ ತಿಳಿಸಿದರು.
ಸಭೆಯಲ್ಲಿ ತಾಪಂ ಇಒ ರಂಗನಾಥ್, ಕಂದಾಯ ಶಿರಸ್ತೇದಾರ್ ಮಾರಪ್ಪ, ಸಮಾಜ ಕಲ್ಯಾಣಾಧಿಕಾರಿ ವೈ.ಆರ್.ಚೌದರಿ ಸೇರಿದಂತೆ ಎಲ್ಲಾ ಇಲಾಖಾ ಮಟ್ಟದ ಅಧಿಕಾರಿಗಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

