ಅಭಿವೃದ್ಧಿಗೆ ಆದ್ಯತೆ, ದ್ವೇಷ ರಾಜಕಾರಣ ಇಲ್ಲ
ತುಮಕೂರು: ಹಣದ ಹೊಳೆ, ಜಾತಿ ವಿಷ ಧಿಕ್ಕರಿಸಿ ಮಧುಗಿರಿ ಮತದಾರರು ತಮ್ಮನ್ನು ಆಶೀರ್ವದಿಸಿದ್ದಾರೆ ಎಂದು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಎನ್. ರಾಜಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಸಕರಾಗಿ ಆಯ್ಕೆಯಾದ ನಂತರ ತುಮಕೂರಿನಲ್ಲಿ ಕರೆದಿದ್ದ ತಮ್ಮ ಪ್ರಥಮ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ತಮ್ಮನ್ನು ಸೋಲಿಸುವ ಉದ್ದೇಶದಿಂದ ಹಣ ಹಾಗೂ ಜಾತಿಯನ್ನು ಪ್ರಧಾನವಾಗಿ ಬಳಸಲಾಯಿತು. ಆದರೆ, ಮಧುಗಿರಿಯ ಪ್ರಜ್ಞಾವಂತ ಜನತೆ ತಮ್ಮನ್ನು ಆಯ್ಕೆ ಮಾಡುವುದರ ಮೂಲಕ ಹಣ ಹಾಗೂ ಜಾತಿಯನ್ನು ತಿರಸ್ಕರಿಸಿದರು. ಮಧುಗಿರಿ ಜನತೆ ತಮ್ಮ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿದ್ದಾರೆ. ಅವರ ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿಯಲ್ಲಿ, ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
ನೀರಿನ ಸಮಸ್ಯೆಗೆ ಆದ್ಯತೆ: ಮಧುಗಿರಿಯಲ್ಲಿ ಗುಣಮಟ್ಟದ ಕುಡಿಯುವ ನೀರಿನ ಸಮಸ್ಯೆಯಿದೆ. ಕುಡಿಯುವ ನೀರಿಗೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದ್ದೆ. ಅದರಂತೆ ಕಾರ್ಯೋನ್ಮುಖನಾಗಿದ್ದೇನೆ. 30 ಬೋರ್ವೆಲ್ಗಳನ್ನು ಹೊಸದಾಗಿ ಕೊರೆಯಲಾಗಿದೆ. ಶನಿವಾರದೊಳಗೆ ಅಧಿಕಾರಿಗಳಿಗೆ ಸಂಪರ್ಕ ಕಲ್ಪಿಸಲು ಗಡುವು ನೀಡಿದ್ದೆ. ಅದರಂತೆ ಅಧಿಕಾರಿಗಳು ಶೀಘ್ರವಾಗ ಸ್ಪಂದಿಸಿದ್ದಾರೆ. ಆದಷ್ಟು ಶೀಘ್ರವಾಗಿ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಪರಿವರ್ತಕ ಅಳವಡಿಕೆ ಶೀಘ್ರ: ಮಧುಗಿರಿ ತಾಲೂಕಿನಲ್ಲಿ ಸುಟ್ಟು ಹೋಗಿರುವ ಟಿಸಿಗಳ ಸಂಖ್ಯೆ ಹೆಚ್ಚಿದೆ. ಅಂದಾಜು 100 ಕ್ಕೂ ಹೆಚ್ಚು ಟಿಸಿಗಳ ಅಗತ್ಯವಿದೆ. ತುಮಕೂರು ಬೆಸ್ಕಾಂ ಕಚೇರಿಯಲ್ಲಿ ಮುಖ್ಯ ಇಂಜಿನಿಯರ್ ಸಮ್ಮುಖದಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದೇನೆ. ಸುಟ್ಟಿರುವ ಟಿಸಿಗಳನ್ನು ಕೂಡಲೇ ಬದಲಾಯಿಸುವ ಭರವಸೆಯನ್ನು ಬೆಸ್ಕಾಂ ಅಧಿಕಾರಿಗಳು ನೀಡಿದ್ದಾರೆ ಎಂದು ರಾಜಣ್ಣ ತಿಳಿಸಿದರು.
ಒಳಚರಂಡಿಗೆ ಒತ್ತು: ಮಧುಗಿರಿ ಪಟ್ಟಣಕ್ಕೆ ರು. 33.66 ಕೋಟಿ ವೆಚ್ಚದಲ್ಲಿ ಒಳಚರಂಡಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಈ ಕುರಿತು ಬೆಂಗಳೂರಿನಲ್ಲಿ ತಾಂತ್ರಿಕ ಸಮಿತಿ ಸಭೆ ಕೂಡ ಆಗಿದೆ. ಮಧುಗಿರಿಯಲ್ಲಿ ಆಸ್ಪತ್ರೆಯಿದೆ. ಆದರೆ ತಜ್ಞ ವೈದ್ಯರ ಕೊರತೆಯಿದೆ. ಆಸ್ಪತ್ರೆಯಿಲ್ಲ ಅನ್ನೋ ಭಾವನೆ ಜನತೆಯಲ್ಲಿದೆ. ಗ್ರಾಪಂ ಸಭೆ ನಡೆಸಿದ್ದೇನೆ. ಅವರ ಅನಿಸಿಕೆ ಕೇಳಿದ್ದೇನೆ. ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಬಹಳಷ್ಟು ಜಾತಿಗಳಿಗೆ ಸ್ಮಶಾನ ಜಾಗವಿಲ್ಲ. ಹೀಗಾಗಿ ಪ್ರತಿ ಗ್ರಾಮದಲ್ಲೂ ಸರ್ಕಾರಿ ಸ್ಮಶಾನ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಸರ್ಕಾರಿ ಜಮೀನು ಒತ್ತುವರಿ, ಕೆರೆ ಒತ್ತುವರಿ ಕುರಿತಂತೆ ಕ್ರಮ ಕೈಗೊಳ್ಳಲಾಗುವುದು. ಒತ್ತುವರಿ ಮಾಡಿಕೊಂಡಿರುವ ನಿರ್ಗತಿಕರನ್ನು ಗಮನಿಸಿ, ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮಧುಗಿರಿಯಲ್ಲಿರುವ ತಲಪರಿಗೆಗಳನ್ನು ಪುನರುಜ್ಜೀವನಗೊಳಿಸಬೇಕಾಗಿದೆ. ರೇಲ್ವೆ ಯೋಜನೆಗೆ ಬೇಕಾದ ಜಾಗ ವಶ, ಕುಡಿಯುವ ನೀರಿನ ವಾಟರ್ಗ್ರಿಡ್ ಯೋಜನೆ ಸೇರಿದಂತೆ ಎಲ್ಲಕ್ಕೂ ತಮ್ಮ ಬೆಂಬಲವಿದೆ ಎಂದು ರಾಜಣ್ಣ ತಿಳಿಸಿದರು.
ಕಾನೂನು ಉಲ್ಲಂಘನೆಗೆ ಅವಕಾಶವಿಲ್ಲ: ಮಟ್ಕಾ, ಜೂಜು ಸೇರಿದಂತೆ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಿಗೆ ಮಧುಗಿರಿಯಲ್ಲಿ ಅವಕಾಶವಿಲ್ಲ. ಎಲ್ಲಕ್ಕೂ ಕಡಿವಾಣ ಹಾಕಲಾಗುವುದು. ಒಟ್ಟಾರೆ ಮಧುಗಿರಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ತಮ್ಮ ಆದ್ಯತೆ ಎಂದು ರಾಜಣ್ಣ ಸ್ಪಷ್ಟಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

