ಉತ್ತಮ ಕೆಲಸದಿಂದ ನಾಯಕನಾಗಲು ಸಾಧ್ಯ
ಕ.ಪ್ರ. ವಾರ್ತೆ ಮಧುಗಿರಿ ಮೇ 26
ರೈತರ, ಬಡವರ ಹಾಗೂ ಕೂಲಿಕಾರ್ಮಿಕರ ಪರವಾಗಿ ಕೆಲಸ ನಿರ್ವಹಿಸಿದಾಗ ಮಾತ್ರ ಉತ್ತಮ ನಾಯಕತ್ವದ ಗುಣ ಹೊಂದಿ ರಾಜಕೀಯವಾಗಿ ಬೆಳೆಯಲು ಸಾಧ್ಯ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ನೂತನ ಶಾಸಕ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು.
ಪಟ್ಟಣದ ಎಂಎನ್ಕೆ ಸಮುದಾಯ ಭವನದಲ್ಲಿ ಮಧುಗಿರಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಆಶ್ರಯದಲ್ಲಿ ನೂತನ ಶಾಸಕ ಕೆ.ಎನ್.ರಾಜಣ್ಣ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಹಕಾರಿ ಅಂದೋಲನದ ಮೂಲಕ ರಾಜಕೀಯ ಕ್ಷೇತ್ರಕ್ಕೆ ಪಾದರ್ಪಣೆ ಮಾಡಿದ ನನಗೆ ರಾಜಕೀಯ ಶಕ್ತಿ ಕೊಟ್ಟವರು ಮಧುಗಿರಿ ಕ್ಷೇತ್ರದ ಪ್ರಜ್ಞಾವಂತ ಮತದಾರರು. ಈ ಅಭಿನಂದನೆ ಮತದಾರರಿಗೆ ಸಲ್ಲಬೇಕು ಎಂದು ಪ್ರತಿಪಾದಿಸಿದ ರಾಜಣ್ಣ, ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ ತೃಪ್ತಿ ನನಗಿದೆ. ಅಲ್ಲಿ ಯಾರ ಹಂಗಿಲ್ಲದೆ ರೈತರ, ಬಡ ಜನರ ಬೇಡಿಕೆಗಳಿಗೆ ಸ್ಪಂದಿಸಿ ಕೆಲಸ ಮಾಡುವ ಅವಕಾಶ ಸಕ್ಕಿದೆ. ಅದು ಕಡಿಮೆ ಕೆಲಸ ಎಂದು ಯಾರು ಭಾವಿಸಬಾರದು. ಅಧಿಕಾರ ಸದ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಧ್ವನಿ ಇಲ್ಲದ ಬಡ ಜನರಿಗೆ ನೆರವು ನೀಡುವ ನಿಟ್ಟಿನಲ್ಲಿ ಆರ್ಥಿಕವಾಗಿ ಸದೃಢಗೊಳಿಸಲು ಅಧ್ಯಕ್ಷರು, ಕಾರ್ಯದರ್ಶಿಗಳು ಚಿಂತನೆ ಮಾಡಬೇಕಿದೆ ಎಂದರು.
ಸಾಲ ಸೌಲಭ್ಯ: ಕೃಷಿ ಭೂಮಿ ಇಲ್ಲದವರಿಗೂ ಅವರ ಕಸುಬಿನ ಆಧಾರದ ಮೇಲೆ ಸಹಕಾರಿ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ ಕಲ್ಪಿಸುವುದಾಗಿ ಘೋಷಿಸಿದ ರಾಜಣ್ಣ, ಹೈನುಗಾರಿಕೆ, ಕುರಿ ಸಾಕಣಿಕೆ ಹೀಗೆ ಹತ್ತು ಹಲವು ಉಪ ಕಸುಬುಗಳನ್ನು ಕೈಗೊಂಡು ಆರ್ಥಿಕವಾಗಿ ಮುಂದೆ ಬರಬೇಕು. ಸ್ವಶಕ್ತಿ, ಸ್ತ್ರೀಶಕ್ತಿ ಸಂಘಗಳು ನನಗೆ ಹೆಚ್ಚು ಆಶೀರ್ವಾದ ಮಾಡಿದ್ದಾರೆ. ಹಾಗಾಗಿ ಶೇ.4ರ ಬಡ್ಡಿ ದರದಲ್ಲಿ ಸಂಘಗಳಿಗೆ ಸಾಲ ನೀಡಲಾಗಿದೆ. ಬರುವ ದಿನಗಳಲ್ಲಿ ತಾಲೂಕಿನಲ್ಲಿ ಖಾತೆ ಅಂದೋಲನ ಪ್ರಾರಂಭಿಸಿ ನೆನೆಗುದಿಗೆ ಬಿದ್ದಿರುವ ಖಾತೆ ಬದಲಾವಣೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು ಅರ್ಹ ಫಲಾನುಭವಿಗಳಿಗೆ ಬೆಳೆ ಸಾಲ ಕೊಡುವುದಾಗಿ ಭರವಸೆ ನೀಡಿದರು. ಮಧುಗಿರಿ ಕ್ಷೇತ್ರದ ಜನತೆ ನನ್ನ ಮೇಲೆ ಪ್ರೀತಿ, ವಿಶ್ವಾಸವಿಟ್ಟು ಗೆಲ್ಲಿಸಿದ್ದಾರೆ. ನನ್ನ ಜವಾಬ್ದಾರಿ ಬೆಟ್ಟದಷ್ಟಿದೆ. ಅದರ ನಿವಾರಣೆಗೆ ನಿಮ್ಮೆಲ್ಲರ ಸಹಕಾರವಿದ್ದಾಗ ನಾನು ಕೂಡ ಆತ್ಮವಿಶ್ವಾಸದಿಂದ ಕೆಲಸ ಮಾಡುತ್ತೇನೆ. ಈ ಭಾಗಕ್ಕೆ ಯಾವುದಾದರು ರೂಪದಲ್ಲಿ ಶಾಶ್ವತ ನೀರಾವರಿ ಯೋಜನೆ ಕೈಗೆತ್ತಿಕೊಂಡು ನೀರು ಹರಿಸುವುದಾಗಿ ರಾಜಣ್ಣ ಭರವಸೆ ನೀಡಿದರು.
ದಕ್ಷ ಆಡಳಿತಗಾರ: ಶೀಕ್ಷೇತ್ರ ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ರಾಜಣ್ಣ ನೇರ ನಡೆ, ನುಡಿಯ ದಕ್ಷ ಆಡಳಿತಗಾರ. ಜನಪರ ಕೆಲಸ ಮಾಡುವಲ್ಲಿ ಎತ್ತಿದ ಕೈ ಎಂದು ಕೊಂಡಾಡಿದರು.
ತಾ.ಕೃಷಿ ಪತ್ತಿನ ಸಹಕಾರ ಸಂಘಗಳ ಬಂಧುಗಳು ನೂತನ ಶಾಸಕ ಕೆ.ಎನ್.ರಾಜಣ್ಣ ದಂಪತಿಗಳಿಗೆ ನೆನಪಿನ ಕಾಣಿಕೆ ನೀಡಿ ಅದ್ಧೂರಿ ಸನ್ಮಾನ ಮಾಡಿ ಗೌರವಿಸಿದರು.
ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಎನ್. ಗಂಗಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಮಲ್ಲಿಕಾರ್ಜುನಯ್ಯ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಗುಟ್ಟೆ ಚಿಕ್ಕರಂಗಪ್ಪ, ಎಂ.ಜಿ. ಶ್ರೀನಿವಾಸಮೂರ್ತಿ ಮಾತನಾಡಿದರು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾ.ಪಂ.ಅಧ್ಯಕ್ಷೆ ಯಶೋಧ ರಾಜಣ್ಣ, ಉಪಾಧ್ಯಕ್ಷೆ ಸಿದ್ಧಗಂಗಾಂಭಿಕೆ, ಡಿಸಿಸಿ ಬ್ಯಾಂಕ್ ನಿರ್ದೇಶಕ ನಾರಾಯಣಸ್ವಾಮಿ, ಮುಖಂಡ ಬಾಲೇನಹಳ್ಳಿ ಶಿವಣ್ಣ, ತುಂಗೋಟಿ ರಾಮಣ್ಣ, ಪಿ.ಸಿ.ಕೃಷ್ಣಾರೆಡ್ಡಿ, ಜಿ.ಪಂ.ಸದಸ್ಯೆ ಶಾಂತಲ ರಾಜಣ್ಣ, ಸುಮನ, ಪುರಸಬೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ಕೆ.ಪ್ರಕಾಶ್, ಎಂ.ವಿ.ಗೋವಿಂದರಾಜು, ಸದಸ್ಯರಾದ ಗೋಪಿನಾಥ್, ಅಲೀಂ, ಶ್ರೀನಿವಾಸ್, ರಾಜ್ಗೋಪಾಲ್, ವ್ಯವಸ್ಥಾಪಕ ಸೀತರಾಮು, ರಂಗನಾಥಬಾಬು, ತಾಲೂಕಿನ ಎಲ್ಲ ಸಹಕಾರಿ ಕ್ಷೇತ್ರದ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿ ವರ್ಗ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ರಂಗನಾಥಬಾಬು ನಿರೂಪಿಸಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

