ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ರವಿಕಿರಣ್ ವಜಾಗೊಳಿಸಿ
ಕ.ಪ್ರ. ವಾರ್ತೆ ಕುಣಿಗಲ್ ಮೇ 27
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಬಿ.ಬಿ. ರಾಮಸ್ವಾಮಿಗೌಡರ ಸೋಲಿಗೆ ಕಾರಣವಾದ, ಬಂಡಾಯ ಕಾಂಗ್ರೆಸ್ ಅಭ್ಯರ್ಥಿ ರವಿಕಿರಣ್ ಅವರನ್ನು ಪಕ್ಷದಿಂದ ವಜಾಗೊಳಿಸುವಂತೆ ಇಲ್ಲವಾದಲ್ಲಿ ಬೆಂಗಳೂರಿನ ಕೆಪಿಸಿಸಿ ಕೇಂದ್ರ ಕಚೇರಿ ಮುಂದೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ತಿಳಿಸಿದರು.
ಸೋಮವಾರ, ಕಾಂಗ್ರೆಸ್ ಕಾರ್ಯಾಲಯವಾದ ನಮ್ಮ ಮನೆಯಲ್ಲಿ, ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಕಾಂಗ್ರೆಸ್ ಸುಭದ್ರವಾಗಿದ್ದು, ಕಾಂಗ್ರೆಸ್ನ ಅಧಿಕೃತ ಅಭ್ಯರ್ಥಿ ಬಿ.ಬಿ.ರಾಮಸ್ವಾಮಿಗೌಡ ಗೆಲ್ಲುವ ಎಲ್ಲಾ ಲಕ್ಷಣಗಳು ನಿಚ್ಚಳವಾಗಿದ್ದವು. ಆದರೆ ಕಾಂಗ್ರೆಸ್ ಪಕ್ಷದಡಿಯಲ್ಲೆ ಕೆಲಸ ಮಾಡಿಕೊಂಡು ದಿಢೀರ್ ಬಂಡಾಯ ಎದ್ದು ಸ್ಪರ್ಧಿಸಿದ ರವಿಕಿರಣ್ ಅವರಿಂದಾಗಿ ರಾಮಸ್ವಾಮಿ ಗೌಡರ ಸೋಲಿಗೆ ಕಾರಣವಾಯಿತು. ಬಂಡಾಯ ಸ್ಪರ್ಧಿ ರವಿಕಿರಣ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ವಜಾಗೊಳಿ ಸುವಂತೆ ಜಿಲ್ಲಾ ಕಮಿಟಿಗೆ, ಕೇಂದ್ರ ಕಮಿಟಿಗೆ ಕುಣಿಗಲ್ ಹಾಗೂ ಹುಲಿಯೂರುದುರ್ಗ ಬ್ಲಾಕ್ ಸಮಿತಿಯಿಂದ ಪತ್ರ ಬರೆದು ಒತ್ತಾಯಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ನಿಜಕ್ಕೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಬೇಸರ ತರಿಸಿದೆ ಎಂದರು. ಇದೇ 28ರೊಳಗೆ ರವಿಕಿರಣ್ ಅವರನ್ನು ವಜಾಗೊಳಿಸದಿದ್ದಲ್ಲಿ, 29ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿ ಮುಂಭಾಗದಲ್ಲಿ ಧರಣಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದರು.
ಅಧೀರರಾಗಬೇಕಿಲ್ಲ: ತಾಲೂಕಿನಲ್ಲಿ ಕಾಂಗ್ರೆಸ್ ಸದೃಢವಾಗಿದ್ದು ಕಾರ್ಯಕರ್ತರು ಅಧೀರರಾಗಬೇಕಿಲ್ಲ, ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಮಾಜಿ ಶಾಸಕ, ತಾಲೂಕಿನ ಧೀಮಂತ ರಾಜಕಾರಣಿ, ಬಿ.ಬಿ.ರಾಮಸ್ವಾಮಿಗೌಡರ ನೇತೃತ್ವದಲ್ಲಿ ಹಲವು ಜನಪರ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಿದ್ದು, ಕಾರ್ಯಕರ್ತರು ಧೈರ್ಯಕಳೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದರು.
ಖಂಡನೆ: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧವಾಗಿ ಕೆಲಸ ಮಾಡಿದ ಕೆಲ ಮುಖಂಡರು, ಈಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವುದನ್ನು ಕಂಡು, ಅಧಿಕಾರದ ಲಾಲಸೆಗಾಗಿ ಕಾಂಗ್ರೆಸ್ ಪಕ್ಷ ಸೇರಲು ಮುಂದಾಗುತ್ತಿರುವುದನ್ನು ಕುಣಿಗಲ್ ಹಾಗೂ ಹುಲಿಯೂರುದುರ್ಗ ಬ್ಲಾಕ್ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದ ಅವರು, ಮುಂದಿನ ದಿನಗಳಲ್ಲಿ ಇಂತಹ ವ್ಯಕ್ತಿಗಳ ಕುಯುಕ್ತಿ ಹಾಗೂ ಅಧಿಕಾರ ಲಾಲಸೆ ರಾಜಕಾರಣದ ತಂತ್ರದ ಬಗ್ಗೆ ಹೈಕಮಾಂಡ್ನ ಗಮನ ಸೆಳೆದು ಇಂತಹವರಿಗೆ ತಕ್ಕ ಪಾಠ ಕಲಿಸಲಾಗುವುದೆಂದರು.
ಛತ್ತೀಸ್ಘಡದಲ್ಲಿ ನಕ್ಸಲೀಯರ ಕೃತ್ಯಕ್ಕೆ ಬಲಿಯಾದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸಿ, ನಕ್ಸಲೀಯರ ಕುಕೃತ್ಯವನ್ನು ಖಂಡಿಸಲಾಯಿತು. ಮುಖಡರಾದ ತುವ್ವೇಕೆರೆ ಗಿರೀಶ್, ಕುಮಾರ್, ಲಕ್ಷ್ಮಣಗೌಡ, ಪರಮೇಶ್, ಪುರಸಭಾ ಸದಸ್ಯ ಅರುಣಕುಮಾರ್ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

