ತುಮಕೂರು

ನೀರಿಲ್ಲದೆ ಪರದಾಡುತ್ತಿರುವ ನೀರೆಯರು

Published On :

ತಿಪಟೂರು: ನಗರಕ್ಕೆ ನೀರು ಸರಬರಾಜಾಗುತ್ತಿದ್ದ ಈಚನೂರು ಕೆರೆ ಹೇಮಾವತಿ ನೀರಿಲ್ಲದೆ ಬತ್ತಿ ಹೋಗಿ 2ತಿಂಗಳುಗಳಾಗಿವೆ. ಆದರೆ ನಗರಸಭೆ ಮಾತ್ರ ನೀರು ಬರಿದಾಗುವ ಎಲ್ಲಾ ಸೂಚನೆಗಳಿದ್ದರೂ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ನಗರದ ನಾಗರಿಕರನ್ನು ಹನಿ ಹನಿ ನೀರಿಗೂ ಅಲೆದಾಡಿಸುತ್ತಿದೆ. ಹಾಲಿ ಇರುವ ಬೋರ್ವೆಲ್ ನೀರನ್ನಾದರೂ ವಿದ್ಯುತ್ ಇರುವ ವೇಳೆಯಲ್ಲಿ ಸಮರ್ಪಕವಾಗಿ ಬಿಡುತ್ತಾರೆಂದು ನಾಗರಿಕರು ಪಬ್ಲಿಕ್ ನಲ್ಲಿಗಳ ನೀರನ್ನು ಕಾಯ್ದು ಕುಳಿತು ನಲ್ಲಿ ತಿರುವಿದರೆ ಕೇವಲ ಗಾಳಿ ಬರುತ್ತದೆಯೇ ವಿನಹ ನೀರಂತೂ ಬರುವುದಿಲ್ಲ. ಬೇಜವಾಬ್ದಾರಿಯಾಗಿ ನಡೆದುಕೊಳ್ಳುತ್ತಿರುವ ಸಿಬ್ಬಂದಿಯಿಂದ ನಾಗರಿಕರು ತಮ್ಮ ನಿತ್ಯದ ಕೆಲಸ ಕಾರ್ಯಗಳನ್ನು ಬದಿಗೊತ್ತಿ ನಲ್ಲಿ ನೀರು ಹಿಡಿಯಲು ಬೆಳಿಗ್ಗೆಯಿಂದ ಸಂಜೆಯವರೆಗೂ ಕಾಯಬೇಕಾದ ದುಃಸ್ಥಿತಿ ಉಂಟಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ.   ಎಷ್ಟೋ ಬಡಾವಣೆಗಳಲ್ಲಿ ಸಿಬ್ಬಂದಿ ನೀರು ಬಿಡಲು ನಿಗದಿತ ಸಮಯ ಅಥವಾ ವಿದ್ಯುತ್ ಇರುವ ಎಲ್ಲಾ ವೇಳೆಯಲ್ಲೂ ಬೋರ್ವೆಲ್ ನೀರು ಬಿಟ್ಟರೆ ಕಷ್ಟಪಟ್ಟು ದಿನಕ್ಕೆ ಅಗತ್ಯವಾಗಿರುವ ನೀರನ್ನಾದರೂ ನಾಗರಿಕರು ಹಿಡಿದುಕೊಳ್ಳಬಹುದು. ಆದರೆ ಸಿಬ್ಬಂದಿ ಮನಸೋ ಇಚ್ಛೆ ತಮಗೆ ಬೇಕೆನಿಸಿದಾಗ ಮಾತ್ರ ನೀರು ಬಿಡುತ್ತಿರುವುದನ್ನು ಕೇಳುವವರೇ ಇಲ್ಲದಂತಾಗಿದೆ. ಸಿಬ್ಬಂದಿಯ ಬೇಜವಾಬ್ದಾರಿಯ ವರ್ತನೆಗೆ ಬೇಸತ್ತ ಮಹಿಳೆಯರು, ಮಕ್ಕಳು ನೀರು ಹಿಡಿಯಲಾಗದೆ ನಗರಸಭೆ ಮತ್ತು ನಗರಸಭಾ ಸದಸ್ಯರಿಗೆ ಹಿಡಿಶಾಪ ಹಾಕುತ್ತಾ ಬೀದಿ ಬೀದಿ ತಿರುಗಿ ಬೀದಿ ನಲ್ಲಿಗಳಲ್ಲಿ ತೊಟ್ಟಿಕ್ಕುತ್ತಿರುವ ಕಡೆ ಗಂಟೆಗಟ್ಟಲೆ ನಿಂತು ನೀರು ತುಂಬಿಸಿಕೊಂಡು ಬರಬೇಕಾದ ಸ್ಥಿತಿ ನಗರದಲ್ಲಿ ಉಂಟಾಗಿದೆ.  ಈ ಬಗ್ಗೆ ನಗರಸಭೆ ಪೌರಾಯುಕ್ತ, ಎಂಜಿನಿಯರಿಂಗ್ ವಿಭಾಗ ಮತ್ತು ಸದಸ್ಯರು ಬೇಜವಾಬ್ದಾರಿಯಿಂದಿರುವುದು ಮಾತ್ರ ನಗರಸಭೆಯ ಆಡಳಿತ ವೈಖರಿ ಅದ್ವಾನವಾಗಿರುವುದನ್ನು ಎತ್ತಿ ತೋರಿಸುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.