ಉಪವಿಭಾಗಾಧಿಕಾರಿಯಿಂದ ವಿವಿಧ ಕಡತಗಳ ಪರಿಶೀಲನೆ
ಕ.ಪ್ರ.ವಾರ್ತೆ ಕುಣಿಗಲ್ ಮೇ 28
ಉಪವಿಭಾಗಾಧಿಕಾರಿ ನಕುಲ್, ಮಂಗಳವಾರ ಬೆಳಗ್ಗೆ ಪುರಸಭೆ ಕಾರ್ಯಾಲಯಕ್ಕೆ ಭೇಟಿ ನೀಡಿ, ಪುರಸಭೆಯ ವಿವಿಧ ಕಡತಗಳನ್ನು ಪರಿಶೀಲಿಸಿ, ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದರು.
ಮಂಗಳವಾರ ಬೆಳಗ್ಗೆ 11ಗಂಟೆಗೆ ಪುರಸಭೆಗೆ ಭೇಟಿ ನೀಡಿದ ಉಪವಿಭಾಗಾಧಿಕಾರಿ, ಕಚೇರಿಯಲ್ಲಿದ್ದ ಸಾರ್ವಜನಿಕರ ಕುಂದುಕೊರತೆ ವಿವಾಚರಿಸಿ, ಮುಖ್ಯಾಧಿಕಾರಿಗಳ ಕೊಠಡಿಗೆ ತೆರಳಿ, ಶೇ.22.75, ಪ.ಜಾತಿ.ಪಪಂಗಡದ ಅಭಿವೃದ್ಧಿ ಕಾರ್ಯಕ್ರಮ, ಶೇ.7.5 ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿ ಕಾರ್ಯಕ್ರಮ, ಶೇ.3 ವಿಕಲಾಂಗ ಕಲ್ಯಾಣ ಕಾರ್ಯಕ್ರಮಗಳಿಗೆ ಕಳೆದ ವರ್ಷ ವೆಚ್ಚ ಮಾಡಿರುವುದಕ್ಕೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಿ, ಕಂದಾಯ ವಿಭಾಗದ ಕೆಲ ದಾಖಲೆಗಳನ್ನು ಪರಿಶೀಲಿಸಿದರು, ನಂತರ, ಪುರಸಭೆಯಲ್ಲಿ ಕಂದಾಯ ವಿಭಾಗದ ಖಾತೆ ಕಡತಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸೂಕ್ತ ಸ್ಥಳವಕಾಶದ ಕೊರತೆ ಇರುವ ಕಾರಣ ಸಮರ್ಪಕ ರೆಕಾರ್ಡ್ ರೂಂ ನಿರ್ವಹಣೆ ನಿಟ್ಟಿನಲ್ಲಿ ಮುಖ್ಯಾಧಿಕಾರಿ ಶುಭಾ, ಕಂದಾಯ ಅಧಿಕಾರಿ ಮುರಳಿ, ನಿರೀಕ್ಷಕ ರಮೇಶ್ರೊಂದಿಗೆ ಚರ್ಚಿಸಿದ ಅವರು, ಪುರಸಭೆಯ ಎಸ್ಜೆಎಸ್ಆರ್ವೈ ಕಟ್ಟಡದಲ್ಲಿ ರೆಕಾರ್ಡ್ ರೂಂ ನಿರ್ವಹಣೆಗೆ ಕಟ್ಟಡ ದುರಸ್ತಿಗೊಳಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಪುರಸಭೆ ಅವರಣದ ರೋಟರಿ ಬಾಲಭವನದಲ್ಲಿ ಜನಪ್ರತಿನಿಧಿಗಳ ಸಭಾ ಭವನ ನವೀಕರಣ ಸ್ಥಳಕ್ಕೆ ಭೇಟಿ ನೀಡಿ, ಸಿಬ್ಬಂದಿಗೆ ಸಲಹೆ, ಸೂಚನೆ ನೀಡಿದ ನಂತರ, ವಾರ್ಡ್ ನಂಬರ್ 13ರಲ್ಲಿನ ವಿವಾದಿತ ಪ್ರದೇಶಕ್ಕೆ ಭೇಟಿ ನೀಡಲು ತೆರಳಿದರು.
ಪರ-ವಿರೋಧ ಚರ್ಚೆ: ಉಪವಿಭಾಗಾಧಿಕಾರಿಗಳು ಪುರಸಭೆಯ ವಿವಾದಿತ ಪ್ರದೇಶಕ್ಕೆ ಭೇಟಿ ನೀಡಿದಾಗ, ನೂತನ ಪುರಸಭೆ ಸದಸ್ಯೆ ಜಯಶೀಲ, ಕೆ.ಎಲ್.ಹರೀಶ್, ಮುಖಂಡರಾದ ನಾಗರಾಜ್ ಇತರೆ ನಾಗರಿಕರು, ಇದು ಪುರಸಭೆ ಸ್ವತ್ತಾಗಿದ್ದು, ತೆರೆದಬಾವಿ ಹಾಗೂ ನಿವೇಶನವಾಗಿದೆ. ಪುರಸಭೆ ಸ್ವತ್ತನ್ನು ಖಾಸಗಿಯವರು ಕಬಳಿಸುತ್ತಿದ್ದು, ರಕ್ಷಿಸುವಂತೆ ಮುಖ್ಯಾಧಿಕಾರಿಗಳಿಗೆ ಮನವಿ ನೀಡಿದರೂ ಕ್ರಮ ಕೈಗೊಂಡಿಲ್ಲ. ಯಾವುದೇ ಕಾರಣಕ್ಕೂ ಪುರಸಭೆ ಸ್ವತ್ತು ಖಾಸಗಿ ಪಾಲಾಗಲು ಬಿಡದಂತೆ ಕ್ರಮವಹಿಸಲು ಮನವಿ ಮಾಡಿ, ನೀರಿರುವ ತೆರದಬಾವಿಯನ್ನು ಮುಚ್ಚಿರುವುದು ಸರಿಯಲ್ಲ ಎಂದರು.
ದಾಖಲೆ ಇದೆ: ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನಿವೇಶನ ತಮ್ಮದೆಂದು ಪ್ರತಿಪಾದಿಸುವ ಚಲುವರಾಜು, ನಿಯಮಾನುಸಾರ ತಾವೇ ಜಮೀನು ಖರೀದಿಸಿದ್ದು, ಸದರಿ ಪ್ರದೇಶಕ್ಕೆ ಪುರಸಭೆಯಿಂದ ಹಕ್ಕುಬದ್ಧ ದಾಖಲೆ ಇದೆ, ಪುರಸಭೆ ತಮಗೆ ಪ್ರದೇಶ ಸ್ವಾಧೀನಕ್ಕೆ ಕೊಡುತ್ತಿಲ್ಲ ಮತ್ತು ಆ ಪ್ರದೇಶದಲ್ಲಿ ಪುರಸಭೆ ಸ್ವತ್ತೆಂದು ನಾಮಫಲಕ ಹಾಕಿರುವುದು ಕಾನೂನು ಬಾಹಿರ ಎಂದ ವಾದಿಸಿ, ಉಪವಿಭಾಗಾಧಿಕಾರಿಗಳ ಮುಂದೆ ವಾಗ್ವಾದ ನಡೆಸಿದರು. ಪುರಸಭೆ ಮಾಜಿ ಸದಸ್ಯ ಜಯರಾಮ್, ಇತರರು ಚಲುವರಾಜುರನ್ನು ಬೆಂಬಲಿಸಿ, ಸ್ಥಳದಲ್ಲೆ ದಾಖಲೆ ಪರಿಶೀಲಿಸುವಂತೆ ಉಪವಿಭಾಗಾಧಿಕಾರಿಗೆ ದುಂಬಾಲು ಬಿದ್ದರು.
ಉಪವಿಭಾಗಾಧಿಕಾರಿ ನಕುಲ್, ತಾವು ಸ್ಥಳ ಪರಿಶೀಲನೆಗೆ ಆಗಮಿಸಿದ್ದು, ಏನೆ ದಾಖಲೆಗಳಿದ್ದರೂ ಮುಖ್ಯಾಧಿಕಾರಿಗಳಿಗೆ ಸಲ್ಲಿಸುವಂತೆ, ತೆರೆದ ಬಾವಿಯಾಗಿರುವುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿದಂತೆ ಮುನ್ನಚ್ಚರಿಕೆ ಕ್ರಮ ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪ್ರದೇಶದ ಮೇಲಿನ ಹಕ್ಕುಸ್ಯಾಮ್ಯ ಯಾರಿಗೆ ಎಂದು ತೀರ್ಮಾನವಾಗುವವರೆಗೂ ಯಾವುದೇ ಕಾಮಗಾರಿ ನಡೆಸದಂತೆ ಚಲುವರಾಜು ಕಡೆಯವರಿಗೆ ಸೂಚಿಸಿದರು.
ಸೌಹಾರ್ದದಿಂದ ಸಮಸ್ಯೆ ಬಗೆಹರಿಸಿಕೊಳ್ಳಿ: ಇದಕ್ಕೊಪ್ಪಿದ ಚಲುವರಾಜು, ಇನ್ನು ಪ್ರದೇಶ ಯಾರದೆಂದು ತೀರ್ಮಾನವಾಗದಿರುವ ಕಾರಣ ಪುರಸಭೆ ಸ್ವತ್ತೆಂದು ಹಾಕಿರುವ ಫಲಕ ತೆರವುಗೊಳಿಸುವಂತೆ ಮನವಿ ಮಾಡಿದ ಮೇರೆಗೆ, ಉಪವಿಭಾಗಾಧಿಕಾರಿ ಸದರಿ ಫಲಕ ತೆರವುಗೊಳಿಸಲು ಸೂಚಿಸಿ, ಶಾಂತಿ, ಸೌಹಾರ್ದದಿಂದ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಉಭಯತ್ರರಿಗೂ ಸಲಹೆ ನೀಡಿ ತೆರಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

