ಜಲಧಿಗೆರೆ ಗ್ರಾಮ ಸ್ವಚ್ಛತೆಗೆ ಅನುದಾನ
ಕ.ಪ್ರ. ವಾರ್ತೆ ಕುಣಿಗಲ್ ಮೇ 31
ತಾಲೂಕಿನ ಜಲಧಿಗೆರೆ ಗ್ರಾಮವನ್ನು ಸಂಪೂರ್ಣ ಸ್ವಚ್ಛ ಗ್ರಾಮವನ್ನಾಗಿಸುವತ್ತಾ
ಸ್ಥಳೀಯ ಗ್ರಾಪಂ ಹಾಗೂ ಗ್ರಾಮಸ್ಥರು ಸಂಕಲ್ಪಿಸಿ ಮುಂದೆ ಬಂದರೆ, ಕೇಂದ್ರ ಸರ್ಕಾರ ಹಾಗೂ ತಮ್ಮ ನಿಧಿಯಡಿಯಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ರಾಜ್ಯಸಭಾ ಸದಸ್ಯೆ ಡಾ.ಬಿ.ಜಯಶ್ರೀ ತಿಳಿಸಿದರು.
ತಾಲೂಕಿನ ಜಲಧಿಗೆರೆ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ತಮ್ಮ ನಿಧಿಯಡಿಯಲ್ಲಿನ ಪ್ರದೇಶಾಭಿವೃದ್ಧಿ ಯೋಜನಯಡಿ 34 ಲಕ್ಷ ವೆಚ್ಚದಲ್ಲಿ ನೂತನ ಶಾಲಾ ಕಟ್ಟಡಕ್ಕೆ, ಶುಕ್ರವಾರ ಜಲಧಿಗೆರೆ ದೇವಸ್ಥಾನದ ಆವರಣದಲ್ಲಿ, ನಡೆದ ಕಾರ್ಯಕ್ರಮದಲ್ಲಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಕೇಂದ್ರ ಸರ್ಕಾರದಿಂದ ಹಲವು ಜನಪರ ಯೋಜನೆಗಳಿವೆ. ಯೋಜನೆಗಳ ಸಮರ್ಪಕ, ಪ್ರಾಮಾಣಿಕ ಅನುಷ್ಠಾನಕ್ಕೆ ತಾವು ಪ್ರಾಮಾಣಿಕವಾಗಿ ಶ್ರಮಿಸಿದ್ದು, ತುಮಕೂರು ಜಿಲ್ಲೆಯೊಂದರಲ್ಲೇ 14 ಶಾಲಾ ಕಟ್ಟಡಗಳಿಗೆ ಅನುದಾನ ಬಿಡುಗಡೆಮಾಡಲಾಗಿದೆ ಎಂದರು.
ದೇಶಾದ್ಯಂತ ವಿವಿಧೆಡೆ ಶಾಲೆಗಳಲ್ಲಿ ಶೌಚಾಲಯ, ಆರೋಗ್ಯ ಕೇಂದ್ರ, ತುರ್ತುವಾಹನ ಪೂರೈಕೆಗೆ ನೀಡಲಾಗಿದೆ. ಜಲಧಿಗೆರೆ ಗ್ರಾಮ ನಿಜಕ್ಕೂ ಸ್ವಚ್ಛ ಗ್ರಾಮವಾಗುವ ದಿಸೆಯಲ್ಲಿ ಗ್ರಾಮಸ್ಥರು, ಎಲ್ಲಾ ಹಂತದ ಜನಪ್ರತಿನಿಧಿಗಳು ಮನಸು ಮಾಡಿ, ಪ್ರಾಮಾಣಿಕ ಅನುಷ್ಠಾನಕ್ಕೆ ಮುಂದಾಗುವಂತೆ ಕರೆ ನೀಡಿದ ಅವರು, ಬದ್ಧತೆ ಇಲ್ಲದೆ ಅನುಷ್ಠಾನ ಮಾಡಲು ಹೊರಟರೆ ಚರಂಡಿ ನಿರ್ಮಾಣಕ್ಕೆ ಹಾಕಿದ ಅನುದಾನ ನಿಡವಾಗಿ ಚರಂಡಿಪಾಲೇ ಆಗುವುದರಲ್ಲಿ ಅನುಮಾನ ಬೇಡ, ಗ್ರಾಮಸ್ಥರ, ಈ ಭಾಗದ ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ಮುಂದಾದರೆ ತಾವು ಶಕ್ತಿ ಮೀರಿ ಸಹಕರಿಸುವುದಾಗಿ ತಿಳಿಸಿದರು.
ಹಾಲಿ ಬೆಂಗಳೂರಿನ ವಾಸಿ, ಜಲಧಿಗೆರೆಯಲ್ಲಿ ಸಂಸದರ ಅನುದಾನ ಸೆಳೆಯಲು ಮೂಲ ಕಾರಣಕರ್ತರಾದ, ಕರ್ನಾಟಕ ನಾಟಕ ಅಕಾಡಮಿ ಮಾಜಿ ಅಧ್ಯಕ್ಷ ಶ್ರೀನಿವಾಸ್ ಜಿ.ಕಪ್ಪಣ್ಣ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸರ್ಕಾರಿ ಶಾಲೆಗಳೆಂದರೆ ಉದಾಸೀನ ಮನೋಭಾವ ನಿಜಕ್ಕೂ ಖಂಡನೀಯ, ರಾಜ್ಯದ ಅಥವಾ ದೇಶದ ಬಹುಪಾಲು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ, ರಾಜ್ಯದಲ್ಲಿ ಶಾಲೆಗಳು ಪ್ರಾರಂಭವಾಗುವ ದಿನದಂದು ಈ ಕಾರ್ಯಕ್ರಮ ಅಯೋಜನೆ ಅರ್ಥಪೂರ್ಣ, ಸರ್ಕಾರಿ ಶಾಲೆಗಳೆಂದರೆ ಕೇವಲ ಸರ್ಕಾರದ ಸವಲತ್ತು ವಿತರಿಸುವ ಶಾಲೆಗಳಲ್ಲ, ಅವು ಗ್ರಾಮಾಂತರ ಸೇರಿದಂತೆ ಪಟ್ಟಣ ಪ್ರದೇಶದಲ್ಲಿನ ಪ್ರತಿಭೆಗಳನ್ನು ಹೊರಜಗತ್ತಿಗೆ ಪರಿಚಯಿಸುವ ಜ್ಞಾನಕೇಂದ್ರಗಳಾಗಿವೆ ಎಂದರು.
ಚಿತ್ರನಟಿ ಗಿರಿಜಾಲೋಕೆಶ್, ಸಂಸದೆ ಜಯಶ್ರೀ ತಮ್ಮ ನಿಧಿಯಡಿಯಲ್ಲಿ ಸಂಕಷ್ಟದಲ್ಲಿರುವ ಕಲಾವಿದರ ನೆರವಿಗೆ ಸಹಾಯ ಹಸ್ತಚಾಚಬೇಕೆಂದರು.
ಮಾಜಿ ಸಚಿವೆ ರಾಣಿ ಸತೀಶ್, ಮುಂದಿನ ಪೀಳಿಗೆಯ ಇಂದಿನ ಮಕ್ಕಳಿಗೆ, ಉತ್ತಮ ಸಂಸ್ಕಾರಯುತ ಬುದ್ಧಿಮಾತು ಹೇಳಿ ಸಚ್ಚಾರಿತ್ರರನ್ನಾಗಿ ಮಾಡಬೇಕೆಂದರು. ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್, ಕುಣಿಗಲ್ ಪಟ್ಟಣ ಸೇರಿದಂತೆ ಯಡೆಯೂರಿನಲ್ಲಿ ಸಂಸದರ ನಿಧಿಯಿಂದ ಸುಸಜ್ಜಿತ ರಂಗಮಂದಿರ ನಿರ್ಮಾಣಕ್ಕೆ ಅನುದಾನ ನೀಡುವಂತೆ ಮನವಿ ಮಾಡಿದರು.
ಜಿಪಂ ಸದಸ್ಯ ಅರುಣ್ಕುಮಾರ್ ಅಧ್ಯಕ್ಷತೆವಹಿಸಿದ್ದು, ಕಲಾವಿದರಾದ ಹುಲಿವಾಹನ ಗಂಗಾಧರಯ್ಯ, ನಾಗರಾಜಮೂರ್ತಿ, ಅನಂದರಾಜು, ತಾಪಂ ಸದಸ್ಯ ಸಿದ್ದಲಿಂಗಯ್ಯ, ಯಡೆಯೂರು ಗ್ರಾಪಂ ಅಧ್ಯಕ್ಷ ಸಂಪತ್, ಉಪಾಧ್ಯಕ್ಷೆ ಮಂಜುಳಮ್ಮ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮೋಹನ್ಕುಮಾರ್, ಬಿಇಒ ಲೋಕೇಶ್, ಬಿಆರ್ಸಿ ಗುಲ್ಜಾರ್ ಆಹಮದ್, ಅಕ್ಷರ ದಾಸೋಹ ಯೋಜನಾಧಿಕಾರಿ ಡಿ.ಕೃಷ್ಣ, ಜಲಧಿಗೆರೆ ದೇವಸ್ಥಾನ ಸಮಿತಿ ಅಧ್ಯಕ್ಷ ದಾಸಪ್ಪ ಸೇರಿದಂತೆ ಸ್ಥಳೀಯ ಮುಖಂಡರು,ಶಾಲಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

