ತುಮಕೂರು

'ಬರ ಪಟ್ಟಿಗೆ ಸೇರಿಸದಿದ್ದರೆ ಹೋರಾಟ'

Published On :

ತಿಪಟೂರು: ಬರಪೀಡಿತ ತಾಲೂಕುಗಳ ಘೋಷಣೆ ಪಟ್ಟಿಯಿಂದ ಸತತವಾಗಿ ಬರಗಾಲಕ್ಕೆ ತುತ್ತಾಗಿ ತತ್ತರಿಸುತ್ತಿರುವ ತಿಪಟೂರು ತಾಲೂಕನ್ನು ಕೈಬಿಟ್ಟಿರುವುದನ್ನು ಖಂಡಿಸಿ, ಕೂಡಲೇ 2ನೇ ಪಟ್ಟಿಯಲ್ಲಿ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಬೇಕೆಂದು ತಾಲೂಕು ಕೆಜೆಪಿ ಮುಖಂಡ ಲೋಕೇಶ್ವರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕೆಜೆಪಿ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲೋಕೇಶ್ವರ, ತಾಲೂಕಿನ ಶಾಸಕರು ಆಡಳಿತ ಪಕ್ಷಕ್ಕೆ ಸೇರಿದವರಾದರೂ ಬರದಿಂದ ತತ್ತರಿಸುತ್ತಿರುವ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸುವಲ್ಲಿ ವಿಫಲರಾಗಿದ್ದಾರೆ. ತಾಲೂಕಿನ ರೈತರು ಹಲವಾರು ವರ್ಷಗಳಿಂದಲೂ ತೀವ್ರ ಬರದ ಹೊಡೆತಕ್ಕೆ ಸಿಲುಕಿ ತತ್ತರಿಸುತ್ತಿದ್ದರೂ ಶಾಸಕರು ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸಿ ಪಟ್ಟಿಗೆ ಸೇರಿಸುವ ಮೂಲಕ ತಾಲೂಕಿನ ಹಿತ ಕಾಯಬೇಕಿತ್ತು. ಜಿಲ್ಲಾಡಳಿತವೂ ಸಹ ತಾಲೂಕಿನ ವಾಸ್ತವ ಮಳೆ ವಿವರ ಹಾಗೂ ತಾಲೂಕಿನ ಸದ್ಯದ ಬರ ಪರಿಸ್ಥಿತಿ ಬಗ್ಗೆ ಸರ್ಕಾರಕ್ಕೆ ಸರಿಯಾದ ಮಾಹಿತಿ ನೀಡಿಲ್ಲದಿರುವುದೂ ಸಹ ಪಟ್ಟಿಯಿಂದ ಕೈಬಿಡಲು ಜಿಲ್ಲಾಡಳಿತದ ತಾರತಮ್ಯ ಕಾರಣವಾಗಿರುವುದು ಎದ್ದು ಕಾಣುತ್ತಿದೆ ಎಂದು ಲೋಕೇಶ್ವರ ಆಪಾದಿಸಿದರು.
ನೀರಿಗೆ ಹಾಹಾಕಾರ: ತಾಲೂಕಿನ ಕೆರೆಕಟ್ಟೆಗಳಿಗೆ ಏತ ನೀರಾವರಿ ಸೌಲಭ್ಯವಿದ್ದರೂ ಯಾವುದೇ ಕೆರೆಗಳನ್ನು ತುಂಬಿಸಲಾಗಿಲ್ಲ. ಕೆರೆಗಳಿಗೆ ನೀರು ಹರಿಯುವಂತಹ ಮಳೆಯೂ ಕಳೆದೆರಡು ವರ್ಷಗಳಿಂದ ಬಂದಿಲ್ಲದಿರುವುದೂ ಸಹ ತಾಲೂಕಿನ ಕೆರೆಗಳು ನೀರಿಲ್ಲದೆ ಒಣಗಿ ಹೋಗಿವೆ. ಅಂತರ್ಜಲ ಬತ್ತಿ ಹೋಗಿದ್ದು ಮುಂದಿನ ಬೇಸಿಗೆಯಲ್ಲಿ ಜನ, ಜಾನುವಾರುಗಳಿಗೆ ತಾಲೂಕಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಿರುವುದು ವಾಸ್ತವ ಸಂಗತಿಯಾದರೂ ತಾಲೂಕು ಮತ್ತು ಜಿಲ್ಲಾಡಳಿತ ಬರಪಟ್ಟಿಗೆ ತಾಲೂಕನ್ನು ಸೇರಿಸುವ ನಿಟ್ಟಿನಲ್ಲಿ ಉದಾಸೀನದಿಂದಿರುವುದು ಸರಿಯಲ್ಲ ಎಂದು ಲೋಕೇಶ್ವರ ತಿಳಿಸಿದರು.
ಜಿಲ್ಲಾ ಮಂತ್ರಿಗಳ ಉದಾಸೀನ: ಜಿಲ್ಲಾ ಉಸ್ತುವಾರಿ ಮಂತ್ರಿ ಟಿ.ಬಿ. ಜಯಚಂದ್ರ ಅವರು ತಾಲೂಕಿನ ಅಭಿವೃದ್ಧಿ ಬಗ್ಗೆ ಒತ್ತು ನೀಡುತ್ತಿಲ್ಲ. ಅಗತ್ಯ ಯೋಜನೆಗಳ ಬಗ್ಗೆಯೂ ತಾಲೂಕಿಗೆ ನ್ಯಾಯ ಒದಗಿಸದೆ ಕೇವಲ ಜಿಲ್ಲೆಯ ಕೆಲವೇ ತಾಲೂಕುಗಳಿಗೆ ಅದ್ಯತೆ ನೀಡುತ್ತಿರುವು ಸರಿಯಲ್ಲ. ಜಿಲ್ಲೆಯಲ್ಲಿಯೇ ತುಮಕೂರು ಬಿಟ್ಟರೆ ತಿಪಟೂರು ದೊಡ್ಡ ತಾಲೂಕಾಗಿದೆಯಲ್ಲದೆ ತೀವ್ರ ಬರಕ್ಕೆ ಈಡಾಗಿದ್ದು, ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆ ತೆಂಗು ಒಣಗಿ ಹೋಗುತ್ತಿದ್ದರೂ ಅದರ ಉಳಿವಿಗೆ ಸರ್ಕಾರದ ಮಟ್ಟದಲ್ಲಿ ವಿಶೇಷ ಯೋಜನೆ ರೂಪಿಸುವುದು. ಅಲ್ಲದೇ ನೊಂದ ರೈತರಿಗೆ ಸೂಕ್ತ ಪರಿಹಾರ ಕೊಡಿಸುವಲ್ಲಿಯೂ ಮಂತ್ರಿಗಳು ಉದಾಸೀನ ತೋರುತ್ತಿರುವುದು ವಿಪರ್ಯಾಸ. ತಾಲೂಕಿನ ಕೆರೆಗಳಿಗೆ ಹೊನ್ನವಳ್ಳಿ ಏತ ನೀರಾವರಿ ಮೂಲಕ ಶೀಘ್ರವಾಗಿ ನೀರು ತುಂಬಿಸಲು ಅಧಿಕಾರಿಗಳಿಗೆ ತಾಕೀತು ಮಾಡುವ ಮೂಲಕ ಜಿಲ್ಲಾ ಮಂತ್ರಿ ಜಯಚಂದ್ರ ಅವರು ತಿಪಟೂರಿನತ್ತ ತಮ್ಮ ಚಿತ್ತ ಹರಿಸಿ ತಾಲೂಕನ್ನು ಬರ ಪಟ್ಟಿಗೆ ಸೇರಿಸಿ ರೈತರಿಗೆ ಅಗತ್ಯ ಸೌಲಭ್ಯ ಒದಗಿಸಬೇಕೆಂದು ಲೋಕೇಶ್ವರ ಒತ್ತಾಯಿಸಿದರು.
ಹೋರಾಟದ ಎಚ್ಚರಿಕೆ: ತಾಲೂಕನ್ನು ಕೂಡಲೇ ಬರ ಪಟ್ಟಿಗೆ ಸೇರಿಸಬೇಕು. ಲಕ್ಷಾಂತರ ತೆಂಗಿನ ಮರಗಳು ಒಣಗಿ ಹೋಗಿದ್ದು ಅವುಗಳಿಗೆ ಸೂಕ್ತ ಪರಿಹಾರವನ್ನು ಶೀಘ್ರವಾಗಿ ನೀಡಬೇಕು. ಪಡಿತರ ಚೀಟಿಗಳ ವಿತರಣೆ ಕೂಡಲೇ ಆಗಬೇಕು. ಹೊನ್ನವಳ್ಳಿ ಏತ ನೀರಾವರಿ ವ್ಯಾಪ್ತಿಯ ಕೆರೆಗಳಿಗೆ ಶೀಘ್ರ ನೀರು ಹರಿಸಬೇಕು. ಇವುಗಳ ಬಗ್ಗೆ ಜಿಲ್ಲಾಡಳಿತ ಹಾಗೂ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ರಾಜ್ಯ ಕೆಜೆಪಿ ಸಹಕಾರದಿಂದ ತಾಲೂಕು ಕೆಜೆಪಿ ಘಟಕ ಉಗ್ರ ಹೋರಾಟ ಹಮ್ಮಿಕೊಳ್ಳಲಿದೆ ಎಂದು ಲೋಕೇಶ್ವರ ಎಚ್ಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.