ಯಾವ ಖುಷಿಗಾಗಿ ರಾಜ್ಯೋತ್ಸವ ಆಚರಣೆ?
ತಿಪಟೂರು: ಕನ್ನಡ ರಾಜ್ಯೋತ್ಸವವನ್ನು ಯಾತಕ್ಕಾಗಿ ನಾವು ಆಚರಿಸಬೇಕಿದೆ. ಕನ್ನಡ ನಶಿಸುತ್ತಿರುವುದಕ್ಕಾ, ಕನ್ನಡವನ್ನು ಕಾಪಾಡಿಕೊಂಡು ಉಳಿಸಿ ಬೆಳೆಸಲಾಗುತ್ತಿಲ್ಲವಲ್ಲ ಎಂಬ ನೋವಿಗಾ ಅಥವಾ ಲೂಟಿಯಾಗುತ್ತಿರುವ ಕನ್ನಡ ನಾಡಿನ ಸಂಪತ್ತನ್ನು ರಕ್ಷಿಸಲಾಗುತ್ತಿಲ್ಲವಲ್ಲ ಎಂಬ ಅಳಲಿಗೋ ಎಂದು ರಾಜ್ಯ ರೈತ ಸಂಘದ ವರಿಷ್ಠ ಹಾಗೂ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಬಸ್ ನಿಲ್ದಾಣದ ಆವರಣದಲ್ಲಿ ಕನ್ನಡ ರಕ್ಷಾಣ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು ಕನ್ನಡ ನಾಡಿನ ರೈತರ ಭೂಮಿಯೆಲ್ಲಾ ಪರಕೀಯ ಕಂಪನಿಗಳ ಪಾಲಾಗುತ್ತಿದೆ. ಅನ್ನ ಬೆಳೆಯುವ ಗ್ರಾಮೀಣ ಯುವಶಕ್ತಿಗೆ ಸರ್ಕಾರ ಪ್ರೋತ್ಸಾಹ ಅಥವಾ ನೂತನ ಯೋಜನೆಗಳನ್ನು ನೀಡುತ್ತಿಲ್ಲ. ಸಚಿನ್ ತೆಂಡಲ್ಕೂರ್ ಅಂತವರಿಗೆ ನಮ್ಮ ಸರ್ಕಾರಗಳು ಮೇಲೆ ಬಿದ್ದು ಭಾರತರತ್ನದಂತಹ ಮಹಾನ್ ಪ್ರಶಸ್ತಿಗಳನ್ನು ಹುಡುಕಿಕೊಂಡು ಹೋಗಿ ನೀಡುತ್ತಿವೆ. ನಮ್ಮ ದುರಾದೃಷ್ಟವೆಂದರೆ 40 ವರ್ಷ ಪೈರುಗಳನ್ನು ನಾಟಿ ಮಾಡಿದ ಮಹಿಳೆಯರೆಗೆ ಈವರೆಗೂ ಭಾರತರತ್ನದಂತಹ ಪ್ರಶಸ್ತಿಗಳನ್ನು ನೀಡಿವೆಯಾ ಎಂದು ಸಭಿಕರತ್ತ ಪುಟ್ಟಣ್ಣಯ್ಯನವರು ಪ್ರಶ್ನೆಗಳ ಸುರಿಮಳೆಗೈದರು.
ಉಳಿಸಿಕೊಳ್ಳಲಾಗಿದೆಯಾ?: ನಗರೀಕರಣದ ವ್ಯಾಮೋಹಕ್ಕೆ ಬಲಿಬಿದ್ದಿರುವ ನಮ್ಮ ಸರ್ಕಾರಗಳು ಕನ್ನಡಿಗರ ಭೂಮಿಯನ್ನು ಮನಸೋ ಇಚ್ಛೆ ಒಕ್ಕಲೆಬ್ಬಿಸುತ್ತಿವೆ. ಕನ್ನಡ ನಾಡಿನ 6 ಕೋಟಿ ಜನರಿಗೆ ಅನ್ನ ಬೆಳೆದು ನೀಡುತ್ತಿರುವ ರೈತರ ಬದುಕು ಹೇಗೆ ಛಿದ್ರವಾಗಿದೆ ಎಂಬುದನ್ನು ಸರ್ಕಾರ ಲೆಕ್ಕ ಹಾಕಿ ಪರಿಹಾರ ನೀಡಲು ಯಾವತ್ತಾದರೂ ಚಿಂತಿಸಿವೆಯಾ. ನಮಗೆ ದಕ್ಕಬೇಕಿರುವ ನೀರನ್ನಾದರೂ ನಾವು ಸಂಪೂರ್ಣವಾಗಿ ಬಳಸಿಕೊಳ್ಳಲಾಗಿದೆಯಾ. ಹೇಮಾವತಿ, ಕೃಷ್ಣಾ ಸೇರಿದಂತೆ ನಮ್ಮ ಡ್ಯಾಂಗಳ ನೀರನ್ನು ಸಂಪೂರ್ಣವಾಗಿ ಈವರೆಗೂ ಬಳಸಿಕೊಳ್ಳಲಾಗದಿರುವುದು ನಾಚಿಕೆಗೇಡಿನ ಸಂಗತಿ. ಹೀಗೆ ಕನ್ನಡ ನಾಡಿನ ಎಲ್ಲವಲ್ಲೂ ಹಾಳು ಮಾಡುತ್ತಿರುವ ಶಕ್ತಿಗಳನ್ನು ಮಟ್ಟಹಾಕಿ ಅವುಗಳನ್ನು ಉಳಿಸಿ ಬೆಳೆಸಲಾದರೂ ಸರ್ಕಾರಗಳು ಮುಂದಾಗಿವೆಯಾ ಎಂದು ಪ್ರಶ್ನಿಸಿದರು.
ತಾಯಿಯಿದ್ದಂತೆ: ಜೆಡಿಎಸ್ ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪ ಮಾತನಾಡಿ ಕನ್ನಡಿಗರ ಪಾಲಿಗೆ ಕನ್ನಡ ಭಾಷೆ ತಾಯಿಯಿದ್ದಂತೆ. ಆದರೆ ಇಂದು ಆ ತಾಯಿಯನ್ನು ಉಳಿಸಿಕೊಳ್ಳಲು ಹೋರಾಟ ಮಾಡುವ ಸ್ಥಿತಿಗೆ ನಾವು ಬಂದಿರುವುದು ಸರಿಯಾ. ಬೆಂಗಳೂರಿನಲ್ಲಂತೂ ಪರಕೀಯರ ಹಾವಳಿ ಮತ್ತು ಹೊರ ದೇಶ-ರಾಜ್ಯಗಳ ಕಂಪನಿಗಳಿಗೆ ನಮ್ಮ ಭೂಮಿಯನ್ನು ಕರಕರೆದು ನೀಡಿದ್ದಲ್ಲದೆ ಅವರಿಂದಲೇ ನಮ್ಮ ಭಾಷೆಗೆ ಕುತ್ತು ತಂದುಕೊಂಡಿರುವುದನ್ನು ಸರ್ಕಾರ ಆರಾಮವಾಗಿ ಸಹಿಸಿಕೊಂಡು ನಮ್ಮ ನೆಲದ ಮೇಲೆಯೇ ಪರಕೀಯರ ಏಳಿಗೆಗೆ ನಾವೇ ಸಹಕರಿಸುತ್ತಿರುವುದು ಕನ್ನಡಿಗರಿಗೆ ಮಾಡುತ್ತಿರುವ ಅವಮಾನವಲ್ಲವೇ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು. ಸಂಸದ ಬಸವರಾಜ್ ಮಾತನಾಡಿ ನಮ್ಮ ಸರ್ಕಾರ ರಾಜ್ಯದಲ್ಲೇ ಹುಟ್ಟಿ ಹರಿದು ಸಮುದ್ರ ಪಾಲಾಗುತ್ತಿರುವ ನೇತ್ರಾವತಿ ನದಿಯಂತಹ ಅಮೂಲ್ಯ ನೀರನ್ನು ಬರಪ್ರದೇಶಗಳ ಜನರ ಕೃಷಿ ಮತ್ತು ಕುಡಿಯಲು ಒದಗಿಸಲು ರೂಪಿಸಿರುವ ಯೋಜನೆಗಳನ್ನು ಹತ್ತಾರು ವರ್ಷ ಇಟ್ಟುಕೊಂಡು ಮೀನಮೇಷ ಎಣಿಸುತ್ತಿವೆ. ಈ ಮೂಲಕ ಕನ್ನಡನಾಡಿನ ಜನರಿಗೆ ದ್ರೋಹ ಎಸಗುತ್ತಿವೆ ಎಂದರು.
ಸನ್ಮಾನ: ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ, ಕುಮಾರ್ ಆಸ್ಪತ್ರೆಯ ವೈದ್ಯ ಶ್ರೀಧರ್, ರೈತ ಸಂಘದ ವರಿಷ್ಠ ಹಾಗೂ ಶಾಸಕ ಕೆ.ಎಸ್.ಪುಟ್ಟಣ್ಣಯ್ಯನವರನ್ನು ಸನ್ಮಾನಿಸಲಾಯಿತು.
ಸಾಹಿತಿ ಕವಿತಾಕೃಷ್ಣ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಸಕ ಕೆ. ಷಡಕ್ಷರಿ, ಕೆಜೆಪಿ ಮುಖಂಡ ಲೋಕೇಶ್ವರ, ಮಾಜಿ ಶಾಸಕ ನಾಗೇಶ್ ಮತ್ತಿತರರು ಮಾತನಾಡಿದರು. ತಾ.ಕಸಾಪ ಅಧ್ಯಕ್ಷ ಉಜ್ಜಜ್ಜಿ ರಾಜಣ್ಣ, ಜೆಡಿಎಸ್ ಮುಖಂಡ ಗುರುಮೂರ್ತಿ,ಕರವೇ ರಾಜ್ಯ ಉಪಾಧ್ಯಕ್ಷ ಪ್ರಕಾಶ ಯಾದವ್ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕರವೇ ರಾಜ್ಯಾಧ್ಯಕ್ಷ ಆರ್. ವಿಜಯಕುಮಾರ್ ಸ್ವಾಗತಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

