ತುಮಕೂರು

ಸಮಸ್ಯೆಗಳಿಗೆ ಮೂಲ ಜಾಗತೀಕರಣ: ಯತಿರಾಜು

Published On :

ತುಮಕೂರು: ಈಗಾಗಲೇ ದೇಶ ದಿವಾಳಿಯಂಚಿನತ್ತ ಸಾಗುತ್ತಿದೆ. ಎಲ್ಲ ಕ್ಷೇತ್ರಗಳಲ್ಲೂ ಬಿಕ್ಕಟ್ಟು ಕಾಣಿಸಿಕೊಂಡಿದೆ. ಇಷ್ಟಕ್ಕೆಲ್ಲಾ ಮೂಲ ಕಾರಣ ಜಾಗತೀಕರಣ. ಈ ಜಾಗತೀಕರಣ ಬಿಕ್ಕಟ್ಟು ಪರಿಹಾರಕ್ಕೆ ರಾಜಕೀಯ ಪಕ್ಷಗಳು ಮುಂದಾಗುತ್ತಿಲ್ಲ ಎಂದು ಚಿಂತಕ, ಪರಿಸರವಾದಿ ಸಿ.ಯತಿರಾಜು ಆರೋಪಿಸಿದರು.
ಅವರು ತುಮಕೂರಿನ ಎಂಪ್ರೆಸ್ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀಗಂಧ ಸೇವಾ ಸಂಸ್ಥೆ, ಸಿರಾಗೇಟ್ ವಿವಿಧೋದ್ದೇದೇಶ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಮಿಕರ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಾಗತೀಕರಣದಿಂದಾಗಿ ರೈತರು, ಕಾರ್ಮಿಕರು, ಯುವಜನತೆ ಸಾಕಷ್ಟು ಇಕ್ಕಟ್ಟು-ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳು ಆಳುವ ಪಕ್ಷದ ಸರಕಾರಗಳಿಂದ ನಡೆದಿಲ್ಲ. ಇದೊಂದು ದುರಂತವೇ ಸರಿ ಎಂದರು. ಜಾಗತೀಕರದಿಂದ ಕಾರ್ಮಿಕರಿಗಿದ್ದ ಉದ್ಯೋಗ ಭದ್ರತೆ ಹೊರಟು ಹೋಗಿ, ಎಲ್ಲಾ ಕಡೆ ಗುತ್ತಿಗೆ, ಹೊರಗುತ್ತಿಗೆ ನೌಕರಿ ಪದ್ಧತಿ ತಾಂಡವಾಡುತ್ತಿರುವುದರಿಂದ ಕಾರ್ಮಿಕರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದರು. ಗುತ್ತಿಗೆ, ಹೊರಗುತ್ತಿಗೆ ಪದ್ಧತಿಯಿಂದ ಮಾಲೀಕರು ಮತ್ತು ಕಾರ್ಮಿಕರ ನಡುವಿನ ಸಂಬಂಧಕ್ಕೆ ತಿಲಾಂಜಲಿ ಬೀಳಲಿದೆ. ಇದು ದೊಡ್ಡ ಅನಾಹುತ. ವೇತನದ ಜೊತೆಗೆ ದೊರೆಯುತ್ತಿದ್ದ ಪಿ.ಎಫ್, ಇಎಸ್‌ಐ, ಬೋನಸ್ ಮುಂತಾದ ಸಾಮಾಜಿಕ ಸೌಲಭ್ಯಗಳಿಂದಲೂ ಹೊರದಬ್ಬುವ ಕೆಲಸ ಮಾಡಲಾಗುತ್ತಿದೆ. ಇದು ಘೋರ ಅನ್ಯಾಯ ಎಂದು ಯತಿರಾಜು ವ್ಯಾಖ್ಯಾನಿಸಿದರು.
ರಾಜಕೀಯ ವಲಯಗಳಿಂದ ಕಾರ್ಮಿಕರ ಹೋರಾಟಗಳಿಗೆ ಮನ್ನಣೆ ದೊರೆಯುತ್ತದೆ ಎಂಬ ನಂಬಿಕೆ ಇಂದು ಉಳಿದಿಲ್ಲ ಎಂದರು.
5 ಲಕ್ಷ ಕೋಟಿ ರಿಯಾಯ್ತಿ: ಪ್ರತಿವರ್ಷ 5 ಲಕ್ಷ ಕೋಟಿ ರು.ಗಳನ್ನು ಬಂಡವಾಳ ಶಾಹಿಗಳಿಗೆ ರಿಯಾಯಿತಿ ನೀಡಲಾಗುತ್ತಿದೆ. ಕಾರ್ಮಿಕರ ಸಣ್ಣ-ಪುಟ್ಟ ಬೇಡಿಕೆಗಳ ಈಡೇರಿಕೆಗೂ ಮೀನ ಮೇಷ ಎಣಿಸುತ್ತಿವೆ. ಯಾವ ಪಕ್ಷಗಳಿಗೂ ದೂರದೃಷ್ಟಿಯಿಲ್ಲ. ದೇಶವನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಬದಲು ಹಿಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಯತಿರಾಜ್ ಆಕ್ರೋಶ ವ್ಯಕ್ತಪಡಿಸಿದರು.
ವ್ಯಕ್ತಿ ಆಧಾರಿತ ರಾಜಕೀಯ: ಇಂದು ದೇಶದ ರಾಜಕೀಯ ವ್ಯಕ್ತಿ ಆಧಾರಿತವಾಗಿದೆಯೇ ಹೊರತು ನೀತಿ ಆಧಾರಿತವಾಗಿಲ್ಲ. ಇದರಿಂದ ಕಾರ್ಮಿಕರು, ರೈತರು, ಯುವಜನರ ಪರವಾದ ಯಾವುದೇ ಕಾನೂನುಗಳು ಜಾರಿಗೆ ಬರುತ್ತಿಲ್ಲ. ಆದ್ದರಿಂದ ಈ ಮೂರು ವರ್ಗದ ಜನರು ಸಾಮಾಜಿಕ ಸವಲತ್ತುಗಳು ಕೈಜಾರದಂತೆ ಎಚ್ಚರಿಕೆ ವಹಿಸಬೇಕು. ವೇತನಕ್ಕೆ ತೃಪ್ತರಾಗದೆ, ಜನಪರ ಕಾನೂನು ಜಾರಿಗೆ ಬರುವಂತೆ ನೋಡಿಕೊಳ್ಳಬೇಕಿದೆ ಎಂದು ಯತಿರಾಜ್ ಅಭಿಪ್ರಾಯಪಟ್ಟರು.
ಶ್ರೀಗಂಧ ಸೇವಾ ಸಂಸ್ಥೆಯ ಉಪಾಧ್ಯಕ್ಷ ಹರೀಶ್ ಮಾತನಾಡಿ, ಹಲವು ಸಮಾನ ಮನಸ್ಕ ಗೆಳೆಯರು ಸೇರಿ ಶ್ರೀಗಂಧ ಸಂಸ್ಥೆಯನ್ನು ಹುಟ್ಟು ಹಾಕಿ ಸಮಾಜದ ಎಲ್ಲಾ ವರ್ಗದವರಿಗೆ ಸೇವೆ ಒದಗಿಸಲು ಮುಂದಾಗಿದೆ. ಇದುವರೆಗೂ ಹಾಸನ ಜಿಲ್ಲೆಗೆ ಸಿಮೀತವಾಗಿದ್ದ ನಮ್ಮ ಸೇವೆಯನ್ನು ರಾಜ್ಯದ ವಿವಿಧ ಜಿಲ್ಲೆಗಳಿಗೆ ವಿಸ್ತರಿಸಲು ಮುಂದಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.