ಜಿಲ್ಲೆಯಲ್ಲಿ ಮಕ್ಕಳ ಚಲನಚಿತ್ರೋತ್ಸವ
ಕನ್ನಡಪ್ರಭ ವಾರ್ತೆ, ತುಮಕೂರು, ನ.26
ಜಿಲ್ಲೆಯಲ್ಲಿ ಜನವರಿ 10 ರಿಂದ 5 ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಮಕ್ಕಳ ಚಲನಚಿತ್ರೋತ್ಸವ ಏರ್ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈ ಕುರಿತಂತೆ ಚರ್ಚಿಸಲು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು ಪ್ರತಿ ಮಗುವಿಗೆ ತಲಾ 10 ರು. ಪ್ರವೇಶ ದರವನ್ನು ನಿಗದಿಪಡಿಸಲಾಗಿದ್ದು, ಎಲ್ಲಾ ತಾಲೂಕುಗಳ ತಹಸೀಲ್ದಾರರು ಮುಂದಾಳತ್ವ ವಹಿಸಿ, ಮಕ್ಕಳ ಚಲನಚಿತ್ರೋತ್ಸವವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಆರಂಭದ ದಿನದಂದು ಎಲ್ಲಾ ತಾಲೂಕುಗಳಲ್ಲಿ ತಹಸೀಲ್ದಾರರ ನೇತೃತ್ವದಲ್ಲಿ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸುವಂತೆ ಸೂಚಿಸಿದ ಅವರು, ತಮ್ಮ ತಾಲೂಕುಗಳಲ್ಲಿ ಲಭ್ಯವಿರುವ ಚಲನಚಿತ್ರ ಮಂದಿರಗಳ ವಿವರ, ಆಸನ ವ್ಯವಸ್ಥೆ, ಮೂಲಭೂತ ಸೌಕರ್ಯ ವ್ಯವಸ್ಥೆಯನ್ನು ಸ್ವತಃ ಪರಿಶೀಲಿಸುವಂತೆ ಮತ್ತು ಚಲನಚಿತ್ರ ಮಂದಿರ ಸಂಖ್ಯೆ ಕಡಿಮೆ ಇದ್ದಲ್ಲಿ ಚಲನಚಿತ್ರ ಪ್ರದರ್ಶನ ದಿನಗಳನ್ನು 7 ದಿನಗಳಿಗೆ ವಿಸ್ತರಿಸುವಂತೆ ತಿಳಿಸಿದರು.
ಅಂತೆಯೇ ವೆಚ್ಚದ ಲೆಕ್ಕಪತ್ರಗಳನ್ನು, ಶಾಲೆಗಳಿಗೆ ಟಿಕೆಟುಗಳನ್ನು ವಿತರಣೆ ಮಾಡುವ ಹಾಗೂ ಫಿಲಂ ಪ್ರಿಂಟ್ಗಳನ್ನು ಚಲನಚಿತ್ರ ಮಂದಿರಗಳಿಗೆ ತಲುಪಿಸುವ ವ್ಯವಸ್ಥೆ ಕುರಿತಂತೆ ತಾಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ, ಸಭೆ ಕರೆದು ತೀರ್ಮಾನ ಕೈಗೊಳ್ಳುವಂತೆ ತಿಳಿಸಿದರು.
ಸಫಲತೆಗೆ ಶ್ರಮಿಸಿ: ಚಲನಚಿತ್ರ ಪ್ರದರ್ಶನವನ್ನು ಬೆಳಿಗ್ಗೆ 8 ರಿಂದ 10 ಗಂಟೆಯೊಳಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಸರ್ಕಾರದ ಯಾವುದೇ ಜನಪರ ಯೋಜನೆ ಹಿಂದೆ ಸದುದ್ದೇಶವಿದ್ದು, ಅಧಿಕಾರಿಗಳು ನಕಾರಾತ್ಮಕವಾಗಿ ಯೋಚಿಸದೆ, ಸಕಾರಾತ್ಮಕವಾಗಿ ಯೋಚಿಸಿ ಯೋಜನೆ ಸಫಲತೆಗೆ ಶ್ರಮಿಸುವಂತೆ ಈ ಸಂದರ್ಭ ಜಿಲ್ಲಾಧಿಕಾರಿಗಳು ಸೂಚಿಸಿದರು.
ಮಕ್ಕಳ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲು ಕಲರವ, ಮ್ಯಾಜಿಕ್ ಅಜ್ಜಿ, ಚಂದನಚಿಗುರು, ಕೇರಾಫ್ ಪುಟ್ಬಾತ್, ಚಿನ್ನಾರಿಮುತ್ತ, ಕೊಟ್ರೇಶಿ ಕನಸು, ಚಿಲಿಪಿಲಿ ಹಕ್ಕಿಗಳು, ಮಾನವೀಯತೆ, ಬೇಬೀಸ್ ಡೇಔಟ್, ಜುರಾಸಿಕ್ಪಾರ್ಕ್, ಸೂಪರ್ ನೋವಾ 459, ನೂರಾರು ಕನಸು, ಜೈ ಕರ್ನಾಟಕ, ತಾರೇ ಜಮೀನ್ಪರ್, ಸ್ಕೂಲ್ ಮಾಸ್ಟರ್ ಮುಂತಾದ ಚಿತ್ರಗಳನ್ನು ನೀಡಲಾಗುವುದು ಎಂದು ಕಾರ್ಯಕ್ರಮ ಸಂಯೋಜಕರು ಈ ಸಂದರ್ಭ ತಿಳಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿಗಳು, ತಹಸೀಲ್ದಾರರು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

