ಪರಿಸರ ಕಾಳಜಿ ಇರೋರಿಗೆ ಪ್ರೋತ್ಸಾಹ ನೀಡೋಲ್ಲ
ಕ.ಪ್ರ.ವಾರ್ತೆ ಕುಣಿಗಲ್ ನ.27
ಗ್ರಾಮಾಂತರ ಪ್ರದೇಶದಲ್ಲಿ ಪರಿಸರ ಕಾಳಜಿ ಇಟ್ಟು ಕೆಲಸ ಮಾಡುವಂತವರಿಗೆ ಸರ್ಕಾರ ಸೂಕ್ತ ಪ್ರೋತ್ಸಾಹ ಸಹಕಾರ ನೀಡೋಲ್ಲ. ಪ್ರಶಸ್ತಿ ಪತ್ರ, ಫಲಕಗಳಿಂದ ಜೀವನ ನಡೆಸೊಕ್ಕಾಗಲ್ಲ ಎಂದು ಸಾಲುಮರದ ತಿಮ್ಮಕ್ಕ ಸರ್ಕಾರದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಬುಧವಾರ ಪಟ್ಟಣದ ಅಂಬೇಡ್ಕರ್ ನಗರದ ಕೆಚ್ಚೆದೆಯ ವೀರಕನ್ನಡಿರ ಬಳಗವು ರಾಜ್ಯೋತ್ಸವ ಸಮಾರಂಭದ ಅಂಗವಾಗಿ ಹಮ್ಮಿಕೊಳ್ಳಲಾದ ಗಿಡನೆಡುವ ಕಾರ್ಯಕ್ರಮದಲ್ಲಿ ಗಿಡನೆಟ್ಟು ಮಾತನಾಡಿದ ಅವರು, ಪ್ರಸ್ತುತ ಜನತೆಯಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ, ಗಿಡಮರಗಳ ಸಂರಕ್ಷೆಣೆಯ ಬಗ್ಗೆ ಕಾಳಜಿ ಕಡಿಮೆಯಾಗುತ್ತಿದೆ. ತಾವು ಹೋದ ಕಡೆಯಲ್ಲಾ ಗಿಡಗಳನ್ನು ನೆಟ್ಟು ಪೋಷಿಸಿ ಮರಗಳನ್ನಾಗಿ ಮಾಡಿ ಅವು ನಿಮ್ಮ ಮಕ್ಕಳಿಗೆ, ಮುಂದಿನ ಪೀಳಿಗೆಗೆ ನೀವು ಕೊಡಲಾರದ ಆಸ್ತಿಯನ್ನು (ಆರೋಗ್ಯ ಭಾಗ್ಯ) ನೀಡುತ್ತದೆ ಎಂದು ಮನವರಿಕೆ ಮಾಡಿಹೇಳುತ್ತಿದ್ದೇನೆ ಎಂದರು.
ಮೆಚ್ಚುಗೆ: ಅದರ ಪರಿಣಾಮ ಸಾಕಷ್ಟು ಮಟ್ಟಿಗೆ ಆಗಿದೆ ಎಂಬ ಸಾರ್ಥಕತೆ ತಮಗಿದೆ ಎಂದ ಅವರು, ಸರ್ಕಾರವು ತಾವು ನೀಡಿದ ಸೇವೆ ಗುರುತಿಸಿ ಕೇವಲ ಪ್ರಶಸ್ತಿ, ನಾಮಫಲಕ ನೀಡಿದೆ. ಆದರೆ, ಜೀವನ ಸಂಧ್ಯಾಕಾಲದಲ್ಲಿರುವ
ತಮಗೆ ಜೀವನ ನಿರ್ವಹಣೆಗೆ ಆರ್ಥಿಕ ಧನಸಹಾಯ ಮಾಡದೆ ಕಡೆಗಣಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ, ಸರ್ಕಾರ ನನ್ನ ಕೈಬಿಟ್ಟರೂ ರಾಜ್ಯದ ಜನತೆ ತಮ್ಮ ಸೇವೆ ಗುರುತಿಸಿ ತಮ್ಮನ್ನು ಕೈಹಿಡಿದಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರತಫಲಾಪೇಕ್ಷೆ ಇಲ್ಲದೇ ಕೆಲಸ: ಸರ್ಕಾರ ಪರಿಸರ ಸಂರಕ್ಷಣೆ, ಗಿಡ ನೆಟ್ಟು ಪೋಷಣೆಗೆ ಖರ್ಚು ಮಾಡುತ್ತಿರುವ ಬಗ್ಗೆ ಅದರಿಂದ ಎಷ್ಟರ ಮಟ್ಟಿಗೆ ಪ್ರಯೋಜನವಾಗುತ್ತಿದೆ ಎಂಬುದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ, ನಾನು ಈ ಇಳಿವಯಸ್ಸಿನಲ್ಲೂ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನನ್ನ ಕೆಲಸ ಮಾಡುತ್ತಿದ್ದೇನೆ ಎಂದರು.
ತಾಲೂಕು ಕಸಾಪ ಅಧ್ಯಕ್ಷ ದಿನೇಶ್ ಕುಮಾರ್, ಕನ್ನಡಮ್ಮನ ಸೇವೆಯ ಜೊತೆಯಲ್ಲಿ ಪರಿಸರ ಸಂರಕ್ಷಣೆ ಕಾಳಜಿ ಇಟ್ಟು ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸ್ವಾಗತಾರ್ಹ. ಕಾರ್ಯಕ್ರಮದ ಸವಿ ನೆನಪಿಗಾಗಿ ಗಿಡವನ್ನು ನೆಡುವ ಕಾರ್ಯಕ್ರಮವಾಗದೆ, ನೆಟ್ಟಗಿಡಗಳನ್ನು ಪರಿಣಾಮಕಾರಿಯಾಗಿ ಪೋಷಿಸಿ ಅವು ಹೆಮ್ಮರವಾಗಿ ಬೆಳೆಯುವ ನಿಟ್ಟಿನಲ್ಲಿ ಕ್ರಮ ಕೈಗೊಂಡಾಗ ಮಾತ್ರ ಈ ಕಾರ್ಯಕ್ರಮಕ್ಕೆ ನಿಜ ಅರ್ಥಬರುತ್ತದೆ ಎಂದರು.
ಬಳಗದ ಅಧ್ಯಕ್ಷೆ ಕುಣಿಗಲ್ ಶ್ರೀನಿವಾಸ, ಪುರಸಭೆ ಸದಸ್ಯ ಶಂಕರ್, ಜಿಪಂ ಮಾಜಿ ಅಧ್ಯಕ್ಷ ಎನ್.ಅರ್. ಲಕ್ಷ್ಮೀನಾರಾಯಣ, ಮುಖ್ಯಾಧಿಕಾರಿ ಅನ್ನದಾನಿ, ಪ್ರಮುಖರಾದ ರಾಜೇಶ್, ಕರಿಯಮ್ಮ ವೇಣುಗೋಪಾಲ ಸೇರಿದಂತೆ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

