ಶೀಘ್ರವೇ ಜಿಲ್ಲಾ ಬಾಲಭವನ ಕಾಮಗಾರಿ ಪೂರ್ಣ
ತುಮಕೂರು: ಜಿಲ್ಲಾ ಬಾಲಭವನ ಅಭಿವೃದ್ಧಿ ಕಾಮಗಾರಿಗಳು ಈಗಾಗಲೇ ಪ್ರಗತಿಯಲ್ಲಿದ್ದು, ಭವನದ ಒಳಭಾಗದಲ್ಲಿ ಸೌಂಡ್, ಲೈಟಿಂಗ್, ಅಕಾಸ್ಟಿಂಗ್, ಉತ್ತಮ ಸ್ಟೇಜ್ ನಿರ್ಮಾಣಕ್ಕೆ ಅಗತ್ಯವಾದ ಆರ್ಥಿಕ ಸಂಪನ್ಮೂಲವನ್ನು ಕ್ರೋಢೀಕರಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸತತ ಶ್ರಮವಹಿಸುತ್ತಿದ್ದು, ಮುಂದಿನ ಮಕ್ಕಳ ದಿನಾಚರಣೆ ವೇಳೆಗೆ ಎಲ್ಲ ಕಾಮಗಾರಿಗಳು ಪೂರ್ಣಗೊಂಡು ಮಕ್ಕಳಿಗೆ ಉತ್ತಮ ವೇದಿಕೆ ನಿರ್ಮಿಸಿಕೊಡಲಿದೆ ಎಂದು ಜಿ.ಪಂ. ಸಿಇಓ ಗೋವಿಂದರಾಜು ಅವರು ಭರವಸೆ ನೀಡಿದರು.
ನಗರದ ಜಿಲ್ಲಾ ಭವನದಲ್ಲಿ ಜಿಲ್ಲಾ ಪಂಚಾಯತ್, ರಾಜ್ಯ ಬಾಲಭವನ ಸೊಸೈಟಿ, ಜಿಲ್ಲಾ ಬಾಲಭವನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈಗಾಗಲೇ ಸೌಂಡ್ ಅಂಡ್ ಅಕಾಸ್ಟಿಂಗ್ ಕಾಮಗಾರಿಗೆ ಬೇಕಾದ ಅಗತ್ಯ ಸಂಪನ್ಮೂಲವನ್ನು ನೀಡಲು ರಾಜ್ಯಸಭಾ ಸದಸ್ಯೆ ಜಯಶ್ರೀ ಅವರು ಮುಂದೆ ಬಂದಿದ್ದಾರೆ. ಈಗಾಗಲೇ ಭವನಕ್ಕೆ ಭೇಟಿ ನೀಡಿದ ಅವರು, ತಮ್ಮ ಕೈಲಾದ ಧನಸಹಾಯ ನೀಡುವುದಾಗಿ ಭರವಸೆ ನೀಡಿದ್ದಾರೆ. ಇನ್ನು ಉಳಿದ ಅಭಿವೃದ್ಧಿ ಕಾಮಗಾರಿಗಳನ್ನು ಭವನ ಆವರಣದಲ್ಲಿರುವ ಮಳಿಗೆಗಳಿಂದ ಬರುವ ಬಾಡಿಗೆ ಹಣ ಹಾಗೂ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಶೀಘ್ರವೇ ಪೂರ್ಣಗೊಳಿಸಲು ಕ್ರಮಕೈಗೊಳ್ಳುವುದಾಗಿ ಅವರು ತಿಳಿಸಿದರು.
ಪಾತ್ರ ಅಪಾರ: ಪುಟ್ಟ ಪುಟ್ಟ ಮಕ್ಕಳಲ್ಲಿನ ಪ್ರತಿಭೆ ಹೊರತರಲುವಲ್ಲಿ ತಾಯಿ ಹಾಗೂ ಶಿಕ್ಷಕರ ಪಾತ್ರ ಅಪಾರ ಎಂದ ಸಿಇಓ ಅವರು, ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟದ ಕಲಾಶ್ರೀ ಶಿಬಿರಕ್ಕೆ ಆಯ್ಕೆಯಾದ ಎಂಟು ಮಕ್ಕಳ ಸಾಧನೆಯನ್ನು ಪ್ರಶಂಸಿಸಿದರು. ಇದೇ ವೇಳೆ ಜಿಲ್ಲೆಯ ಪ್ರತಿಭಾ ಮಕ್ಕಳನ್ನು ಗುರ್ತಿಸುವಲ್ಲಿ ಶ್ರಮಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಕಾರ್ಯವನ್ನು ಶ್ಲಾಘಿಸಿದರು. ಇದೇ ವೇಳೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದ ಡಿ.ಕೆ.ಯಶಸ್, ದೇವರಾಜು, ಎನ್. ನಾಗಚೈತ್ರ, ಕೆ.ಆರ್. ವರಲಕ್ಷ್ಮಿ, ಉಪಾ, ಟಿ.ಎಸ್. ರಿತೀಷ್, ಇ.ರಕ್ಷಿತ್, ಹೆಚ್. ದೀಪಾ ರಾಜ್ಕುಮಾರ್ ಅವರನ್ನು ಇಲಾಖೆ ವತಿಯಿಂದ ಅಭಿನಂದಿಸಲಾಯಿತು. ವೇದಿಕೆಯಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಎನ್. ಸುಜಾತ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಿರಿಯ ಅಧಿಕಾರಿ ನಟರಾಜ್, ಡಿಡಿಪಿಐ ಈಶ್ವರಯ್ಯ, ಜಿಲ್ಲಾ ಬಾಲಭವನ ಸಂಘದ ಸದಸ್ಯ ನರಸಿಂಹಮೂರ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಟಿ.ರಾಮು, ಕಿರುತೆರೆ ನಟ ಹನುಮಂತೇಗೌಡ, ವೇಣುಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು. ಸಮಾರಂಭದ ಬಳಿಕ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

