ಮೊಳಕೆಯೊಡೆದ ರಾಗಿ ಪೈರು ಒಣಗುವ ಭೀತಿ
ಭೀಕರ ಬರದ ಭೀತಿಯಲ್ಲಿ ತಿಪಟೂರು ತಾಲೂಕು ಟಿ ಮಳೆರಾಯ ಯಾವಾಗ ಕೃಪೆ ತೋರುವನೋ ಎಂಬ ಚಿಂತೆ
- ಬಿ. ರಂಗಸ್ವಾಮಿ
ಕನ್ನಡಪ್ರಭ ವಾರ್ತೆ ತಿಪಟೂರು ಸೆ.1
ಕಲ್ಪತರು ನಾಡಿನ ರೈತರು ಮಳೆ ಇಲ್ಲದೆ ದಿನವೂ ಮೋಡ ಮುಸುಕಿದಂತೆ ಕಾಣುತ್ತಿರುವ ಆಕಾಶದೆಡೆಗೆ ದೃಷ್ಟಿ ನೆಟ್ಟು, ಮಳೆರಾಯ ಯಾವಾಗ ಕೃಪೆ ತೋರುವನೋ ಎಂಬ ಚಿಂತೆಯಲ್ಲೇ ಕಾಲ ಕಳೆಯುವಂತಾಗಿದೆ.
ಇತ್ತೀಚಿನ ಹಲವಾರು ವರ್ಷಗಳಲ್ಲಿ ತಾಲೂಕಿಗೆ ಸುರಿದಿರುವ ಮಳೆ ಪ್ರಮಾಣ ಲೆಕ್ಕಹಾಕಿ ನೋಡಿದರೆ ವರ್ಷ ವರ್ಷವೂ ಇಳಿಕೆಯಾಗುವ ಮೂಲಕ ನಿರಂತರವಾಗಿ ಭೀಕರ ಬರಗಾಲವೇ ನೆನಪಾಗುತ್ತಿದೆ.
ಈ ವರ್ಷ ಮೇ ತಿಂಗಳಲ್ಲಿ ಸುರಿದ ಪೂರ್ವ ಮುಂಗಾರು ಮಳೆ ರೈತರ ಪಾಲಿಗೆ ಆಶಾದಾಯಕಾವಾಗಿರಲಿಲ್ಲ. ನಂತರ 3-4 ತಿಂಗಳಿದಂಲೂ ಮಳೆರಾಯ ಸಂಪೂರ್ಣ ಮುನಿಸಿಕೊಂಡಿದ್ದು, ಮಳೆಯನ್ನೇ ನೆಚ್ಚಿ ಬದುಕುತ್ತಿರುವ ತಾಲೂಕಿನ ರೈತರು ಕಂಗಾಲಾಗುವಂತೆ ಮಾಡಿತ್ತು. ಮುಂಗಾರು ಮಳೆಗೆ ರೈತರು ಸಾಲ ಸೋಲ ಮಾಡಿಕೊಂಡು ಹೆಸರು, ಉದ್ದು ಮತ್ತು ಎಳ್ಳು ಬೆಳೆಗಳನ್ನು ಬಿತ್ತಿದ್ದರು. ಆದರೆ ಮಳೆರಾಯ ಸಂಪೂರ್ಣ ಕೈಕೊಟ್ಟ ಪರಿಣಾಮ ಪೂರ್ವ ಮುಂಗಾರು ಬೆಳೆಯೂ ಇಲ್ಲದಂತಾಗಿ ರೈತರು ಇನ್ನಿಲ್ಲದ ನಷ್ಟ ಅನುಭವಿಸುವಂತಾಗಿದೆ.
ತಡವಾಗಿ ರಾಗಿ ಬಿತ್ತನೆ: ಪೂರ್ವ ಮುಂಗಾರು ಬೆಳೆಗಳಾದ ಹೆಸರು, ಉದ್ದು, ಎಳ್ಳು ಬಿತ್ತಿದ್ದ ರೈತರು ರಾಗಿ ಬಿತ್ತನೆಗೆ ಭೂಮಿಯನ್ನು ಹದಗೊಳಿಸಿಕೊಂಡು ಜುಲೈ ಅಂತ್ಯ ಅಥವಾ ಆಗಸ್ಟ್ ಮೊದಲ ವಾರ ರಾಗಿ ಬಿತ್ತನೆ ಮಾಡಬೇಕಾಗಿತ್ತು. ಆದರೆ ಒಂದು ಹನಿಯೂ ಹನಿಯದೆ ಕೈಕೊಟ್ಟದ್ದರಿಂದ ಭೂಮಿಯನ್ನ ಹಸನುಗೊಳಿಕೊಳ್ಳಲೂ ಆಗದೆ ಆಕಾಶವನ್ನೇ ದಿಟ್ಟಿಸುವಂತಾಗಿತ್ತು. ಆದರೆ ರಾಗಿ ಬಿತ್ತನೆಗೆ ಅಂತಿಮ ಕಾಲವಾದ ಆಗಸ್ಟ್ ಮುಗಿದರೂ ಮಳೆರಾಯ ಕೃಪೆ ತೋರದ್ದರಿಂದ ಕಂಗಾಲಾದ ಕೆಲವೇ ರೈತರು, ಸಣ್ಣಗೆ ಸುರಿಯುತ್ತಿದ್ದ ಸೋನೆ ಮಳೆಗೆ ಬಿತ್ತನೆ ಮಾಡಿದ್ದರು. ಅತ್ಯಂತ ಕಡಿಮೆ ಮಳೆಗೂ ಮೊಳಕೆಯೊಡೆಯುವ ರಾಗಿ ಮೊಳಕೆಯೊಡೆದು 1ರಿಂದ 2 ಇಂಚು ಬೆಳೆದು ಮಳೆ ಇಲ್ಲದೆ ಒಣಗಲಾರಂಭಿಸಿದೆ. ಬಿತ್ತನೆಗೆ ಆಕಾಶದಿಟ್ಟಿಸುತ್ತಿರುವ ಅರ್ಧಕ್ಕೂ ಹೆಚ್ಚು ರೈತರು ಮುಂದೇನು ಎಂಬ ಆತಂಕದಲಿದ್ದಾರೆ. ಈ ಎಲ್ಲಾ ಬೆಳವಣಿಗೆಗಳಿಂದ ತಾಲೂಕಿನ ಜನ-ಜಾನುವಾರುಗಳ ಪ್ರಮುಖ ಅಹಾರ ಬೆಳೆಯಾದ ರಾಗಿ ಈ ಬಾರಿಯೂ ಕೈಕೊಡುವುದು ಗ್ಯಾರಂಟಿ ಎಂಬುದು ರೈತರಲ್ಲಿ ಈಗಾಗಲೇ ನಡುಕ ಹುಟ್ಟಿಸಿದೆ.
ಮೇವಿಗೆ ಬರ: ತಾಲೂಕಿನಲ್ಲಿನ ಪ್ರಮುಖ ವಾಣಿಜ್ಯ ಬೆಳೆ ತೆಂಗು ಬಿಟ್ಟರೆ, ನಂತರದ ರೈತರ ಆದಾಯವೆಂದರೆ ಪಶುಸಂಗೋಪನೆ. ಆದರೆ ಪಶುಸಂಗೊಪನೆಗೆ ಪ್ರಮುಖವಾಗಿ ರಾಗಿ ಹುಲ್ಲು ಅಗತ್ಯವಾಗಿದೆ. ಮಳೆರಾಯನ ಮುನಿಸಿನಿಂದ ಕಳೆದ ಬಾರಿಯಂತೆ ಈ ವರ್ಷವೂ ದನಕರುಗಳಿಗೂ ಮೇವಿಲ್ಲದಂತಾಗುವ ಎಲ್ಲಾ ಲಕ್ಷಣಗಳೂ ಗೋಚರವಾಗುತ್ತಿರುವುದರಿಂದ ರೈತರು ಗಾಬರಿ ಬೀಳುವಂತಾಗಿದೆ. ಈಗಾಗಲೆ ದನಕರುಗಳು, ಕುರಿ ಮೇಕೆಗಳನ್ನು ಮೇಯಿಸಲು ಬದುಗಳಲ್ಲಾಗಲಿ, ಕೆರೆ ಅಂಗಳಗಳಲ್ಲಾಗಲಿ ಹಸಿರು ಮೇವು ಬಾರದೆ ಭೀಕರ ಬರಗಾಲ ಎದುರಾಗಿದ್ದರೂ ತಾಲೂಕು ಆಡಳಿತ ಮಾತ್ರ ನಿರ್ಲಕ್ಷ್ಯದಿಂದಿರುವುದು ಈ ತಾಲೂಕಿನ ರೈತರ ದುರಂತವಾಗಿದೆ ಎಂದು ರೈತರು ಆಕ್ರೋಶಭರಿತರಾಗಿ ಶಾಸಕರು, ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಕಿಡಿಕಾರುತ್ತಿದ್ದಾರೆ.
ನೀರಿಗೂ ಸಂಚಕಾರ: ತಾಲೂಕಿನ ಬಹುತೇಕ ಕೆರೆಗಳಲ್ಲಿ ನೀರಿಲ್ಲದಿರುವುದರಿಂದ ಸಹಜವಾಗಿಯೇ ಅಂತರ್ಜಲದ ಕೊರತೆ ಎದುರಾಗಿದೆ. ಕಳೆದ ವರ್ಷ ಕೆಲ ಕೆರೆಗಳಲ್ಲಿ ಅಲ್ಪಸ್ವಲ್ಪ ನೀರಿದ್ದಿದ್ದು ಬಿಟ್ಟರೆ, ಅನೇಕ ವರ್ಷಗಳಿಂದ ತಾಲೂಕಿನ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಏಕೈಕ ಆಸರೆ ಎಂದರೆ ಬೋರ್ವೆಲ್ಗಳು ಮಾತ್ರ. ಮುಂದಿನ 15-20 ದಿನಗಳಲ್ಲಿ ಮಳೆರಾಯ ಕೃಪೆ ತೋರದಿದ್ದರೆ ಬೋರ್ವೆಲ್ಗಳಲ್ಲಿ ಅಂತರ್ಜಲ ಬತ್ತಿಹೋಗುವುದು ನಿಶ್ಚಿತ ಎಂಬುದು ರೈತರಲ್ಲಿ ದುಗುಡ ಹುಟ್ಟಿಸಿದೆ.
ಕಳೆಗುಂದುತ್ತಿರುವ ತೆಂಗು: ಹತ್ತಾರು ವರ್ಷಗಳಿಂದ ಬರದ ಛಾಯೆಗೆ ಸಿಲುಕಿದ್ದ ತೆಂಗು ಬೆಳೆ ಇತ್ತೀಚೆಗಂತೂ ನಾನಾ ರೋಗಗಳಿಗೆ ತುತ್ತಾಗಿದ್ದು ತೆಂಗು ಬೆಳೆಗಾರರು ದಿಕ್ಕೆಡುವಂತೆ ಮಾಡಿದೆ. ತಾಲೂಕಿನ ವಾಣಿಜ್ಯ ಬೆಳೆಯಾದ ತೆಂಗಿನ ಸಾವಿರಾರು ಮರಗಳು ಒಣಗಿ ಹೋಗುತ್ತಿರುವುದು ರೈತರಂತೂ ಆಂತಕಕ್ಕೆ ಸಿಲುಕುವಂತೆ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

