ಅವ್ಯವಸ್ಥೆಯಿಂದ ಕೂಡಿದ ಅಂಡರ್ಪಾಸ್ ವ್ಯವಸ್ಥೆ
ಕ.ಪ್ರ.ವಾರ್ತೆ ತುಮಕೂರು ಸೆ. 6
ಇಲ್ಲಿನ ಕುಣಿಗಲ್ ರಸ್ತೆಯಲ್ಲಿರುವ ಅಂಡರ್ಪಾಸ್ ರಸ್ತೆ ಅವ್ಯವಸ್ಥೆಯಿಂದ ಕೂಡಿದ್ದು ಇದನ್ನು ಕೂಡಲೇ ಸರಿಪಡಿಸಬೇಕೆಂದು ಆಗ್ರಹಿಸಿ ಕರ್ನಾಟಕ ಸಂಸ್ಕೃತಿ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕುಣಿಗಲ್ ರಸ್ತೆಯಲ್ಲಿರುವ ರೈಲ್ವೆ ಅಂಡರ್ಪಾಸ್ ಬಳಿ ಸಾಕಷ್ಟು ಗುಂಡಿಗಳು ಬಿದ್ದು ಅಲ್ಲಿ ಮಳೆ ನೀರು
ನಿಂತುಕೊಂಡು ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ ಎಂದು ವೇದಿಕೆ ಜಿಲ್ಲಾಧ್ಯಕ್ಷ ವೈ.ಎನ್. ಹೊಸಕೋಟೆ ನಟರಾಜ್ ಆರೋಪಿಸಿದ್ದಾರೆ.
ನಗರದ ಪಿಡಬ್ಲ್ಯೂಡಿ ಕಚೇರಿ ಕಡೆಯಿಂದಲೂ ಬರುವ ಚರಂಡಿಯ ನೀರು ಸರಾಗವಾಗಿ ಹರಿಯದೆ ರಸ್ತೆ ಮೇಲೆ ನುಗ್ಗುತ್ತಿದೆ. ಹೀಗೆ ಹಲವಾರು ರೀತಿಯಲ್ಲಿ ಈ ರಸ್ತೆ ಕುಲಗೆಟ್ಟು ಹೋಗಿ ಸಾರ್ವಜನಿಕರ ಪ್ರಯಾಣಕ್ಕೆ ತೊಂದರೆಯಾಗಿದೆ. ಇದನ್ನು ಸರಿಪಡಿಸಲು ನಗರಸಭೆಗೆ ಸಾರ್ವಜನಿಕರು ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದರ ಪರಿಣಾಮವಾಗಿ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಪದೇ ಪದೇ ತೊಂದರೆಯಾಗುತ್ತಿದೆ ಎಂದರು.
ಈ ಮಾರ್ಗದಲ್ಲಿ ಈ ಹಿಂದೆ ಬಾಲಕಿಯೊಬ್ಬಳು ಬಿದ್ದಾಗ ಸಾರ್ವಜನಿಕರು ಪ್ರಾಣಾಪಾಯದಿಂದ ಪಾರು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಇದರ ಜತೆಗೆ ದ್ವಿಚಕ್ರ ವಾಹನ ಸವಾರರು ಗುಂಡಿಗೆ ಬಿದ್ದು ಕೈ ಕಾಲು ಮುರಿದುಕೊಂಡ ಘಟನೆ ನಡೆಯುತ್ತಲೇ ಇದೆ ಎಂದು ನಟರಾಜ್ ತಿಳಿಸಿದ್ದಾರೆ.
ಲಾರಿ, ಬಸ್ಸು ಇತ್ಯಾದಿ ವಾಹನಗಳು ಗುಂಡಿ ತಪ್ಪಿಸಿ ಚಲಾಯಿಸುವ ಸಂದರ್ಭದಲ್ಲಿ ಅಪಘಾತಗಳಾಗಿವೆ. ರಸ್ತೆಯನ್ನು ಆದಷ್ಟು ಬೇಗ ಸರಿಪಡಿಸಬೇಕೆಂದು ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅಧಿಕಾರಿಗಳು ತಡ ಮಾಡದೆ ಅತ್ಯಂತ ಶೀಘ್ರವಾಗಿ ರಸ್ತೆ ಸರಿಪಡಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಸ್ಫೂರ್ತಿ, ರೇಖಾಮಣಿ, ಭವ್ಯ, ಅನಿಲ್ರಾಜ್, ಪುನೀತ್ ಕುಮಾರ್, ರವಿಚಂದ್ರ, ಶೃತಿ ಅನಿತರಾಜ್ ಮುಂತಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

