ಕರೆಯದೆ ಬರೋದ್ಹೇಗೆ ಅನ್ನೋ ಕೊರಗಿತ್ತು
ಕನ್ನಡಪ್ರಭ ವಾರ್ತೆ ತುಮಕೂರು ಸೆ.7
ತವರು ಜಿಲ್ಲೆಯವರೇ ಆದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಹಾಗೂ ರಾಜ್ಯ ಅಡ್ವೋಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ಅವರಿಗೆ ತುಮಕೂರು ಜಿಲ್ಲಾ ವಕೀಲರ ಸಂಘದ ವತಿಯಿಂದ ನ್ಯಾಯಾಲಯ ಅವರಣದಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಟಿ.ಬಿ. ಜಯಚಂದ್ರ, ತಾವು ಕಾನೂನು ಅಭ್ಯಾಸ ಮಾಡಿದ್ದು, ವಕೀಲಿಗಿರಿ ಮಾಡಿದ್ದು ತುಮಕೂರಿನಲ್ಲೇ. ತವರು ಜಿಲ್ಲೆಯಲ್ಲೇ.ಹಾಲಿ ಕಾನೂನು ಸಚಿವನಾಗಿದ್ದೇನೆ. ಆದರೆ ವಕೀಲರ ಸಂಘದ ಆಹ್ವಾನವಿಲ್ಲದೇ ಬರೋದ್ಗೇಗೆ. ಸಮಸ್ಯೆ ಅರಿಯೋದು ಹೇಗೆ ಎಂಬ ಕೊರಗಿತ್ತು. ಜಿಲ್ಲಾ ವಕೀಲರ ಸಂಘದ ಆಹ್ವಾನದ ಮೇರೆಗೆ ಬಂದಿದ್ದೇನೆ. ಕೊರಗು ನಿವಾರಣೆಯಾಗಿದೆ. ಜಿಲ್ಲೆಯ ನ್ಯಾಯಾಲಯಗಳ ಸಮಸ್ಯೆ, ವಕೀಲರ ಮೂಲಭೂತ ಸೌಲಭ್ಯಗಳ ಕೊರತೆ, ಗ್ರಂಥಾಲಯ ಉನ್ನತಿ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಕಾನೂನು ಸಚಿವರು ಭರವಸೆ ನೀಡಿದರು.
ಬಜೆಟ್ಗೆ ಮುನ್ನ ಕರೆದಿದ್ದರೆ ಚೆನ್ನಾಗಿತ್ತು: ರಾಜ್ಯ ಬಜೆಟ್ಗಿಂತ ಮುಂಚಿತವಾಗಿ ಕರೆದಿದ್ದರೆ ಚೆನ್ನಾಗಿತ್ತು. ಸಮಸ್ಯೆ ಅರಿತು ಕೂಡಲೇ ಬಜೆಟ್ನಲ್ಲೇ ಅವುಗಳ ನಿವಾರಣೆಗೆ ಶ್ರಮಿಸಬಹುದಿತ್ತು. ಆದರೆ ಲೇಟಾಯಿತು. ಪರವಾಗಿಲ್ಲ. ಬಜೆಟ್ನಲ್ಲಿ ಸೇರಿಸದಿದ್ದರೆ ಏನಂತೆ. ಸಮಸ್ಯೆ ನಿವಾರಣೆಗೆ ಅದರ ಹೊರತಾಗಿಯೂ ಶ್ರಮಿಸಬಹುದು. ನಿವಾರಣೆ ಮಾಡಬಹುದು. ಚಿಂತೆ ಬೇಡ ಎಂದು ವಕೀಲರಿಗೆ ಸಚಿವರು ಭರವಸೆ ನೀಡಿದರು.
ಭಾರೀ ಅದ್ವಾನವಾಗಿದೆ: ಗುಲ್ಬರ್ಗ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಹೊರ ಜಿಲ್ಲೆಗಳ ನ್ಯಾಯಾಲಯಗಳ ಆವರಣ ನೋಡಿದರೆ ತುಮಕೂರು ನ್ಯಾಯಾಲಯ ಸಂಕೀರ್ಣ ಭಾರೀ ಅದ್ವಾನವಾಗಿದೆ. ಕಿಷ್ಕಿಂಧೆಯಾಗಿದೆ. ಈ ನ್ಯಾಯಾಲಯಗಳ ಆವರಣಕ್ಕೆ ಬರಲು ಭಾರೀ ಮುಜುಗರವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರು ಖೇದ ವ್ಯಕ್ತಪಡಿಸಿದರು.
ಮನವಿ ಸಲ್ಲಿಸಿದಲ್ಲಿ: ತಾವು ವಕೀಲಿಗಿರಿ ನಡೆಸುತ್ತಿದ್ದ ವೇಳೆ ಇದ್ದ ವಕೀಲರ ಸಂಖ್ಯೆ ಕೇವಲ 100 ರಿಂದ 150 ಮಾತ್ರ. ಇಂದು ವಕೀಲರ ಸಂಖ್ಯೆ 1500 ರಿಂದ 2000 ದವರೆಗೂ ಏರಿದೆ. ತಾವು ವಕೀಲಿಗಿರಿ ಮಾಡಿದ ಜಿಲ್ಲೆ ಎಂಬ ಅಭಿಮಾನವಿದೆ. ಜಿಲ್ಲಾ ನ್ಯಾಯಾಲಯ, ವಕೀಲರ ಸಂಘದ ಅಭಿವೃದ್ಧಿಗೆ ಏನಾದರೂ ಮಾಡಬೇಕೆಂಬ ಸ್ವಾಭಿಮಾನವಿದೆ. ಸಮಸ್ಯೆಗೆ ಸಂಬಂಧಿಸಿದಂತೆ ಮನವಿ ಸಲ್ಲಿಸಿದಲ್ಲಿ ಅನುಕೂಲ ಕಲ್ಪಿಸಲು ಸಿದ್ಧ ಎಂದು ಜಯಚಂದ್ರ ಭರವಸೆ ನೀಡಿದರು. ತಮ್ಮ ಸ್ವಂತ ತಾಲೂಕು ಚಿಕ್ಕನಾಯಕನಹಳ್ಳಿಯಲ್ಲಿ ಬಾರ್ ಕೌನ್ಸಿಲ್ಗೆ ಸ್ಥಳ ಇಲ್ಲದ ಬಗ್ಗೆ ಖೇದ ವ್ಯಕ್ತಪಡಿಸಿದರು. ತಮ್ಮ ಜಿಲ್ಲೆಯವರು ಹೈಕೋರ್ಟ್, ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಲೀ, ಶ್ರೇಷ್ಠ ವಕೀಲರಾಗಲಿ ಎಂಬ ಅಭಿಲಾಷೆ ತಮ್ಮದಾಗಿದೆ ಎಂದರು.
ಸಮಿತಿ ರಚನೆಯಾಗಿದೆ: ರಾಷ್ಟ್ರಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ನ್ಯಾಯಾಲಯಗಳ ಸಮಸ್ಯೆ ನಿವಾರಣೆಗೆ, ಮೂಲಭೂತ ಸೌಲಭ್ಯ ಕಲ್ಪಿಸುವ ಹಿನ್ನೆಲೆಯಲ್ಲಿ ಸಮಿತಿ ರಚಿಸಲಾಗಿದೆ. ತುಮಕೂರು ಬಾರ್ ಕೌನ್ಸಿಲ್ ಸಮಸ್ಯೆ ನೋಡಿದಾಗ ತುಮಕೂರಿಗೆ ಏನೂ ಮಾಡಲಾಗಲಿಲ್ಲವಲ್ಲ ಅನ್ನೋ ಕೊರಗಿತ್ತು. ಕೊರಗು ನಿವಾರಿಸುವ ಹಿನ್ನೆಲೆಯಲ್ಲಿ ಕಾರ್ಯೋನ್ಮುಖರಾಗುವ ಭರವಸೆಯನ್ನು ಕಾನೂನು ಸಚಿವರು ನೀಡಿದರು.
ವಾರದಲ್ಲಿ ಕನಿಷ್ಠ 2 ಅಥವಾ 3 ದಿನ ತುಮಕೂರು ಜಿಲ್ಲೆಯಲ್ಲೇ ಇರುತ್ತೇನೆ. ವಕೀಲರ ಸಂಘದ ಪದಾಧಿಕಾರಿಗಳು ಯಾವಾಗ ಬೇಕಾದರೂ ತಮ್ಮನ್ನು ಭೇಟಿಯಾಗಬಹುದು. ಅಹವಾಲು ಸಲ್ಲಿಸಬಹುದು. ಅಹವಾಲು ಕೇಳಲು, ಸಮಸ್ಯೆ ಬಗೆಹರಿಸಲು ಸದಾ ಸಿದ್ದ ಎಂದರು.
ಗ್ರಂಥಾಲಯದ ಕಡೆ ಹೆಚ್ಚು ಗಮನವಿರಲಿ: ವಕೀಲರು ಗ್ರಂಥಾಲಯದ ಕಡೆ ಹೆಚ್ಚು ಗಮನ ಹರಿಸಬೇಕು. ಇಂದಿನ ತಾಂತ್ರಿಕತೆ ಉಪಯೋಗಿಸಿಕೊಂಡು ಗ್ರಂಥಾಲಯ ಅಭಿವೃದ್ಧಿಪಡಿಸಬೇಕು. ತಾವೂ ಬೆಳೆಯಬೇಕು ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರು ಕಿವಿ ಮಾತು ಹೇಳಿದರು.
ತುಮಕೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೊಡ್ಡಮನೆ ಗೋಪಾಲಗೌಡ ಅತಿಥಿಗಳನ್ನು ಪರಿಚಯಿಸಿದರು. ಸುಜಾತ ಪ್ರಾರ್ಥಿಸಿ, ಸಂಘದ ಕಾರ್ಯದರ್ಶಿ ಬಸವರಾಜು ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

