ಇತಿಹಾಸ ಆತ್ಮವಿಶ್ವಾಸ, ಆಶಾವಾದದ ಕೈಗನ್ನಡಿ
ಕ.ಪ್ರ.ವಾರ್ತೆ ತುಮಕೂರು ಸೆ. 7
ಇತಿಹಾಸ ಆತ್ಮವಿಶ್ವಾಸ ಹಾಗೂ ಆಶಾವಾದದ ಕೈಗನ್ನಡಿಯಿದ್ದಂತೆ. ವಿದ್ಯಾರ್ಥಿಗಳು ಇತಿಹಾಸದಿಂದ ಇಂತಹ ಮೌಲ್ಯಾದರ್ಶಗಳನ್ನು ಮೈಗೂಡಿಸಿಕೊಂಡು ಸಮಗ್ರ ವ್ಯಕ್ತಿತ್ವ ವಿಕಾಸದತ್ತ ಹೆಜ್ಜೆ ಹಾಕಬೇಕು ಎಂದು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪ್ರಾಂಶುಪಾಲ ಟಿ. ಎನ್. ಹರಿಪ್ರಸಾದ್ ಹೇಳಿದರು.
ಕಾಲೇಜಿನ ಮಾನವಿಕ ವೇದಿಕೆಯ ಆಶ್ರಯದಲ್ಲಿ ಇತಿಹಾಸ ವಿಭಾಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇತಿಹಾಸ ಮತ್ತು ವ್ಯಕ್ತಿತ್ವ ವಿಕಸನ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಅವರು, ಇತಿಹಾಸದಲ್ಲಿ ಸೋಲೂ ಇದೆ, ಗೆಲವೂ ಇದೆ. ನಾವು ಧನಾತ್ಮಕ ಅಂಶಗಳನ್ನು ಸ್ವೀಕರಿಸಬೇಕು, ಋಣಾತ್ಮ ಅಂಶಗಳಿಂದ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಆದರ್ಶವಾಗಲಿ: ಇತಿಹಾಸದಲ್ಲಿ ಬಂದು ಹೋದ ಮಹಾನ್ ನಾಯಕರ ಬದುಕಿನಿಂದ ನಾವು ಆದರ್ಶಗಳನ್ನು ಆಯ್ದುಕೊಳ್ಳಬೇಕು. ದೌರ್ಬಲ್ಯಗಳನ್ನು ಸಾಮರ್ಥ್ಯವನ್ನಾಗಿಯೂ, ಸೋಲುಗಳನ್ನು ಗೆಲವುಗಳನ್ನಾಗಿಯೂ ಪರಿವರ್ತಿಸಿಕೊಂಡ ಗಾಂಧೀಜಿ, ಅಂಬೇಡ್ಕರ್, ಬುದ್ಧ ನಮಗೆ ಆದರ್ಶವಾಗಬೇಕು. ಲಾಲ್ ಬಹಾದ್ದೂರ್
ಶಾಸ್ತ್ರಿ, ವಲ್ಲಭಬಾಯಿ ಪಟೇಲ್, ಬಿಸ್ಮಿಲ್ಲಾ ಖಾನ್ರಂತಹ ಶ್ರೇಷ್ಠ ವ್ಯಕ್ತಿತ್ವಗಳ ಸರಳತೆ ಹಾಗೂ ಪ್ರಾಮಾಣಿಕತೆಗಳನ್ನು ರೂಢಿಸಿಕೊಳ್ಳಬೇಕು. ಅವರ ಜೀವನ ನಮಗೆ ತೆರೆದ ಪುಸ್ತಕ ಎಂದರು.
ಆಶಾವಾದ ಇರಲಿ: ಬ್ರಿಟಿಷರ ಕಾಲದ ಭಾರತಕ್ಕಿಂತಲೂ ಸ್ವತಂತ್ರ ಭಾರತದಲ್ಲಿ ಬದುಕುತ್ತಿರುವ ನಮಗೆ ಹೆಚ್ಚಿನ ಜವಾಬ್ದಾರಿಗಳಿವೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಿ ಬೆಳೆಸುವಲ್ಲಿ ಯುವಜನತೆಗೆ ಹೆಚ್ಚಿನ ಹೊಣೆಯಿದೆ. ಇತಿಹಾಸದ ಬಗ್ಗೆ ಗೌರವ, ವರ್ತಮಾನದ ಬಗ್ಗೆ ಆಸಕ್ತಿ ಹಾಗೂ ಭವಿಷ್ಯದ ಬಗ್ಗೆ ಆಶಾವಾದ ವಿದ್ಯಾರ್ಥಿಗಳಲ್ಲಿರಬೇಕು ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ತುಮಕೂರು ವಿ.ವಿ. ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಡಾ. ಎಲ್. ಪಿ. ರಾಜು, ಹಳ್ಳಿಗಳಿಂದು ವೃದ್ಧಾಶ್ರಮಗಳಾಗುತ್ತಿವೆ. ನಮ್ಮ ಯುವಕರು ಪಟ್ಟಣಗಳ ಕಡೆ ವಲಸೆ ಹೋಗುತ್ತಿದ್ದಾರೆ ಎಂದು ವಿಷಾದಿಸಿದರು.
ನಗರಗಳಿಗೆ ಹೋಗಿ ಉದ್ಯೋಗ ಕೈಗೊಳ್ಳುವುದು ತಪ್ಪಲ್ಲ. ಆದರೆ ಆ ನೆಪದಲ್ಲಿ ತಾವು ಬಹಳಷ್ಟನ್ನು ಪಡೆದುಕೊಂಡ ಹಳ್ಳಿಗಳ ಬಗ್ಗೆ ಅಸಡ್ಡೆ-ಅನಾದರ ಹೊಂದುವುದು ತಪ್ಪು. ಯುವಕರು ವಿದ್ಯೆಯ ಜೊತೆಗೆ ಮಾನವೀಯತೆಯನ್ನೂ ಬೆಳೆಸಿಕೊಳ್ಳಬೇಕು ಎಂದರು.
ಮಾನವಿಕ ವೇದಿಕೆಯ ಸಂಚಾಲಕ ಪದ್ಮನಾಭ ಕೆ. ವಿ. ಮಾತನಾಡಿದರು. ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಚಿಕ್ಕಣ್ಣ, ಶ್ರೀನಿವಾಸ ಉಪಸ್ಥಿತರಿದ್ದರು. ಕಾವ್ಯಶ್ರೀ ನಿರೂಪಿಸಿದರು. ಶಶಿಕಲಾ ಪ್ರಾರ್ಥಿಸಿದರು. ಮೌನ ಸ್ವಾಗತಿಸಿದರು, ಶೃತಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

