ತುಮಕೂರು

ಮಹಿಳೆ ಸುಶಿಕ್ಷತಳಾದರೆ ಬದಲಾವಣೆ ಸಾಧ್ಯ

Published On :

ಕ.ಪ್ರ.ವಾರ್ತೆ   ತುಮಕೂರು   ಸೆ. 8
ಮಹಿಳೆಯರು ಸುಶಿಕ್ಷತರಾದರೆ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಲೋಕ ಶಿಕ್ಷಣ ಸಮಿತಿ ಹಾಗೂ ಜನಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಜಿಪಂ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಮತ್ತು ಸಾಕ್ಷರತಾ ಸಪ್ತಾಹ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೆಣ್ಣೊಬ್ಬಳು ಕಲಿತರೆ ಇಡೀ ಸಂಸಾರವೇ ಶಾಲೆ ಆಗಲಿದೆ. ಕಳೆದ 15 ವರ್ಷಗಳಲ್ಲಿ ಕ್ರಾಂತಿಕಾರಿಕ ಬದಲಾವಣೆ ಆಗಿದ್ದು ಹೆಣ್ಣುಮಕ್ಕಳ ಹಕ್ಕಿಗೆ ಕಾನೂನು ಮಾರ್ಪಡಿಸುವ ಮೂಲಕ ತಾರತಮ್ಯ ದೂರ ಮಾಡುವ ಪ್ರಯತ್ನ ನಡೆದಿದೆ ಎಂದರು. ಹೆಣ್ಣು ಮತ್ತು ಗಂಡು ಎಂಬ ಭೇದ-ಭಾವ ಅಳಿಯಲು ಸಾಕ್ಷರತೆ ಪ್ರೇರಣೆ ಆಗಲಿ ಎಂದು ತಿಳಿಸಿದರು.
2001ರ ಜನಗಣತಿಯಂತೆ ರಾಜ್ಯದ ಸಾಕ್ಷರತಾ ಪ್ರಮಾಣ ಶೇ.67 ರಷ್ಟಿದ್ದು ಹೆಣ್ಣುಮಕ್ಕಳ ಸಾಕ್ಷರ ಪ್ರಮಾಣ ಶೇ.56ರಷ್ಟಿದೆ. ಶೇ.76 ರಷ್ಟು ಪುರಷರು ಸಾಕ್ಷರರೆನಿಸಿದ್ದು ಇದು ಗಂಡು-ಹೆಣ್ಣಿನ ನಡುವಿನ ಅಂತರಕ್ಕೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು. ಸಾಕ್ಷರತೆ ಗಂಧ-ಗಾಳಿ ಇಲ್ಲದಿದ್ದರೆ ಮನಷ್ಯ ನಾಗರಿಕತೆಯಿಲ್ಲದ ಪ್ರಾಣಿ ಆಗಿರುತ್ತಿದ್ದ. ಅಕ್ಷರ ಜ್ಞಾನದಿಂದ ಮನುಷ್ಯನಲ್ಲಿ ಉತ್ತಮ ನಡವಳಿಕೆ, ಗುಣಗಳನ್ನು ಕಾಣಬಹುದಾಗಿದೆ. ಎಲ್ಲರನ್ನು ಸಾಕ್ಷರರನ್ನಾಗಿಸಲು ವಯಸ್ಕರ ಶಿಕ್ಷಣ ಜಾರಿಗೆ ತಂದಿದೆ. ಇದು ಗಾಂಧೀಜಿ ಕನಸಾಗಿತ್ತು. ಅದರಂತೆ ಸಾಕ್ಷರ ಪ್ರೇರಕರು ಪ್ರತಿಯೊಬ್ಬರಿಗು ಅಕ್ಷರ ಕಲಿಸುವ ಮೂಲಕ ಸಾಕ್ಷರರನ್ನಾಗಿಸಬೇಕು ಎಂದು ಹೇಳಿದರು.
ಗುಣಮಟ್ಟದ ಶಿಕ್ಷಣ: ಶಿಕ್ಷಣ ಸಂವಿಧಾನಬದ್ಧ ಹಕ್ಕು. 6-14 ವರ್ಷದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು ಕರ್ತವ್ಯ. ಪ್ರತಿಯೊಬ್ಬರಿಗೂ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆರ್ಟಿಇ ಜಾರಿತಂದಿದ್ದು ಬಡವ, ಶ್ರೀಮಂತರೆಲ್ಲರಿಗೂ ಗುಣಮಟ್ಟ ಶಿಕ್ಷಣ ದೊರೆಯಬೇಕೆಂದು ಇದರ ಆಶಯವಾಗಿದೆ ಎಂದರು. ರಾಜ್ಯದಲ್ಲಿ ಜಾರಿಗೆ ತಂದಿರುವ ಕ್ಷೀರಭಾಗ್ಯ ಯೋಜನೆ ಅನುಷ್ಠಾನದ ಬಗ್ಗೆ ತಮಗೆ ತೃಪ್ತಿ ಇದೆ ಎಂದು ಸಚಿವ ಜಯಚಂದ್ರ ಹೇಳಿದರು.
ಹೆಚ್ಚಿಸಬೇಕಿದೆ: ಶಾಲೆ ಬಿಡುವ ಮಕ್ಕಳನ್ನು ಶಾಲೆಗೆ ಮರಳಿ ಕರೆತರವು ಪ್ರಯತ್ನವನ್ನು ಮಾಡುವ ಮೂಲಕ ಸುಶಿಕ್ಷತರ ಪ್ರಮಾಣವನ್ನು ಹೆಚ್ಚಿಸಬೇಕಿದೆ. ಈ ನಿಟ್ಟಿನಲ್ಲಿ ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ ಯೋಜನೆ ಜಾರಿಗೆ ತರಲಾಗಿದೆ. ಕ್ಷೀರಭಾಗ್ಯ ತಮ್ಮ ಕನಸಿನ ಯೋಜನೆಯಾಗಿದ್ದು  ಮಕ್ಕಳಲ್ಲಿನ ಅಪೌಷ್ಠಿಕತೆ ತೊಡೆದು ಹಾಕುವುದು ಇದರ ಉದ್ದೇಶವಾಗಿದೆ. ಆದರೆ, ಯೋಜನೆ ಜಾರಿಯಲ್ಲಿ ಕೆಲವು ನ್ಯೂನತೆಗಳಿವೆ ಎಂಬುದನ್ನು ಒಪ್ಪಿಕೊಂಡ ಸಚಿವರು, ಯೋಜನೆ ಯಶಸ್ಸಿಗೆ ಎಲ್ಲರು ಸಹಕರಿಸಬೇಕು ಎಂದರು. ಸಾಕ್ಷರ ಪ್ರೇರಕರು, ತಾಲೂಕು ಸಂಯೋಜಕರನ್ನು ಈ ಸಂದರ್ಭದಲ್ಲಿ ಸಚಿವರು ಸನ್ಮಾನಿಸಿದರು. ಶಾಸಕ ಕೆ.ರಫೀಕ್ ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಜಿಪಂ ಅಧ್ಯಕ್ಷೆ ಪ್ರೇಮಾ, ಉಪಾಧ್ಯಕ್ಷೆ ಮಮತಾ, ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ, ಜಿಪಂ ಸಿಇಒ ಗೋವಿಂದರಾಜು, ಮಧುಗಿರಿ ಶೈಕ್ಷಣಿಕ ಜಿಲ್ಲೆ ಡಿಡಿಪಿಐ ಆಂಜಿನಪ್ಪ, ಡಯಟ್ ಉಪನಿರ್ದೇಶಕ ಈಶ್ವರಯ್ಯ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಹೆಚ್.ಜಿ. ರಾಜಶೇಖರ್, ಜನಶಿಕ್ಷಣ ಸಂಸ್ಥೆಯ ಆರ್.ಎಚ್.ಸುಕನ್ಯ, ಮಧುಗಿರಿ ಶೈಕ್ಷಣಿಕ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎಂ.ಎಚ್. ಚಂದ್ರಯ್ಯ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.