ತುಮಕೂರು

ದಬ್ಬೇಘಟ್ಟ ಗ್ರಾಮಸ್ಥರಿಂದ ಮತ ಬಹಿಷ್ಕಾರ

Published On :

ತುರುವೇಕೆರೆ: ಕುಡಿಯೋಕೇ ನೀರಿಲ್ಲ, ರಸ್ತೆ ಇಲ್ಲ, ವಿದ್ಯುತ್ ಇಲ್ಲ, ವೈದ್ಯರು ಇಲ್ಲ. ಪಶು ವೈದ್ಯರೂ ಇಲ್ಲ, ಹಾಗೂ ಇತರೆ ಮೂಲಭೂತ ಸೌಲಭ್ಯಗಳು ಇಲ್ಲದಿರುವ ಕಾರಣ  ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ದಬ್ಬೇಘಟ್ಟದ ಸುತ್ತಮುತ್ತಲಿನ ಗ್ರಾಮಸ್ಥರು ತೀರ್ಮಾನಿಸಿದ್ದಾರೆ.
ದಬ್ಬೇಘಟ್ಟ ಒಳಗೊಂಡಂತೆ ಸುತ್ತ ಮುತ್ತಲ ಸುಮಾರು 18 ಗ್ರಾಮದ ಜನರು ಹೋಬಳಿ ಕೇಂದ್ರವಾದ ದಬ್ಬೇಘಟ್ಟ ಗ್ರಾಮದ ಮಧ್ಯ ಭಾಗದಲ್ಲಿ ನೂರಾರು ಮಂದಿ ರೈತರು, ಮಹಿಳೆಯರು ಹಾಗೂ ಪುಟಾಣಿ ಮಕ್ಕಳೂ ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಚುನಾವಣೆ ಬಂದಾಗ ಮಾತ್ರ ತಮ್ಮ ಕಷ್ಟಕ್ಕೆ ಮೊಸಳೆ ಕಣ್ಣೀರು ಸುರಿಸುವ ರಾಜಕಾರಣಿಗಳು ನಂತರ ನಮ್ಮತ್ತ ತಿರುಗಿ ನೋಡುವುದೇ ಇಲ್ಲ. ಸುಮಾರು 800 ರಿಂದ 1000 ಅಡಿಗಳಷ್ಟು ಆಳ ಕೊರೆದರೂ ಕುಡಿಯುವ ನೀರು ದೊರೆಯದಾಗಿದೆ. ಅಂತರಜಲ ಮಟ್ಟ ಸಂಪೂರ್ಣ ಕುಸಿದು ಹೋಗಿದೆ. ಸರ್ಕಾರ ಏತ ನೀರಾವರಿ ಯೋಜನೆಯನ್ನು ಜಾರಿಗೆ ತಂದಿತ್ತು. ಆದರೆ ಇದುವರೆಗೂ ಜಾರಿಗೆ ಬಂದಿಲ್ಲ. ತಮ್ಮ ಪ್ರದೇಶದಿಂದಲೇ ಹೇಮಾವತಿ ನದಿ ಕಾಲುವೆ ಇತರೆಡೆಗೆ ಹಾದು ಹೋಗಿದೆ. ಕುಡಿಯುವ ಹನಿ ನೀರಿಗೂ ತತ್ವಾರವಿದೆ. ಫ್ಲೋರೈಡ್ ನೀರು ಬರುತ್ತಿದೆ. ಜನರು ಹಲವಾರು ರೋಗ ರುಜಿನಗಳಿಂದ ಬಳಲುತ್ತಿದ್ದಾರೆ. ಆದರೂ ಸಹ ಈ ರಾಜಕಾರಣಿಗಳಿಗೆ ತಾವುಗಳು ಪಡುತ್ತಿರುವ ಯಾತನೆ ತಿಳಿದಿಲ್ಲ.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ ತಮ್ಮ ವ್ಯಾಪ್ತಿಯಲ್ಲಿ ಏತ ನೀರಾವರಿ ಆಗೇ ಹೋಗಿದೆ ಎಂದು ಹೇಳಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರನ್ನು ಕರೆತಂದು ಶಂಕುಸ್ಥಾಪನೆಯನ್ನೂ ನೆರವೇರಿಸಿ ಜನರ ಕಣ್ಣಿಗೆ ಮಣ್ಣೆರೆಚಿದರು ಎಂದು ಪ್ರತಿಭಟನಾಕಾರರು ಶಾಸಕ ಎಂ.ಟಿ.ಕೃಷ್ಣಪ್ಪನವರ ವಿರುಧ್ಧ ಹರಿಹಾಯ್ದರು.  ಈ ಬಾರಿಯ ಚುನಾವಣೆಗೆ ಯಾವುದೇ ಪಕ್ಷದ ಅಭ್ಯರ್ಥಿಗಳು ಮತ ಕೇಳಲು ಬಂದರೂ ಯಾರೂ ತೆರಳಬಾರದು ಎಂಬ ನಿರ್ಣಯಕ್ಕೆ ಬಂದಿರುವುದಾಗಿ ಗ್ರಾಮದ ಮುಖಂಡರಾದ ಲಕ್ಷ್ಮಣ್ ಗೌಡ, ಮಂಜೇಗೌಡ, ಉಗ್ರೇಗೌಡ, ರೈತ ಸಂಘದ ಅಧ್ಯಕ್ಷ ಶ್ರೀನಿವಾಸ್ ಗೌಡ ಮೊದಲಾದವರು ತಿಳಿಸಿದರು.  
ಆಸ್ಪತ್ರೆಗೆ ಕುರಿ ಕೂಡಿ ಪ್ರತಿಭಟನೆ: ತಮ್ಮ ಗ್ರಾಮದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಕಳೆದ ಎರಡು ವರ್ಷದಿಂದ ವೈದ್ಯರೇ ಇಲ್ಲ. ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಹೇಳಿ ಹೇಳಿ ಸಾಕಾಗಿ ಹೋಗಿದೆ. ಪರ್ಯಾಯ ವ್ಯವಸ್ಥೆ ಮಾಡಿಲ್ಲವೆಂದು ರೈತರು ಆಸ್ಪತ್ರೆಗೆ ಕುರಿಗಳನ್ನು ಕೂಡಿ ಹಾಕಿ ಪ್ರತಿಭಟನೆ ಮಾಡಿದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.