ತುಮಕೂರು

ಕವಿಗೆ ಸಾಮಾಜಿಕ ಪ್ರಜ್ಞೆ ಇರಬೇಕು

Published On :

ತುಮಕೂರು: ಕವಿಯಾದವನಿಗೆ ಸಾಮಾಜಿಕ ಪ್ರಜ್ಞೆ ಇರಬೇಕೆಂದು ಸಾಹಿತಿ ಎನ್. ನಾಗಪ್ಪ ಪ್ರತಿಪಾದಿಸಿದರು. ತುಮಕೂರಿನ ಅನನ್ಯ ಪ್ರಕಾಶನದ ವತಿಯಿಂದ ತ್ರಿನೇತ್ರ ಸ್ಕೂಲ್ ಆಫ್ ಡ್ಯಾನ್ಸ್ ಸಭಾಂಗಣದಲ್ಲಿ ಆಯೋಜಿಸಿದ್ದ ವಸಂತ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಸಾಮಾಜಿಕ ಪ್ರಜ್ಞೆ ಇದ್ದರೆ ಸಹಜವಾಗಿಯೇ ಸಮಾಜದ ಅರಿವು ಮೂಡುತ್ತದೆ. ಪ್ರಜ್ಞೆಯ ಜೊತೆಯಲ್ಲಿ ಬದ್ಧತೆ ಇದ್ದರೆ ಉತ್ತಮ ಕವಿಯಾಗಲೂ ಸಾಧ್ಯವಿದೆ ಎಂದ ಅವರು ಬರೆದದ್ದೆಲ್ಲಾ ಕವನವಾಗುವುದಿಲ್ಲಾ, ಬರಹಗಾರರೆಲ್ಲಾ ಕವಿಗಳಾಗಲೂ ಸಾಧ್ಯವಿಲ್ಲ ಎಂದರು. ಒಬ್ಬ ಕವಿಗೆ ಸಾಮಾಜಿಕ ಪ್ರಜ್ಞೆ ಇದ್ದಾಗ ಆತನಿಗೆ ಸಾರ್ವಕಾಲಿಕ ಸತ್ಯದ ಅರಿವಾಗುತ್ತದೆ. ಆ ಮೂಲಕ ಸತ್ಯವನ್ನು ಹುಡುಕುವ ಪ್ರಯತ್ನ ಮಾಡುತ್ತಾನೆ. ಪಂಪನ ಮನುಕುಲಂ ತಾನೊಂದೆ ವಲಂ ಇಂದಿಗೂ ಸತ್ಯವಾಗಿಯೇ ಇದ್ದು ಒಂದು ಉದಾಹರಣೆ ಎಂದರು.
ಕವಿಗಳಾಗುವವರಿಗೆ ಅನುಭವ ಮುಖ್ಯ. ಈ ಅನುಭವವನ್ನು ವಚನಗಾರ್ತಿಯರಲ್ಲಿ ಕಾಣಬಹುದಾಗಿದೆ. ವಚನಗಾರರು ಮಾತನಾಡುತ್ತಾ ಹೊದದ್ದೇ ವಚನಗಳಾಗಿವೆ ಎಂದು ವಿವರಿಸಿದರು. ಬರವಣಿಗೆಯಲ್ಲಿ ತೊಡಗುವವರಿಗೆ ವಸ್ತುವಿನ ಆಯ್ಕೆ ತುಂಬ ಮುಖ್ಯವಾದದ್ದು. ವಸ್ತುವಿನ ಆಯ್ಕೆ ಸರಿಯಾಗಿರದಿದಲ್ಲಿ ಉತ್ತಮ ಬರಹಗಳು ಮೂಡಿಬರಲಾರವು ಎಂದರು.
ಪ್ರಕೃತಿ ನಾಶ: ಮುಖ್ಯ ಅತಿಥಿಗಳಾಗಿದ್ದ ಲೇಖಕಿ ಬಾ.ಹ. ರಮಾಕುಮಾರಿ ಮಾತನಾಡಿ ಇಂದು ಎಲ್ಲ ಕಡೆ ಪ್ರಕೃತಿ ನಾಶವಾಗುತ್ತಿದೆ ಇದರ ಜೊತೆಗೆ ಋತುಮಾನದಲ್ಲಿಯೂ ಏರುಪೇರು ಕಾಣುತ್ತಿದ್ದೇವೆ. ಪ್ರಕೃತಿ ನಾಶದಿಂದ ಇಂತಹ ಅವಗಡಗಳು ಎದುರಾಗುತ್ತಿವೆ ಎಂದ ಅವರು ಕವಿಗಳು ಸಮುದಾಯಕ್ಕೆ ಸ್ಪಂದಿಸುವ ರೀತಿಯಲ್ಲಿ ಬೆಳೆಯಬೇಕು. ಪ್ರಕೃತಿ ಉಳಿಸಬೇಕು ಎಂದರು. ಲೇಖಕಿ ಸುಶೀಲ ಸದಾಶಿವಯ್ಯ ಮಾತನಾಡಿ ಕಾವ್ಯದ ವಾಚನದಲ್ಲಿ ಸಿಗುವ ಸಂತೋಷ ಅಪರಿಮಿತವಾದದ್ದು ಅದರಲ್ಲಿಯೂ ವಿಶೇಷವಾಗಿ ವಸಂತ ಚೈತ್ರದ ಈ ಕಾಲದಲ್ಲಿ ಕವನಗಳು ಸುಂದರವಾಗಿ ಮುಡಿಬರುತ್ತವೆ. ಚಿಗುರನ್ನು ನೋಡಿ ಸಂಭ್ರಮಿಸುವ ಕಾಲ ಇದು. ಇದುವರೆಗಿನ ಕಷ್ಟಗಳನ್ನು ಮರೆತು ಹೊಸ ಬದುಕಿಗೆ ತೆರೆದುಕೊಳ್ಳಬೇಕಾಗಿದೆ ಎಂದರು. ಕಥೆಗಾರ ಜಿ.ಕೆ. ಕುಲಕರ್ಣಿ ಮಾತನಾಡಿದರು. ಅನನ್ಯ ಪ್ರಕಾಶನದ ಮುಖ್ಯಸ್ಥೆ ಹಾಗೂ ನಗರ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಎಂ.ಸಿ. ಲಲಿತ ಪ್ರಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾ ಪ್ರಾರ್ಥಿಸಿದರು. ನಾಗರ್ಜುನ ಸಾಗ್ಗೆರೆ ಸ್ವಾಗತಿಸಿದರು. ಸುಮಪ್ರಸನ್ನ ನಿರೂಪಿಸಿ ಮೋಹನ ಕುಮಾರ್ ವಂದಿಸಿದರು.
ಕವಿಗೋಷ್ಠಿಯಲ್ಲಿ ಎನ್. ನಾಗಪ್ಪ, ರಮಾಕುಮಾರಿ, ಎಂ.ಸಿ. ಲಲಿತ, ನಾಗರತ್ನ ಚಂದ್ರಪ್ಪ, ಕಲಾಶ್ರೀ, ನಾಗಾರ್ಜುನ ಸಾಗ್ಗೆರೆ, ರಾಮಪ್ಪ ದೊಣೆರ, ಪ್ರೊ. ವೆಂಕಟೇಶ್, ಆರ್.ಎಚ್. ಸುಕನ್ಯ, ಎಂಜಿ. ಸಿದ್ದಾರಾಮಯ್ಯ, ಬ್ಯಾಡನೂರು ನಾಗಭೂಷಣ, ತೋಟದ ಕೃಷ್ಣಮೂರ್ತಿ, ಸಿದ್ದಲಿಂಗಪ್ಪ, ತುಮಕೂರು ಭಾರ್ಗವಿ, ಹೇಮಲತ, ಮಿಮಿಕ್ರಿ ಈಶ್ವರಯ್ಯ. ತು.ಮ. ಬಸವರಾಜು ಸೇರಿದಂತೆ 33 ಕವಿಗಳು ಕವನ ವಾಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.