ರಸ್ತೆಗಿಳಿದ ರಾಜಕೀಯ ನೇತಾರರು
-ಉಗಮ ಶ್ರೀನಿವಾಸ್
ತುಮಕೂರು: ಚುನಾವಣೆಗೆ ಇನ್ನು ಒಂದು ವಾರ ಬಾಕಿ ಇರುವಂತೆಯೇ ಅಕ್ಷರಶಃ ರಾಜಕೀಯ ನೇತಾರರು ರೋಡಿಗೆ ಇಳಿದಿದ್ದಾರೆ.
ಒಂದು ಕಡೆ ರೋಡ್ ಶೋ, ಮತ್ತೊಂದು ಕಡೆ ಮನೆ ಮನೆಗೆ ಭೇಟಿ ನೀಡುವ ಮೂಲಕ ರಾಜಕೀಯ ಮುಖಂಡರು ಕೊನೆ ಕ್ಷಣದ ಕಸರತ್ತಿಗೆ ಸಜ್ಜಾಗಿದ್ದಾರೆ.
ತುಮಕೂರು ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜು ಶುಕ್ರವಾರ ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡರ ಪತ್ನಿ ಕಲ್ಪನಾ, ತುಮಕೂರು ಶಾಸಕ ಡಾ. ರಫೀಕ್ ಅಹಮದ್ ಪತ್ನಿ ಐಷಾ ಮುಂತಾದವರು ಮತಯಾಚನೆ ಮಾಡಿದರು. ಬಿಎಸ್ಪಿ ಅಭ್ಯರ್ಥಿ ನಿಲೂಫರ್ ತುಮಕೂರಿನ ವಿವಿಧ ಬಡಾವಣೆಗಳಲ್ಲಿ ರೋಡ್ ಶೋ ನಡೆಸಿದರು.
ಅಮಾನಿಕೆರೆಯಲ್ಲಿ ಮತ ಬೇಟೆ: ಜೆಡಿಎಸ್ ಕೂಡ ಚುನಾವಣಾ ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ. ಶುಕ್ರವಾರ ಬೆಳ್ಳಂ ಬೆಳಗ್ಗೆಯೇ ತುಮಕೂರಿನ ಅಮಾನಿಕೆರೆ ಸಮೀಪ ಜೆಡಿಎಸ್ ಕಾರ್ಯಕರ್ತರು ತಮ್ಮ ಪಕ್ಷದ ಅಭ್ಯಥಿ ಎ. ಕೃಷ್ಣಪ್ಪ ಪರ ಮತಯಾಚಿಸಿದರು. ಇನ್ನು ಚುನಾವಣೆಗೆ ಇರುವುದು ಕೇವಲ ಐದು ದಿವಸ ಮಾತ್ರ. ಇನ್ನು 3 ದಿವಸಕ್ಕೆ ಬಹಿರಂಗ ಪ್ರಚಾರ ಅಂತ್ಯಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಆದಷ್ಟು ಚುರುಕಾಗಿ ಅಭ್ಯರ್ಥಿಗಳು ಓಡಾಡುತ್ತಿದ್ದಾರೆ.
ಇನ್ನು ಸಿಪಿಐ ಅಭ್ಯರ್ಥಿ ಚಿನ್ನಪ್ಪ ಕೂಡ ಶುಕ್ರವಾರ ಬೆಳಗ್ಗೆ ತುಮಕೂರು ನಗರದಲ್ಲಿ ಮನೆ ಮನೆಗೆ ತೆರಳಿ ಮತ ಯಾಚಿಸಿದರು.
ಜಿಲ್ಲಾಡಳಿತ ಸಜ್ಜು: ಒಂದು ಕಡೆ ಅಭ್ಯರ್ಥಿಗಳು ಕೊನೆ ಕ್ಷಣದ ಪ್ರಚಾರದಲ್ಲಿ ಮಗ್ನವಾಗಿದ್ದರೆ, ಜಿಲ್ಲಾಡಳಿತ ಚುನಾವಣೆಗೆ ಸಕಲ ರೀತಿಯಲ್ಲೂ ಸಜ್ಜಾಗಿದೆ. ಈಗಾಗಲೇ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ನೌಕರರಿಗೆ ಮಾಹಿತಿ ನೀಡಲಾಗಿದೆ. ಮತ್ತೊಂದು ಕಡೆ ಜಿ.ಪಂ. ಸಿಇಓ ಅವರು ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಹೀಗಾಗಿ ಚುನಾವಣಾ ಪ್ರಕ್ರಿಯೆಯೇ ಅಂತಿಮ ಕದನಕ್ಕೆ ಈಗ ಬಂದಾಗಿದ್ದು ಭಾನುವಾರ ಕಳೆದ ಮೇಲೆ ಮತ್ತೆ ಶಾಂತಿಯುತ ಮತಬೇಟೆ ಆರಂಭವಾಗಲಿದೆ.
ಗಂಟಲು ಸಮಸ್ಯೆ: ಕಳೆದ 20 ದಿವಸದಿಂದ ಪ್ರತಿ ದಿನವೂ ಪ್ರಚಾರದಲ್ಲಿ ತೊಡಗಿಕೊಂಡಿರುವ ಅಭ್ಯರ್ಥಿಗಳ ಗಂಟಲು ಬೇನೆ ಆರಂಭವಾಗಿದೆ. ನಿರಂತರವಾಗಿ ಮಾತನಾಡಿ ಅವರ ಗಂಟಲು ಕಟ್ಟಿಕೊಂಡಿದೆ. ಇದ್ಯಾವುದನ್ನು ಲೆಕ್ಕಿಸದೆ ಅಭ್ಯರ್ಥಿಗಳು ಮತ ಬೇಟೆಗೆ ಹೊರಟಿದ್ದಾರೆ. ಕಣದಲ್ಲಿರುವವರ ಪೈಕಿ ಅತ್ಯಂತ ಹಿರಿಯರಾಗಿರುವ 73 ವರ್ಷದ ಜಿ.ಎಸ್. ಬಸವರಾಜು ಎಂದಿನಂತೆ ಉತ್ಸಾಹದಿಂ ಮತ ಬೇಟೆ ನಡೆಸುತ್ತಿದ್ದಾರೆ. ಹಾಗೆಯೇ ಎ. ಕೃಷ್ಣಪ್ಪ ಹಾಗೂ ಮುದ್ದಹನುಮೇಗೌಡ ಕೂಡ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

