ಮತದಾರರಲ್ಲದವರು ಕ್ಷೇತ್ರ ಬಿಡಲು ಸೂಚನೆ
ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದ ಮತದಾರರಲ್ಲದವರು ಕ್ಷೇತ್ರದಲ್ಲಿ ಉಳಿಯತಕ್ಕದ್ದಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಕೆ.ಎಸ್. ಸತ್ಯಮೂರ್ತಿ ತಿಳಿಸಿದ್ದಾರೆ.
ಆಯಾ ಕ್ಷೇತ್ರದ ಮತದಾರರು ಮಾತ್ರ ಆಯಾ ಕ್ಷೇತ್ರದಲ್ಲಿ ಉಳಿಯಲು ಅವಕಾಶವಿರುತ್ತದೆ ಎಂದು ತಿಳಿಸಿರುವ ಅವರು, ಪ್ರಚಾರ ಅವಧಿ ಮುಗಿದ ನಂತರವೂ ರಾಜಕೀಯ ಪಕ್ಷಗಳು ತಮ್ಮ ಬೆಂಬಲಿಗರನ್ನು ಕರೆತಂದು ಪ್ರಚಾರವನ್ನು ಮುಂದುವರೆಸುವ ಪ್ರವೃತ್ತಿಗೆ ಚುನಾವಣಾ ಆಯೋಗವು ಕಡಿವಾಣ ಹಾಕಿದ್ದು, ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಉದ್ದೇಶದಿಂದ ಆಯೋಗವು ನಿರ್ದೇಶನ ನೀಡಿದೆ ಎಂದರು.
ಮತದಾನ ಬಹಿಷ್ಕರಿಸದಂತೆ ಮನವಿ: ಶಿರಾ ತಾಲೂಕು ಹಲ್ಕೂರು ಗ್ರಾಮದಲ್ಲಿ ನಡೆಸಲಾಗುತ್ತಿರುವ ಎಸ್.ಎಲ್.ಎನ್. ಕೋಳಿ ಫಾರಂ ಕುರಿತಂತೆ ಫಾಸ್ಟ್ ಟ್ರ್ಯಾಕ್ ಕೋರ್ಟ್ ತುಮಕೂರು ಇಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿ ಇತ್ಯರ್ಥಕ್ಕೆ ಬಾಕಿ ಇರುವುದರಿಂದ, ವಸ್ತುಸ್ಥಿತಿ ಬಗ್ಗೆ ಜನತೆಗೆ ಮನವರಿಕೆ ಮಾಡಿಕೊಡುವ ಮೂಲಕ ಹಲ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಮತದಾನ ಬಹಿಷ್ಕರಿಸದಂತೆ ಕ್ರಮ ವಹಿಸಲು ಮಧುಗಿರಿ ಉಪವಿಭಾಗಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಪ್ರಕರಣ ದಾಖಲಾಗಿ ಇತ್ಯರ್ಥಕ್ಕೆ ಬಾಕಿ ಇರುವುದರಿಂದ ಮತ್ತು ಲೋಕಸಭಾ ಚುನಾವಣೆ ಸಂಬಂಧ ಮಾದರಿ ನೀತಿ ಸಂಹಿತೆಯು ಮಾ. 5 ರಿಂದ ಜಾರಿಯಲ್ಲಿರುವುದರಿಂದ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣದಲ್ಲಿ ಆದೇಶ ಆದ ನಂತರ ಸದರಿ ಆದೇಶದಂತೆ ಕ್ರಮ ವಹಿಸಲಾಗುವುದು ಎಂದು ಹಲ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಮಾಡಿಕೊಟ್ಟು, ಲೋಕಸಭಾ ಸಾರ್ವತ್ರಿಕ ಚುನಾವಣೆ-2014ರ ಮತದಾನ ಬಹಿಷ್ಕರಿಸುವ ನಿರ್ಧಾರ ತೆಗೆದುಕೊಳ್ಳಬಾರದಾಗಿ ತಿಳಿವಳಿಕೆ ನೀಡಲು ಉಪವಿಭಾಗಾಧಿಕಾರಿ, ಮಧುಗಿರಿ ಉಪವಿಭಾಗ ಅವರಿಗೆ ಈ ಮೇಲಿನಂತೆ ಸ್ಪಷ್ಟನೆಯನ್ನು ಜಿಲ್ಲಾಧಿಕಾರಿಗಳು ನೀಡಿದ್ದಾರೆ.
ಮದ್ಯ ನಿಷೇಧ: ಲೋಕಸಭಾ ಸಾರ್ವತ್ರಿಕ ಚುನಾವಣೆಯನ್ನು ಪಾರದರ್ಶಕವಾಗಿ, ಮುಕ್ತವಾಗಿ, ನ್ಯಾಯಸಮ್ಮತವಾಗಿ, ಶಾಂತಿಯುತವಾಗಿ ನಡೆಸುವ ಸಂಬಂಧ ಮತದಾನ ಪೂರ್ವದಲ್ಲಿ ಪಾನಮುಕ್ತ ದಿನಗಳೆಂದು ಘೋಷಿಸಿ, ಜಿಲ್ಲೆಯಾದ್ಯಂತ ಜಾರಿಯಲ್ಲಿರುವಂತೆ ಎಲ್ಲಾ ಮದ್ಯದ ವಹಿವಾಟುಗಳನ್ನು ನಿಷೇಧಿಸಿ, ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಆದೇಶಿಸಿದ್ದಾರೆ. ಮತದಾನ ಪೂರ್ವದಲ್ಲಿ ಅಂದರೆ ಏಪ್ರಿಲ್ 15 ರಂದು ಸಂಜೆ 6ಗಂಟೆಯಿಂದ ಮತದಾನದ ದಿನ ಅಂದರೆ ಏಪ್ರಿಲ್ 17 ರ ಸಂಜೆ 6 ಗಂಟೆಯವರೆಗೆ ಹಾಗೂ ಮೇ 16 ರಂದು ಮತ ಎಣಿಕೆ ನಡೆಯುವ ಸಂಬಂಧ ಮೇ 15 ರ ಮಧ್ಯರಾತ್ರಿ 12 ಗಂಟೆಯಿಂದ ಮೇ 16 ರ ಮಧ್ಯರಾತ್ರಿ 12 ಗಂಟೆಯವರೆಗೆ ಎಲ್ಲಾ ಮದ್ಯ ಮಾರಾಟ, ಹಂಚಿಕೆ, ಸಾಗಾಣಿಕೆ, ಇತ್ಯಾದಿಗಳನ್ನು ನಿಷೇಧಿಸಿ ಡಿಸಿ ಆದೇಶಿಸಿದ್ದಾರೆ.
ವಾಹನ ವ್ಯವಸ್ಥೆ: ಮತಗಟ್ಟೆ ಅಧಿಕಾರಿ, ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿರುವ ತಾಲೂಕುಗಳ ಕೇಂದ್ರ ಸ್ಥಾನದ ಸ್ಥಳಗಳಿಂದ ಅವರುಗಳನ್ನು ನೇಮಕ ಮಾಡಿದ ವಿಧಾನಸಭಾ ಕ್ಷೇತ್ರಗಳಿಗೆ ಕಳುಹಿಸಿಕೊಡಲು ಏ. 16 ರಂದು ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ಬಸ್ಸುಗಳ ವ್ಯವಸ್ಥೆಯನ್ನು ಮಾಡಲಾಗಿದ್ದು, ಮತಗಟ್ಟೆ ಅಧಿಕಾರಿ ಸಿಬ್ಬಂದಿಗಳು ಈ ವಾಹನ ವ್ಯವಸ್ಥೆಯ ಉಪಯೋಗ ಪಡೆದು ಚುನಾವಣಾ ಕರ್ತವ್ಯಕ್ಕೆ ನೇಮಕವಾದ ವಿಧಾನಸಭಾ ಕ್ಷೇತ್ರಗಳಿಗೆ ಸಕಾಲದಲ್ಲಿ ಹೋಗುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ನೇಮಕವಾಗಿರುವ ಸಿಬ್ಬಂದಿಯು ಬೆಳಿಗ್ಗೆ 7 ಗಂಟೆಗೆ ಈ ಕೆಳಕಂಡ ಸ್ಥಳಗಳಲ್ಲಿ ಸಕಾಲದಲ್ಲಿ ಹಾಜರಾಗತಕ್ಕದ್ದು ಎಂದು ಅವರು ತಿಳಿಸಿದ್ದಾರೆ. ತುಮಕೂರು ನಗರ ಮತ್ತು ಗ್ರಾಮಾಂತರ ತಾಲೂಕಿನ ಸರ್ಕಾರಿ ನೌಕರರಿಗೆ ಬಸ್ ವ್ಯವಸ್ಥೆಯನ್ನು ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮೈದಾನದಿಂದ ಮಾಡಲಾಗಿದೆ. ಅಂತೆಯೇ ಗುಬ್ಬಿ ತಾಲೂಕಿನ ನೌಕರರಿಗೆ ಸರ್ಕಾರಿ ಪಪೂ ಕಾಲೇಜು, ಗುಬ್ಬಿ, ಚಿ.ನಾಹಳ್ಳಿ ನೌಕರರಿಗೆ ಸರ್ಕಾರಿ ಪಪೂ ಕಾಲೇಜು ಚಿ.ನಾ.ಹಳ್ಳಿ, ತಿಪಟೂರು ನೌಕರರಿಗೆ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು, ತಿಪಟೂರು, ತುರುವೇಕೆರೆ ನೌಕರರಿಗೆ ಸರ್ಕಾರಿ ಪಪೂಕಾಲೇಜು, ತುರುವೇಕೆರೆ, ಕುಣಿಗಲ್ ತಾಲೂಕಿನ ನೌಕರರಿಗೆ ಮಹಾತ್ಮಗಾಂಧಿ ಸರ್ಕಾರಿ ಪಪೂ ಕಾಲೇಜು, ಕುಣಿಗಲ್, ಕೊರಟಗೆರೆ ನೌಕರರಿಗೆ ಸರ್ಕಾರಿ ಕಿರಿಯ ಕಾಲೇಜು, ಕೊರಟಗೆರೆ, ಶಿರಾ ನೌಕರರಿಗೆ ಸರ್ಕಾರಿ ಪಪೂ ಕಾಲೇಜು, ಶಿರಾ, ಪಾವಗಡ ನೌಕರರಿಗೆ ಸರ್ಕಾರಿ ಪದವಿಪೂರ್ವ ಕಾಲೇಜು, ಪಾವಗಡ, ಮಧುಗಿರಿ ನೌಕರರಿಗೆ ಸರ್ಕಾರಿ ಪದವಿಪೂರ್ವ ಕಾಲೇಜು, ಮಧುಗಿರಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

