ಅದ್ಧೂರಿ ಬಾಣದ ಚರಿತ್ರೆ, ಜಲದಿ ಉತ್ಸವ
ಮಧುಗಿರಿ: ತಾಲೂಕಿನ ಬಡವನಹಳ್ಳಿ ಶ್ರೀಲಕ್ಷ್ಮೀರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ಪ್ರಯುಕ್ತ ಬಾಣದ ಚರಿತ್ರೆ ಹಾಗೂ ಜಲದಿ ಉತ್ಸವ ಅದ್ಧೂರಿಯಾಗಿ ಜರುಗಿತು. ಸ್ವಾಮಿಗೆ ಹರಕೆ ತೀರಿಸುವ ಭಕ್ತಾದಿಗಳು ಪೂಜೆ ನೇರವೇರಿಸಿದರು. ಶ್ರೀಲಕ್ಷ್ಮೀರಂಗನಾಥ ಸ್ವಾಮಿ, ಶ್ರೀದೇವಿ-ಭೂದೇವಿ ಸಮೇತ ಭಕ್ತರ ಬೇಡಿಕೆ ಈಡೇರಿಸುವ ನಂಬಿಕೆಯಿಂದ ಸಾವಿರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಬಾಣ ಹೊತ್ತ ಉತ್ಸವಮೂರ್ತಿ ಜತೆ ಸುವರ್ಣಮುಖಿ ನದಿಗೆ ಭಕ್ತರು ಸಾಲುಗಟ್ಟಿ ನಿಂತಿದ್ದರು. ಮದುವೆ, ಸಂತಾನ ಭಾಗ್ಯ ಮತ್ತು ವಿವಿಧ ರೋಗ-ರುಜಿನಗಳ ಪರಿಹಾರಕ್ಕೆ ಹರಕೆ ಹೊತ್ತ ಭಕ್ತರು ಸ್ಥಳದಲ್ಲೇ ಸ್ನಾನ ಮಾಡಿ ಅಡ್ಡಲಾಗಿ ಮಲಗಿ ವಿಷೇಷ ಪೂಜೆ ನಡೆಸಿಕೊಡುತ್ತಾರೆ. ಬಾಣದ ಜತೆ ಶ್ರೀಲಕ್ಷ್ಮೀರಂಗನಾಥ ಸ್ವಾಮಿಗೆ ಜಲದಿ ಉತ್ಸವ ನಡೆಯಿತು. ಉತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಯುವತಿ ಅಪಹರಣ: ದೂರು ದಾಖಲು
ಶ್ರೀರಂಗಪಟ್ಟಣ: ತಾಲೂಕಿನ ಚಿನ್ನೇನಹಳ್ಳಿ ಗ್ರಾಮದ ಯುವತಿಯೊಬ್ಬಳನ್ನು ತಾಲೂಕಿನ ಮೇಳಾಪುರ ಗ್ರಾಮದ ಯುವಕ ಅಪಹರಿಸಿದ್ದಾನೆ ಎಂದು ಯುವತಿ ಪೋಷಕರು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗ್ರಾಮದ ಚೆನ್ನಯ್ಯಾ ಎಂಬುವರ ಪುತ್ರಿ ಕಲ್ಪನಾ(21)ಳನ್ನು ಮೇಳಾಪುರ ಗ್ರಾಮದ ಪ್ರದೀಪ್ ಎಂಬಾತ ಏ. 11 ರಂದು ಪಟ್ಟಣದ ಗಾರ್ಮೆಂಟ್ಸ್ ಬಳಿ ಯುವತಿಯನ್ನು ಅಪಹರಿಸಿ ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತಂತೆ ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಪಘಾತದಲ್ಲಿ ಬೈಕ್ ಸವಾರ ಸಾವು
ಮದ್ದೂರು: ಸಾರಿಗೆ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ತಾಲೂಕಿನ ನಿಡಘಟ್ಟ ಬಳಿ ಶುಕ್ರವಾರ ಜರುಗಿದೆ. ಕೆ.ಆರ್. ಪೇಟೆ ತಾಲೂಕು ಗೋವಿಂದೇಗೌಡನ ಕೊಪ್ಪಲು ಗ್ರಾಮದ ದೇವೇಗೌಡನ ಪುತ್ರ ಮಂಜುನಾಥ್ (22) ಮೃತಪಟ್ಟವರು. ಮಂಜುನಾಥ್ ಶುಕ್ರವಾರ ಸಂಜೆ ಬೆಂಗಳೂರಿನಿಂದ ಮೈಸೂರಿಗೆ ಬರುತ್ತಿದ್ದ ವೇಳೆ ಹಿಂದಿನಿಂದ ಸಾರಿಗೆ ಬಸ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸಂಚಾರಿ ಠಾಣೆ ಪೊಲೀಸರು ಬಸ್ನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕೊಂಡೋತ್ಸವ ಇಂದಿನಿಂದ
ಮಂಡ್ಯ: ಮದ್ದೂರು ತಾಲೂಕಿನ ಕಡಿಲುವಾಗಿಲು ಗ್ರಾಮದಲ್ಲಿ ಏ.20 ರಿಂದ ಮೇ.23ರವರೆಗೆ ಶ್ರೀ ವೀರಭದ್ರೇಶ್ವರಸ್ವಾಮಿ ಪರ ಮತ್ತು ಶ್ರೀ ಕಾಳಮ್ಮದೇವರ ಬಂಡಿ ಮತ್ತು ಕೊಂಡೋತ್ಸವ ನಡೆಯಲಿದೆ. ಮೇ.20ರ ರಾತ್ರಿ 9 ಗಂಟೆಗೆ ಗ್ರಾಮದ ಮಾರಮ್ಮ, ಮಂಚಮ್ಮ, ಮಸಣಮ್ಮ, ಹೆಬ್ಬದರಸಮ್ಮ, ಮದನಟ್ಟಿಯಮ್ಮ ದೇವರುಗಳ ಮೆರವಣಿಗೆ ನಡೆಯಲಿದೆ. ಮೇ 21 ರಂದು ವೀರಭದ್ರೇಶ್ವರಸ್ವಾಮಿ ಸಮುದಾಯ ಭವನ ಉದ್ಘಾಟನೆಯಾಗಲಿದೆ. ಶಾಸಕ ಡಿ.ಸಿ. ತಮ್ಮಣ್ಣ ಸಮುದಾಯ ಭವನವನ್ನು ಉದ್ಘಾಟಿಸುವರು. ಗ್ರಾಪಂ ಅಧ್ಯಕ್ಷೆ ಎಸ್.ಡಿ. ಸುನೀತ ಅಧ್ಯಕ್ಷತೆ ವಹಿಸುವರು. ಜಿಪಂ ಸದಸ್ಯ ಬಿ.ಬಸವರಾಜು, ತಾಪಂ ಸದಸ್ಯ ಎಲ್. ಪ್ರಕಾಶ್, ಗ್ರಾಪಂ ಸದಸ್ಯರಾದ ಆರ್. ನಂಜುಂಡೇಗೌಡ, ಕೆ. ಮಂಚಶೆಟ್ಟಿ, ಮಾಜಿ ಅಧ್ಯಕ್ಷ ದೇವೀರಮ್ಮ ಅತಿಥಿಗಳಾಗಿ ಭಾಗವಹಿಸುವರು. ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ, ಸಂಜೆ 7 ಗಂಟೆಗೆ ಕಾಳಮ್ಮ ದೇವರಿಗೆ ಕಂಬ ತರಲಾಗುವುದು. ಮೇ 22ರ ಸಂಜೆ 4 ಗಂಟೆಗೆ ಕಾಳಮ್ಮದೇವರ ಬಂಡಿ ಉತ್ಸವ, ರಾತ್ರಿ 9 ಗಂಟೆಗೆ ದೇವರುಗಳ ಮೆರವಣಿಗೆ, 10.30 ಗಂಟೆಗೆ ಕೊಂಡಕ್ಕೆ ಅಗ್ನಿ ಸ್ಪರ್ಶ. ಮೇ 23 ರಂದು ಬೆಳಗ್ಗೆ 5 ಗಂಟೆಗೆ ಬಾಯಿಬೀಗ, 6.30ಕ್ಕೆ ಕಾಳಮ್ಮ ದೇವರ ಕೊಂಡ, 8 ಗಂಟೆಗೆ ಮಡೆ ಆರತಿ ನಡೆಯಲಿದೆ ಎಂದು ಶ್ರೀ ವೀರಭದ್ರೇಶ್ವರಸ್ವಾಮಿ ಸೇವಾ ಟ್ರಸ್ಟ್ ಸದಸ್ಯರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

