ಆರ್ಟಿಐಗೆ ಸೆಡ್ಡು ಹೊಡೆದ ಸೆಸ್ಕ್
ಮೈಸೂರು: ಮಾಹಿತಿ ಹಕ್ಕು ಕಾಯಿದೆ ಬಂದ ನಂತರ ಅಧಿಕಾರಿಗಳು ಹೇಗೆ ತಪ್ಪಿಸಿಕೊಳ್ಳಬಹುದು ಎಂಬುದಕ್ಕೆ ನಾನಾ ದಾರಿ ಹುಡುಕಿಕೊಂಡಿರುತ್ತಾರೆ. ಅದರಂತೆ ಸೆಸ್ಕ್ನ ಸಾರ್ವಜನಿಕ ಮಾಹಿತಿ ಅಧಿಕಾರಿಯೊಬ್ಬರು ಕೇಳಿದ 13 ಪ್ರಶ್ನೆಗಳಲ್ಲಿ 11ಕ್ಕೆ ನೋ ಕಾಮೆಂಟ್ಸ್ ಎಂದಿದ್ದಾರೆ... - ಹೌದು. ಮೈಸೂರಿನ ಅಖಿಲ ಭಾರತೀಯ ಗ್ರಾಹಕ ಪಂಚಾಯಿತಿ ವತಿಯಿಂದ ದರ ಪರಿಷ್ಕರಣೆಗೆ ಕಾರಣ ಕೇಳಿ 13 ಪ್ರಶ್ನೆಗಳುಳ್ಳ ಹಾಗೂ 150 ಪದಗಳನ್ನು ಮೀರದ ಆರ್ಟಿಐ ಅರ್ಜಿಯನ್ನು 7.3.2014 ರಂದು ಸಲ್ಲಿಸಿದ್ದರು. ಅದಕ್ಕೆ ಉತ್ತರ ನೀಡಿದ ಪಿಆರ್ಒ ಒಂದೆರಡು ಪ್ರಶ್ನೆಗಳಿಗೆ ಉತ್ತರಿಸಿ, ಮಿಕ್ಕ ಪ್ರಶ್ನೆಗಳಿಗೆ ನೋ ಕಾಮೆಂಟ್ (ಪ್ರತಿಕ್ರಿಯೆ ಇಲ್ಲ) ಎಂದಿದ್ದಾರೆ.
ಆರ್ಟಿಐ ನಿಯಮ ಏನು ಹೇಳುತ್ತದೆ?: ಕರ್ನಾಟಕ ಮಾಹಿತಿ ಆಯೋಗ ರೂಪಿಸಿರುವ ಮಾಹಿತಿ ಹಕ್ಕುಗಳಿಗೆ ಸಂಬಂಧಿಸಿದ ಕಾಯಿದೆ, ನಿಯಮದ ಪ್ರಕಾರ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಸಂದರ್ಭಾನುಸಾರ, ಯಾವುದೇ ಯುಕ್ತ ಕಾರಣವಿಲ್ಲದೆ ಗೊತ್ತಿದ್ದೂ ಸರಿಯಲ್ಲದ, ಅಪೂರ್ಣ ಅಥವಾ ದಾರಿ ತಪ್ಪಿಸುವ ಮಾಹಿತಿ ನೀಡಿದ್ದಾನೆಂದು ಅಥವಾ ಕೋರಿಕೆಯ ವಿಷಯವಾಗಿದ್ದ ಮಾಹಿತಿಯನ್ನು ನಾಶಪಡಿಸಿದ್ದಾನೆಂದು ಅಥವಾ ಮಾಹಿತಿ ಒದಗಿಸುವುದಕ್ಕೆ ಯಾವುದೇ ರೀತಿಯಿಂದ ಅಡ್ಡಿಪಡಿಸಿದ್ದಾನೆಂದು ಅಭಿಪ್ರಾಯಪಟ್ಟಿದ್ದರೆ ಆ ಅಧಿಕಾರಿಯ ವಿರುದ್ಧ ಅನ್ವಯವಾಗುವ ಸೇವಾ ನಿಯಮಗಳಡಿ ಶಿಸ್ತು ಕ್ರಮ ಕೈಗೊಳ್ಳಲು ಶಿಫಾರಸು ಮಾಡತಕ್ಕದ್ದು ಎಂದು ಉಲ್ಲೇಖಿಸಲಾಗಿದೆ.
ಖಂಡನೆ
ಟಿ.ನರಸೀಪುರ ತಾಲೂಕಿನ ಆಲಗೂಡು ಗ್ರಾಮದಲ್ಲಿ ಮಹರ್ಷಿ ಭಾವಚಿತ್ರ ಹಾಗೂ ರಾಜ ವೀರ ಮದಕರಿ ನಾಯಕ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಅವಮಾನಿಸಿರುವುದಕ್ಕೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ನಾಯಕರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಮಹದೇವಪ್ಪ ಖಂಡಿಸಿದ್ದಾರೆ. ಈ ಗ್ರಾಮದಲ್ಲಿ ಇತ್ತೀಚಿನ ದಿನಗಳಲ್ಲಿ ಪ.ಜಾತಿ ಹಾಗೂ ಪಂಗಡದ ನಾಯಕ ಜನಾಂಗದವರಿಗೂ ಕ್ಷುಲ್ಲಕ ಕಾರಣಗಳಿಗಾಗಿ ಘರ್ಷಣೆ ಸಂಭವಿಸುತ್ತಿದ್ದು, ಎರಡೂ ಸಮಾಜದವರೂ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ. ಈ ಅಹಿತಕರ ಘಟನೆಗಳಿಗೆ ಕೇವಲ ಕೆಲವೇ ಮಂದಿ ಕಾರಣರಾಗಿದ್ದು, ತಮ್ಮ ಸ್ವಾರ್ಥ ಸಾಧನೆಗಾಗಿ ಎರಡೂ ಕೋಮಿನವರ ಮಧ್ಯ ವಿಷ ಬೀಜ ಬಿತ್ತುವ ದುಷ್ಕೃತ್ಯದಲ್ಲಿ ತೊಡಗಿದ್ದಾರೆ ಎಂದು ಹೇಳಿದ್ದಾರೆ. ಈ ಘಟನೆಗೆ ಕಾರಣರಾದವರನ್ನು ಕೂಡಲೆ ಬಂಧಿಸಿ, ಉಗ್ರ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿದ್ದಾರೆ.
ಕಾರ್ಯಾಗಾರ
ಭವನ್ಸ್ ಪ್ರಿಯಂವದ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ವತಿಯಿಂದ ಏ.26ರ ಬೆಳಗ್ಗೆ 10.30 ರಿಂದ ಸಂಜೆ 5.30ರವರೆಗೆ ಬಿಪಿಬಿಐಎಂ ಸಭಾಂಗಣದಲ್ಲಿ ಕಾರ್ಯಾಗಾರ ನಡೆಯಲಿದೆ. ಕೆ.ಬಿ. ಗಣಪತಿ ಉದ್ಘಾಟಿಸುವರು.
ಭಿತ್ತಿಪತ್ರ ತಯಾರಿಕೆಗೆ ಚಿತ್ರಕಲಾ ಸ್ಪರ್ಧೆ
ಕ.ಪ್ರ.ವಾರ್ತೆ , ಮೈಸೂರು , ಏ. 22
ವಿಶ್ವ ಪೃಥ್ವಿ ದಿನಾಚರಣೆ ಅಂಗವಾಗಿ ರಾಷ್ಟ್ರಮಟ್ಟದ ಬಿತ್ತಿಪತ್ರ ತಯಾರಿಕೆ ಸ್ಪರ್ಧೆಯು ಸಿದ್ಧಾರ್ಥನಗರದ ಪ್ರಾದೇಶಿಕ ಪ್ರಾಕೃತಿಕ ಇತಿಹಾಸ ಸಂಗ್ರಹಾಲಯದಲ್ಲಿ ಮಂಗಳವಾರ ನಡೆಯಿತು.
ಯಂಗ್ ಎನ್ವೆರ್ಮೆಂಟಲೀಸ್ಟ್ ಇಯರ್ ಅವಾರ್ಡ್ (ಯೆಯಾ 2014) ನೀಡುವ ಸಲುವಾಗಿ ಹಸಿರು ನಗರಗಳ ಕುರಿತಾಗಿ ಏರ್ಪಡಿಸಿದ್ದ ಭಿತ್ತಿಪತ್ರ ತಯಾರಿಕೆಯ ಈ ಸ್ಪರ್ಧೆಯಲ್ಲಿ 20ಕ್ಕೂ ಹೆಚ್ಚಿನ ಆಯ್ದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ 5 ಸಾವಿರ, ದ್ವಿತೀಯ 3 ಸಾವಿರ, ತೃತೀಯ 2 ಸಾವಿರ ಹಾಗೂ 5 ಮಂದಿಗೆ 3 ಸಾವಿರ ಸಮಾಧಾನಕರ ಬಹುಮಾನ ನೀಡಲಾಗುವುದು. ಜೂ.5 ರಂದು ನಡೆಯಲಿರುವ ವಿಶ್ವ ಪರಿಸರ ದಿನಾಚರಣೆಯಲ್ಲಿ ಬಹುಮಾನ ವಿತರಿಸಲಾಗುವುದು ಎಂದು ವಿಭಾಗದ ಮುಖ್ಯಸ್ಥ ಡಾ.ಓಂಕಾರ ನಾಯಕ್ ತಿಳಿಸಿದರು.
ಈ ಸ್ಪರ್ಧೆಯ ಮೊದಲ ಮೂವರು ವಿಜೇತರನ್ನು ದೆಹಲಿಯಲ್ಲಿ ನಡೆಯಲಿರುವ ಅಂತಿಮ ಸುತ್ತಿನ ಆಯ್ಕೆಗೆ ಕಳುಹಿಸಲಾಗುವುದು. ಅದರಲ್ಲಿ ವಿಜಯಿಯಾಗುವ ಒಬ್ಬರಿಗೆ ಯುವ ಪರಿಸರವಾದಿ ಪ್ರಶಸ್ತಿ, ಜತೆಗೆ 10 ಸಾವಿರ ನಗದು ಪುರಸ್ಕಾರ ಲಭಿಸಲಿದೆ ಎಂದರು.
ಮಹಿಳಾ ವೇದಿಕೆ ಉದ್ಘಾಟನೆ ನಾಳೆ
ಮೈಸೂರು: ಮೈಸೂರು ಮಹಿಳಾ ವೇದಿಕೆಯ ಉದ್ಘಾಟನೆ ಮತ್ತು ಸನ್ಮಾನ ಸಮಾರಂಭ ಏ.24ರ ಸಂಜೆ 5ಕ್ಕೆ ಕುವೆಂಪುನಗರದ ಗಾನಭಾರತಿಯಲ್ಲಿ ನಡೆಯಲಿದೆ. ಸುದರ್ಶನ ನರಸಿಂಹ ಕ್ಷೇತ್ರದ ಸಂಸ್ಥಾಪಕ ಡಾ.ಭಾಷ್ಯಂ ಸ್ವಾಮಿ ಸಾನ್ನಿಧ್ಯ ವಹಿಸಲಿದ್ದು, ಸಮಾಜ ಸೇವಕ ಕೆ. ರಘುರಾಮ್ ಮತ್ತು ಚಲನಚಿತ್ರ ನಟಿ ಸುಧಾ ನರಸಿಂಹರಾಜು ಮಹಿಳಾ ವೇದಿಕೆ ಉದ್ಘಾಟಿಸುವರು. ರಂಗಭೂಮಿ ಕಲಾವಿದೆ ಸರೋಜಾ ರಮೇಶ್ ಮುಖ್ಯ ಅತಿಥಿಯಾಗಿ, ಕಿರುತೆರೆ ನಿರೂಪಕ ವಿಕ್ರಮ್ ಅತಿಥಿಯಾಗಿ ಭಾಗವಹಿಸುವರು ಎಂದು ವೇದಿಕೆಯ ಅಧ್ಯಕ್ಷೆ ಸುಮನಾ ರಘುನಂದನ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಾರ್ಯಕ್ರಮದಲ್ಲಿ ಕರಕುಶಲ ಕಲಾವಿದೆ ಮಣಿ ಶೇಖರ್, ಮಾತನಾಡುವ ಬೊಂಬೆಯ ಸುಮಾ ರಾಜಕುಮಾರ್, ಸೌಂದರ್ಯ ತಜ್ಞೆ ಉಮಾ ಜಾದವ್, ಲಲಿತ ಕಲೆಯ ಯದುಗಿರಿ ಗೋಪಾಲನ್, ಹಿರಿಯ ಸಮಾಜ ಸೇವಕಿ ಶಶಿಕಲಾ ಜಯಕುಮಾರ್ ಅವರನ್ನು ಸನ್ಮಾನಿಸಲಾಗುವುದು.
ಚಂದ್ರಶೇಖರಯ್ಯ ಗೆಲವು ಖಚಿತ: ಸಂದೇಶ್ ಸ್ವಾಮಿ
ಕ.ಪ್ರ.ವಾರ್ತೆ , ಮೈಸೂರು , ಏ. 22
ಮೈಸೂರು- ಕೊಡಗು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಚಂದ್ರಶೇಖರಯ್ಯ ಅವರ ಗೆಲವು ಖಚಿತವಾಗಿದ್ದು, ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಪರ ಕೆಲಸ ಮಾಡಿದ್ದಾರೆ ಎಂಬುದು ಶುದ್ಧ ಸುಳ್ಳು ಎಂದು ಮಾಜಿ ಮೇಯರ್ ಸಂದೇಶ್ಸ್ವಾಮಿ ಹೇಳಿದರು.
ಈ ಚುನಾವಣೆಯಲ್ಲಿ ಯಾವೊಬ್ಬ ಪಾಲಿಕೆಯ ಜೆಡಿಎಸ್ ಸದಸ್ಯ ಬಿಜೆಪಿ ಪರ ಕೆಲಸ ಮಾಡಿಲ್ಲ. ಎದುರಾಳಿ ಪಕ್ಷಗಳು ಈ ರೀತಿ ಹೇಳಿಕೆ ನೀಡುವ ಮೂಲಕ ಗೊಂದಲ ಸೃಷ್ಟಿಸುತ್ತಿದ್ದು, ಅವರ ವರ್ತನೆಯನ್ನು ಖಂಡಿಸುತ್ತೇನೆ. ನಮ್ಮ ಅಭ್ಯರ್ಥಿಯ ಗೆಲವಿಗೆ ಸಾಮರ್ಥ್ಯ ಮೀರಿ ಶ್ರಮಿಸಿದ್ದೇವೆ. ಆದ್ದರಿಂದ ಗೆಲವು ನಮ್ಮ ಪರವಾಗಲಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗೆ 3.30 ಲಕ್ಷ ಮತಗಳು, ಕಾಂಗ್ರೆಸ್ಗೆ 4.1 ಲಕ್ಷ ಮತಗಳು ಹಾಗೂ ಬಿಜೆಪಿಗೆ 1 ಲಕ್ಷ ಮತಗಳು ಬಂದಿವೆ. ಅದೇ ಪಾಲಿಕೆಗೆ ಎಸ್ಡಿಪಿಐಗೆ 40 ಸಾವಿರ ಮತಗಳು ಲಭಿಸಿದ್ದು, ಈಗ ಜೆಡಿಎಸ್- ಎಸ್ಡಿಪಿಐ ಒಟ್ಟಾಗಿ ಮತಪ್ರಚಾರ ಮಾಡಿರುವುದರಿಂದ ನಮ್ಮ ಅಭ್ಯರ್ಥಿ ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಗೆಲವಿನಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಕೆ.ಎಸ್. ಶಿವರಾಮು ಅವರ ಕೊಡುಗೆಯೂ ಇದೆ ಎಂದು ಅವರು ತಿಳಿಸಿದರು. ಈ ಸತ್ಯ ಅರಿತ ಇತರೆ ಪಕ್ಷಗಳ ಮುಖಂಡರು ಸೋಲುವ ಭೀತಿಯಿಂದ ವೈಯಕ್ತಿಕ ನಿಂದನೆ, ತೇಜೋವಧೆಗೆ ಇಳಿದಿದ್ದಾರೆ. ಇದೇ ರೀತಿ ಚಾಮರಾಜನಗರ ಅಭ್ಯರ್ಥಿಯಾದ ಎಂ.ಶಿವಣ್ಣ ಅವರ ರಾಜಕೀಯ ತೇಜೋವಧೆಗಿಳಿರುವುದು ಸಾಧುವಲ್ಲ. ಅವರು ಪ್ರಾಮಾಣಿಕರು. ಪಕ್ಷದ ವರಿಷ್ಠರೆ ಟಿಕೆಟ್ ನೀಡಿರುವಾಗ ಅವರು ನಾಪತ್ತೆಯಾಗುವ ಪ್ರಮೇಯವೇ ಇಲ್ಲ. ಇದೆಲ್ಲಾ ಊಹಾಪೋಹಾವಷ್ಟೆ ಎಂದರು.
ಒಡಕು ಸರಿಯಲ್ಲ: ಈ ಚುನಾವಣೆಯಲ್ಲಿ ಒಕ್ಕಲಿಗ ಮತ್ತು ಕುರುಬ ಸಮುದಾಯದ ನಡುವೆ ಒಡಕು ಮೂಡಿಸಿ ಸಾಮರಸ್ಯ ಕದಡುವ ಸಂಚು ನಡೆಯುತ್ತಿದೆ. ಇಂತಹ ಬೆಳವಣಿಗೆ ಸಮಾಜಕ್ಕೆ ಮಾರಕವಾಗಿದ್ದು, ಕೆಲವು ಗಾಳಿ ಹಬ್ಬಿಸಿ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತಿದ್ದಾರೆ. ರಾಜಕೀಯ ಉದ್ದೇಶಕ್ಕೆ ಜಾತಿ ಜಾತಿಗಳ ನಡುವೆ ಸಂಘರ್ಷ ಹಚ್ಚುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು. ಉಪಮೇಯರ್ ವಿ.ಶೈಲೇಂದ್ರ, ಮಾಜಿ ಉಪಮೇಯರ್ಗಳಾದ ಮಹದೇವಪ್ಪ, ಎಂ.ಜೆ. ರವಿಕುಮಾರ್, ಪಾಲಿಕೆ ಸದಸ್ಯ ಬಿ.ಎಂ. ನಟರಾಜು ಇದ್ದರು.
ವಾರ್ಷಿಕೋತ್ಸವ ಪ್ರಯುಕ್ತ ಮ್ಯಾರಥಾನ್ ನಾಳೆ
ಮೈಸೂರು: ಎಟಿಎಂಇ ಎಂಜಿನಿಯರಿಂಗ್ ಕಾಲೇಜಿನ ವಾರ್ಷಿಕೋತ್ಸವ ಅಂಗವಾಗಿ ಏ.24 ರಂದು ಆತ್ಮೆ ಮ್ಯಾರಥಾನ್- 2014 ಆಯೋಜಿಸಲಾಗಿದೆ.
ಕುಡಿದು ವಾಹನ ಚಾಲನೆ ಸರಿಯಲ್ಲ ಎಂಬ ಜಾಗೃತಿ ಘೋಷಣೆಯೊಂದಿಗೆ ಆಯೋಜಿಸಿರುವ ಈ ಮ್ಯಾರಥಾನ್ ಅಂದು ಬೆಳಗ್ಗೆ 7ಕ್ಕೆ ಮಹಾರಾಜ ಕಾಲೇಜು ಮೈದಾನದಿಂದ ಆರಂಭಗೊಳ್ಳಲಿದ್ದು, ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಚಾಲನೆ ನೀಡಲಿದ್ದು, ವಿಧಾನ ಪರಿಷತ್ ಸದಸ್ಯ ಗೋ. ಮಧುಸೂದನ್ ಅತಿಥಿಯಾಗಿ ಭಾಗವಹಿಸುವರು ಎಂದು ಕಾಲೇಜು ಪ್ರಾಂಶುಪಾಲ ಡಾ.ಎಲ್. ಬಸವರಾಜು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮ್ಯಾರಥಾನ್ ಓಟವು ಮಹಾರಾಜ ಕಾಲೇಜು ಮೈದಾನದಿಂದ ಹೊರಟು, ಅಗ್ನಿಶಾಮಕ ಠಾಣೆ, ಕಾಂತರಾಜ ಅರಸ್, ನ್ಯೂ ಕಾಂತರಾಜ ಅರಸ್, ವಿಜಯಬ್ಯಾಂಕ್ ವೃತ್ತ, ಕುಕ್ಕರಹಳ್ಳಿ ಕೆರೆ ರಸ್ತೆ, ಸರ್ಕಾರಿ ಮುದ್ರಣಾಲಯ, ಅಗ್ನಿಶಾಮಕ ಠಾಣೆ ಮೂಲಕ ಮತ್ತೆ ಮಹಾರಾಜ ಕಾಲೇಜು ಮೈದಾನ ತಲುಪಲಿದೆ. ಈಗಾಗಲೆ ಶಾಲೆಯ ವಿದ್ಯಾರ್ಥಿ ಮತ್ತು ಸಿಬ್ಬಂದಿ ಸೇರಿ 1 ಸಾವಿರ ಮಂದಿ ಹೆಸರು ನೋಂದಾಯಿಸಿಕೊಂಡಿದ್ದು, ಆಸಕ್ತ ಸಾರ್ವಜನಿಕರು ಕಿರಣ್ ಕುಮಾರ್ ಅವರ ಮೊ. 8095620284 ಸಂಪರ್ಕಿಸಬಹುದು. ವಿಜೇತರಿಗೆ ಪ್ರಥಮ ಬಹುಮಾನವಾಗಿ ರು. 2 ಸಾವಿರ ಮತ್ತು ದ್ವಿತೀಯ ಬಹುಮಾನವಾಗಿ 1 ಸಾವಿರ ನೀಡಲಾಗುವುದು. ಕಾಲೇಜು ಸಿಬ್ಬಂದಿಗೆ ಪ್ರತ್ಯೇಕ ಬಹುಮಾನ ಇರುತ್ತದೆ ಎಂದರು.
ಏ.25 ಮತ್ತು 26 ರಂದು ಕಾಲೇಜಿನ ವಾರ್ಷಿಕೋತ್ಸವ ನಡೆಯಲಿದೆ. ಏ.26ರ ಸಂಜೆ ಸೈಲೆಂಟ್ ಶೋರ್ ಹೊಟೇಲ್ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿರುವುದಾಗಿ ವಿವರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

