ತುಮಕೂರು

ಮರಗಳಿಂದ ಅಪಾಯಕ್ಕೆ ಆಹ್ವಾನ!

Published On :

ಕನ್ನಡಪ್ರಭ ವಾರ್ತೆ, ತುಮಕೂರು, ಏ.22
ರೈತರು ಈ ದೇಶದ ಅನ್ನದಾತರು. ಅವರು ಬೆಳೆಯಲಿಲ್ಲವೆಂದರೆ ನಾವು ನ್ಯಾನೋ ಕಾರಿನಲ್ಲಿ ಕುಳಿತು ಭಿಕ್ಷೆ ಬೇಡಬೇಕಾಗುತ್ತದೆ ಎಂದು ತುಮಕೂರು ವಿವಿ ಕುಲಪತಿ ಪ್ರೊ. ಎ.ಎಚ್. ರಾಜಾಸಾಬ್ ಎಚ್ಚರಿಸಿದರು.
ತುಮಕೂರು ತಾಲೂಕು ಉರ್ಡಿಗೆರೆ ಗ್ರಾಮದಲ್ಲಿ ತುಮಕೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲಾ ಸಮಾಜಕಾರ್ಯ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ನವ್ಯ ದಿಶಾ ಸರಕಾರೇತರ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಿರುವ ಸದೃಢ ಭಾರತಕ್ಕಾಗಿ ಗ್ರಾಮೀಣ ನೈರ್ಮಲ್ಯ ಎಂಬ ಘೋಷ ವಾಕ್ಯದ 10  ದಿನಗಳ ವಿಶೇಷ ರಾಷ್ಟ್ರೀಯ ಸೇವಾ ಯೋಜನಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ರೈತರಿಗೆ ಆಹಾರ ಉತ್ಪಾದನೆ ಹೆಚ್ಚಳಕ್ಕೆ ಅಗತ್ಯವಿರುವ ಜ್ಞಾನ ಕಾಲ ಕಾಲಕ್ಕೆ ಲಭ್ಯವಾಗುವಂತೆ ಮಾಡಿ ಸ್ವಾವಲಂಬಿ ಬದುಕಿಗೆ ಸರಕಾರಗಳು ಮುಂದಾಗಬೇಕಾಗಿದೆ ಎಂದರು.
ಸಮಾನತೆ, ಸೋದರತ್ವ, ಸಹಕಾರ ಮತ್ತು ನೈತಿಕ ಮೌಲ್ಯಗಳನ್ನು ಉಳಿಸಿಕೊಂಡಿರುವ ಹಳ್ಳಿಗಳ ಅನಕ್ಷರಸ್ಥರಲ್ಲಿ ನಿಜವಾದ ಜ್ಞಾನ ಅಡಗಿದೆ ಎಂದು ತಿಳಿಸಿದರು.
ಪರಿಚಯವಿದೆ: ಅನಕ್ಷರಸ್ಥರು ನಮ್ಮಗಳ ಹಾಗೇ ಪದವಿ ಪಡೆದವರಲ್ಲ.ಆದರೆ ಅವರಿಗೆ ಪ್ರಕೃತಿಯ ಆಗುಹೋಗುಗಳ ಸಂಪೂರ್ಣ  ಪರಿಚಯವಿದೆ. ಕುಡಿಯುವ ನೀರು ಸೇರಿದಂತೆ ಪ್ರಾಕೃತಿಕ ವಿಕೋಪದಿಂದ ಉಂಟಾಗಿರುವ ಸಮಸ್ಯೆಗಳ ಪರಿಹಾರ ಮಾರ್ಗವೂ ತಿಳಿದಿದೆ. ಆದರೆ ಎ.ಸಿ.ರೂಮಿನಲ್ಲಿ ಕುಳಿತು ಯೋಜನೆಗಳನ್ನು ರೂಪಿಸುವ ಜನ ಇವರನ್ನು ಕಡೆಗಣಿಸಿದ್ದರ ಪರಿಣಾಮ ಇದುವರೆಗೂ ಪರಿಹಾರ ದೊರೆತ್ತಿಲ್ಲ. ಇವರ ಜ್ಞಾನವನ್ನು ಮತ್ತಷ್ಟು ವೃದ್ದಿಸಿ ಅವರ ಜ್ಞಾನಕ್ಕೆ ವೇದಿಕೆ ಕಲ್ಪಿಸುವ ಕೆಲಸ ಸಂಘಸಂಸ್ಥೆಗಳು, ಶಾಲಾ ಕಾಲೇಜುಗಳಿಂದ ಆಗಬೇಕಾಗಿದೆ ಎಂದರು. ಪ್ರಮುಖವಾಗಿ ಊರ್ಡಿಗೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿನ ಎಲ್ಲಾ ಹಳ್ಳಿಗಳಲ್ಲಿ ಜನರಿಗೆ ಶುಚಿತ್ವದ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಅವರಿಗೆ ಆರೋಗ್ಯ ಶಿಬಿರಗಳನ್ನು ನಡೆಸುವ ಮೂಲಕ ಶೌಚಾಲಯದ ಅರಿವು ಮೂಡಿಸುವ ಕೆಲಸವನ್ನು 10 ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ  ಮಾಡಬೇಕಾಗಿದೆ ಎಂದರು.
   ಕೆಲವು ಎನ್.ಜಿ.ಓಗಳು ಬಡವರು, ನಿರ್ಗತಿಕರ ಉದ್ಧಾರಕ್ಕೆ ಎ.ಸಿ.ರೂಮಿನಲ್ಲಿ ಕುಳಿತು ಯೋಜನೆ ರೂಪಿಸಿ ಸಾವಿರಾರು ಕೋಟಿ ರು. ಗಳನ್ನು ತಮ್ಮ ಖಾತೆಗೆ ಸೇರಿಸಿಕೊಳ್ಳುತ್ತಿವೆ. ಇಂತಹ ವೇಳೆಯಲ್ಲಿ ನವ್ಯದಿಶಾ ಸಂಸ್ಥೆ ಊರ್ಡಿಗೆರೆ ಗ್ರಾಮದಲ್ಲಿ ತುಮಕೂರು ವಿವಿಯ ಸಹಯೋಗದಲ್ಲಿ ಶೌಚಾಲಯ ನಿರ್ಮಿಸಲು ಮುಂದೆಬಂದಿರುವುದು ಶ್ಲಾಘನೀಯ ಕಾರ್ಯವೆಂದು ಡಾ.ಎ.ಎಚ್. ರಾಜಾಸಾಬ್ ನುಡಿದರು.
ಹೆಚ್ಚು ಅನುಕೂಲ: ಅಧ್ಯಕ್ಷತೆ ವಹಿಸಿದ್ದ ಊರ್ಡಿಗೆರೆ ಗ್ರಾಮಪಂಚಾಯಿತಿ ಅಧ್ಯಕ್ಷ ಆನಂದ ಮಾತನಾಡಿ, ಸಮಾಜ ಸೇವಾ ಕಾರ್ಯದಲ್ಲಿ ಸ್ನಾತಕೋತ್ತರ ಅಭ್ಯಾಸ ಮಾಡುತ್ತಿರುವ ನೂರಾರು ವಿದ್ಯಾವಂತರು ನಮ್ಮ ಹಳ್ಳಿಗೆ ಬಂದಿರುವುದು ನಮಗೆ ಹೆಚ್ಚು ಅನುಕೂಲವನ್ನು ಉಂಟು ಮಾಡಿದೆ. ಶಿಬಿರ ನಡೆಯುವ 10 ದಿನಗಳ ಕಾಲ ಅವರಿಗೆ ಬೇಕಾದ ಎಲ್ಲಾ ನೆರವನ್ನು ನೀಡಲು ಗ್ರಾ.ಪಂ.ಸಿದ್ದವಿದೆ ಎಂದರು.
ತುಮಕೂರು ವಿವಿಯ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ.ರಮೇಶ್ ಮಾತನಾಡಿ, 10 ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ಎಲ್ಲಾ ಎಂ.ಎಸ್.ಡಬ್ಲ್ಯೂ ಕಾಲೇಜುಗಳ 120 ವಿದ್ಯಾರ್ಥಿಗಳು ಶೌಚಾಲಯ ನಿರ್ಮಿಸುವುದರ ಜೊತೆಗೆ ಗ್ರಾ.ಪಂ.ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ಬೀದಿ ನಾಟಕ, ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಶುಚಿತ್ವದ ಬಗ್ಗೆ ಅರಿವು ಮೂಡಿಸಲಿದ್ದಾರೆ. ಜೊತೆಗೆ ಪ್ರತಿ ಗ್ರಾಮದಲ್ಲಿಯೂ ಆರೋಗ್ಯ ಶಿಬಿರಗಳನ್ನು ಏರ್ಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ನವ್ಯದಿಶಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಕೆ. ಕೃಷ್ಣ, ಗುರುಶ್ರೀ ಕಾಲೇಜಿನ ಪ್ರೊ.ಟಿ. ಗಂಗಾಧರಯ್ಯ, ಹೇಮಾದ್ರಿ ಕಾಲೇಜಿನ ಪ್ರಾಂಶುಪಾಲ ಗುರುಪ್ರಸಾದ್, ತುಮಕೂರು ವಿವಿ ಎಂ.ಎಸ್.ಡಬ್ಲ್ಯೂ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಲೋಕೇಶ್, ಗುರುಶ್ರಿ ಕಾಲೇಜಿನ ಬಿ.ಪಿ. ಬಸವಲಿಂಗಯ್ಯ, ಗುರುಶ್ರೀ ಕಾಲೇಜಿನ ಪುಟ್ಟರಾಜು, ಸದಾನಂದ ಮತ್ತಿತರರು ಉಪಸ್ಥಿತರಿದ್ದರು.
ತುಮಕೂರು ವಿವಿ ವ್ಯಾಪ್ತಿಗೆ ಸೇರಿದಂತೆ ಸ್ನಾತಕೋತ್ತರ ಸಮಾಜ ಕಾರ್ಯ ಕಾಲೇಜುಗಳಾದ ಗುರುಶ್ರೀ, ಹೇಮಾದ್ರಿ, ಶ್ರೀಸಿದ್ಧಾರ್ಥ, ಸೂಫ್ಹಾ ಕಾಲೇಜುಗಳ 120 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.