ಜಾನಪದ ಕಲೆ, ಸಾಹಿತ್ಯ ಮಾನಸಿಕ ನೆಮ್ಮದಿ ನೀಡುತ್ತೆ
ಕನಕಪುರ: ಜಾನಪದ ಕಲೆ, ಸಾಹಿತ್ಯಗಳು ಜನರಿಗೆ ಮಾನಸಿಕ ನೆಮ್ಮದಿ, ಮನರಂಜನೆಗಳನ್ನು ನೀಡುವುದರೊಂದಿಗೆ ಭವಿಷ್ಯದ ಬದುಕಿನ ಬಗ್ಗೆ ಆಶಾವಾದವನ್ನು ಮೂಡಿಸುತ್ತವೆ. ಆದ್ದರಿಂದಲೇ ಜಾನಪದ ಕಲೆ ಹಾಗೂ ಸಂಸ್ಕೃತಿಗಳು ಬದುಕಿಗೆ ಅತ್ಯಗತ್ಯ ಎಂದು ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಬಾನಂದೂರು ಕೆಂಪಯ್ಯ ಹೇಳಿದ್ದಾರೆ.
ಅವರು ಕನಕಪುರ ತಾಲೂಕು ಬಿಜ್ಜಹಳ್ಳಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸುಗ್ಗಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸುಗ್ಗಿ - ಸಂಭ್ರಮ ಕಾರ್ಯಕ್ರಮವನ್ನು
ವಿನೂತನವಾಗಿ ನಗಾರಿ ಬಾರಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಜಗತ್ತಿನ ಅತ್ಯಂತ ಶ್ರೀಮಂತ ಕಲೆಗಳಲ್ಲಿ ಭಾರತೀಯ ಜಾನಪದ ಕಲೆ, ಸಾಹಿತ್ಯಗಳು ಪ್ರಧಾನ ಪಾತ್ರ ವಹಿಸುತ್ತವೆ. ಜಾಗತೀಕರಣದ ಭರಾಟೆಯಲ್ಲಿ ಯುವಜನತೆ ಲ್ಯಾಪ್ ಟಾಪ್, ಮೊಬೈಲ್ಗಳ ಮೊರೆಹೊಕ್ಕು ಮೂಲ ಸಂಸ್ಕೃತಿಯನ್ನು ಮರೆತು ಪಾಶ್ಚಾತ್ಯ ಸಂಸ್ಕೃತಿಯ ದಾಸಾನುದಾಸರಾಗುತ್ತಿದ್ದಾರೆ ಎಂದು ಬಾನಂದೂರು ಕೆಂಪಯ್ಯ ವಿಷಾದಿಸಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಪ್ರಾಚೀನ ಕಲೆ, ಸಂಸ್ಕೃತಿ, ಪರಂಪರೆಗಳನ್ನು ಉಳಿಸಿ ಬೆಳೆಸುವ ಪ್ರೋತ್ಸಾಹಿಸಿ ಉತ್ತೇಜಿಸುವ ಕಾರ್ಯವನ್ನು ಸಂಘಸಂಸ್ಥೆಗಳು ಮಾಡಬೇಕಿದೆ. ಗ್ರಾಮೀಣರ ಸಂಸ್ಕೃತಿಯನ್ನು ನಗರಗಳಿಗೆ ವ್ಯಾಪಿಸುವಂತೆ ಕಾರ್ಯ ನಿರ್ವಹಿಸಬೇಕಾಗಿದೆ ಎಂದರು.
ಸುಗ್ಗಿಸಂಭ್ರಮದ ಅಂಗವಾಗಿ ಆಯೋಜಿಸಿದ್ದ ಜಾನಪದ ತೇರು ಕಾರ್ಯಕ್ರಮದಲ್ಲಿ ಜಾನಪದ ಕಲಾಪ್ರಕಾರಗಳಾದ ನಂದೀ ಧ್ವಜ, ಪಟದ ಕುಣಿತ, ಬೀಸುಕಂಸಾಳೆ, ವೀರಗಾಸೆ, ಪೂಜಾ ಕುಣಿತಗಳ ಮೆರವಣಿಗೆ ಗ್ರಾಮದ ಬೀದಿಗಳಲ್ಲಿ ನಡೆಯಿತು. ಪತ್ರಕರ್ತ ಎಂ.ಎನ್.ಸುರೇಶ್, ಶಿಕ್ಷಕ ಶ್ರೀನಿವಾಸ್, ಜಾನಪದ ಕಲಾವಿದ ಮುನಿಯಪ್ಪನವರಿಗೆ ಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಮುಖ್ಯಅತಿಥಿಗಳಾಗಿ ಜಾನಪದ ಗಾಯಕ ಜೋಗಿಲ ಸಿದ್ದರಾಜು, ಚಿಕ್ಕಮರಿಗೌಡ, ಗಾಂಧೀವಾದಿ ಬಿ.ಕೆ. ಸಿದ್ಧಲಿಂಗಯ್ಯ, ಧರೇಶ್, ನಾಗರಾಜು, ರಾಜು, ಶಿವರಾಮಯ್ಯ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಜಾನಪದ ಕಲಾವಿದರಿಂದ ಜಾನಪದ ಝೇಂಕಾರ ಗೀತಗಾಯನ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

