ಬ್ರಹ್ಮಸೂತ್ರಕ್ಕೆ ಶಂಕರಾಚಾರ್ಯರಿಂದ ಮೊದಲ ಭಾಷ್ಯ
ಕ.ಪ್ರ.ವಾರ್ತೆ, ತುಮಕೂರು, ಏ.26
ತಮ್ಮ ಗುರು ಗೋವಿಂದ ಭಗವತ್ಪಾದರ ಆದೇಶದಂತೆ ಅತ್ಯಂತ ಕಠಿಣವಾದ ಬ್ರಹ್ಮಸೂತ್ರ, ಉಪನಿಷತ್ತುಗಳು ಹಾಗೂ ಭಗವದ್ಗೀತೆ ಎಂಬ ಪ್ರಸ್ಥಾನತ್ರಯಗಳಿಗೆ ಜನಸಾಮಾನ್ಯರಿಗೆ ತಿಳಿಯುವಂತೆ ಮೊದಲು ಭಾಷ್ಯ ಬರೆದವರು ಆದಿಗುರು ಶಂಕರಾಚಾರ್ಯರು ಎಂದು ಶಿರಾದ ಎಚ್. ಲೋಕೇಶ್ ಅಗ್ರಹಾರ ಹೇಳಿದರು.
ಅವರು ತುಮಕೂರಿನ ಜ್ಞಾನಬುತ್ತಿ ಸತ್ಸಂಗ ಕೇಂದ್ರ ಆಯೋಜಿಸಿದ್ದ 249 ನೇ ಸಾಪ್ತಾಹಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಆದಿಗುರು ಶಂಕರಾಚಾರ್ಯರು ಎಂಬ ವಿಷಯದ ಬಗ್ಗೆ ಮಾತನಾಡುತ್ತಾ 8-9ನೇ ಶತಮಾನದಲ್ಲಿ ರಾಜಕೀಯ ಅಸ್ಥಿರತೆ ಹಾಗೂ ರಾಜಕೀಯದಲ್ಲಿ ಮಾರ್ಗದರ್ಶನದ ಕೊರತೆ ಇತ್ತು. ಅಲ್ಲದೆ ಬೇರೆ ಧರ್ಮಗಳ ಮೇಲಾಟ, ಕಾಪಾಲಿಕರ ಧರ್ಮದ ಅಪಪ್ರಚಾರ, ಚಾರ್ವಾಕ ಸಿದ್ಧಾಂತದ ಕಬಂಧ ಬಾಹುವಿನಲ್ಲಿ ಸಿಲುಕಿ ನರಳುತ್ತಿದ್ದ ಸಮಾಜ ಇಂತಹ ಸಂದಿಗ್ಧ ಕಾಲದಲ್ಲಿ ಶಂಕರಾಚಾರ್ಯರು ಹುಟ್ಟಿದರು ಎಂದರು.
ಅನೇಕ ಪವಾಡ ಸದೃಶ ಕಾರ್ಯಗಳನ್ನು ಮಾಡಿ ಜನಪ್ರಿಯರಾದರು.ತನ್ನ ತಂದೆ ಮರಣ ಹೊಂದಿದಾಗ ಬಾಲ ಶಂಕರರು ಜೀವ ಹೋಗುವುದು ಎಲ್ಲಿಗೆ, ಜೀವ ಬರುವುದಾದರೂ ಎಲ್ಲಿಂದ ಎಂಬ ಜಿಜ್ಞಾಸೆಗೆ ಒಳಗಾಗುತ್ತಾರೆ.
ತಮ್ಮ ಗಹನವಾದ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಲು, ಹಾಗೂ ಗುರುವಿನ ಮಾರ್ಗದರ್ಶನ ಪಡೆಯಲು ಉತ್ತರ ದಿಕ್ಕಿನತ್ತ ಪ್ರಯಾಣಿಸುತ್ತಾರೆ. ಗುರುಗೋವಿಂದ ಭಗವತ್ಪಾದರನ್ನು ಹುಡುಕಿ ತಮ್ಮ ಗುರುವನ್ನಾಗಿ ಮಾಡಿಕೊಂಡರು. ಅಲ್ಲಿ ಶಂಕರರಿಗೆ ಜ್ಞಾನೋಪದೇಶ ಮಾಡುತ್ತಾರೆ. ಇವರ ಗುರು ಶಿಷ್ಯ ಸಂಬಂಧ ವಿಶ್ವದ ಅಪೂರ್ವ ದಾಖಲೆಯಾಗಿದೆ.
ಪ್ರತಿಪಾದನೆ: ಜೀವವಿರುವ ವ್ಯಕ್ತಿಗೆ ಆತ್ಮವಿದೆ, ಅವನು ಜೀವಾತ್ಮನೂ ಹೌದು, ಪರಮಾತ್ಮನೂ ಹೌದು ಎಂದು ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು. ನೂರಾರು ಸಂಖ್ಯೆಯಲ್ಲಿರುವ ಉಪನಿಷತ್ತುಗಳಲ್ಲಿ ವೇದಮೂಲದಿಂದ ಬಂದಿವೆ ಎಂದು ನಂಬಲಾಗಿರುವ ಹಾಗೂ ಬೃಹದಾರಣ್ಯತ ಈ ದಶೋಪನಿಷತ್ತುಗಳನ್ನು ಆಯ್ದುಕೊಂಡು ಭಾರತದಲ್ಲೇ ಪ್ರಪ್ರಥಮ ಬಾರಿಗೆ ಸಮರ್ಥವಾಗಿ ಹಾಗೂ ಅಷ್ಟೇ ಸರಳವಾಗಿ ಭಾಷ್ಯಗಳನ್ನು ಬರೆದು ಜನ ಸಾಮಾನ್ಯರ ಅರಿವಿಗೆ ನಿಲುಕುವಂತೆ ಮಾಡಿದ ಕೀರ್ತಿಗೆ ಭಾಜನರಾಗಿದ್ದಾರೆ ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಅಧ್ಯಕ್ಷ ಡಾ. ಕೆ. ರಾಜಶೇಖರ್ ಅವರು ಮಾತನಾಡಿ
ಬಾಲಶಂಕರಾಚಾರ್ಯರು ತಮ್ಮ 8ನೇ ವಯಸ್ಸಿಗೆ ಚತುರ್ವೇದಗಳನ್ನು ಕಲಿತರಂತೆ. ಈ ಸಂಗತಿ ಕೇಳಿದಾಗ ಅವರ ಮೇಧಾಶಕ್ತಿ ಎಷ್ಟರಮಟ್ಟಿಗೆ ಬೆಳೆದಿತ್ತು ಎಂಬುದನ್ನು ಯೋಚಿಸಬೇಕಾಗುತ್ತದೆ. ಶಂಕರಾಚಾರ್ಯರ
ವೇದಾಂತ ಸಂದೇಶಗಳು, ಜೀವನದ ಪ್ರಸಂಗಗಳು, ಪವಾಡಗಳನ್ನು ಸ್ವಾಮಿ ವಿವೇಕಾನಂದರು ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿದರು. ನಾವೂ ಸಹ ಯಾವುದನ್ನೇ ಆಗಲಿ ವೈಜ್ಞಾನಿಕ ದೃಷ್ಟಿಯಿಂದ ನೋಡಿ ಅರ್ಥೈಸಬೇಕು ಎಂದರು.
ಕೆ.ಟಿ. ಸುಶೀಲಾ ಪ್ರಾರ್ಥಿಸಿದರು, ಈ ಸತ್ಸಂಗ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅಬ್ಬಿನಹೊಳೆ ಸುರೇಶ್ ಸ್ವಾಗತಿಸಿದರು. ಕೇಂದ್ರ ಮಾಜಿ ಕಾರ್ಯದರ್ಶಿ ರಾಜರಾವ್ ಥಾವರೆ ನಿರೂಪಿಸಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

