ಸ್ತ್ರೀ-ಮಕ್ಕಳ ಮಾರಾಟ ನಿಲ್ಲಲಿ
ಕ.ಪ್ರ. ವಾರ್ತೆ ತುರುವೇಕೆರೆ ಏ. 30
ಸಮಾಜದಲ್ಲಿ ಮಹಿಳೆಯರ ಹಾಗೂ ಮಕ್ಕಳ ಮಾರಾಟ ದಂಧೆ ನಡೆಯುತ್ತಿರುವುದು ಆಂತಕದ ವಿಷಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಸುಭಾಷ್.ಬಿ.ಹೊಸಕಲ್ಲೆ ಅಭಿಪ್ರಾಯಪಟ್ಟರು.
ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ ವತಿಯಿಂದ ನಡೆದ ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ನಿರ್ಮೂಲನಾ ಕಾರ್ಯಾಗಾರ ಹಾಗೂ ಜಾಥಾ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಮಹಿಳೆಯರು ಮತ್ತು ಮಕ್ಕಳ ಮಾರಾಟ ನಿರಾತಂಕವಾಗಿ ನಡೆಯಲು ಒಂದು ವ್ಯವಸ್ಥಿತ ಜಾಲವೇ ಇರುವ ಸಾಧ್ಯತೆ ಇದೆ. ಇಂತಹ ಅಮಾನವೀಯ ಕ್ರಮಗಳು ಕಂಡು ಬಂದ ತಕ್ಷಣವೇ ಸಾರ್ವಜನಿಕರು ಸಂಬಂಧಿಸಿದ ಇಲಾಖೆ ಅಥವಾ ಪೋಲಿಸರಿಗೆ ತಿಳಿಸುವುದು ಉತ್ತಮ ಎಂದರು. ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳ ಕುರಿತು ಮನೆ ಮನೆಗಳಿಗೆ ವಿಷಯ ತಿಳಿಸಿ ಜಾಗೃತಿ ಮೂಡಿಸುವುದೊಂದೇ ಉಳಿದಿರುವ ಮಾರ್ಗ ಎಂದರು. ಸಾರ್ವಜನಿಕರು ಜಾಗೃತರಾದರೆ ಅಪರಾಧ ಮಾಡುವ ಮಂದಿ ಹೆದರಿ ಅಕ್ರಮ ಕೃತ್ಯ ಮಾಡಲು ಹಿಂದೇಟು ಹಾಕುತ್ತಾರೆ ಎಂದು ನ್ಯಾ. ಸುಭಾಷ್.ಬಿ.ಹೊಸಕಲ್ಲೆ ತಿಳಿಸಿದರು.
ಸ್ವಾಸ್ಥ್ಯ ಹಾಳು: ಜೆಎಂಎಫ್ ನ್ಯಾಯಾಧೀಶ ಪುಟ್ಟಸ್ವಾಮಿ ಮಾತನಾಡಿ 18 ವರ್ಷದ ಮಕ್ಕಳನ್ನು ಅಪಹರಿಸಿ ಜೀತಪದ್ಧತಿ ಹಾಗೂ ಅಂಗಾಂಗಗಳ ಮಾರಾಟಕ್ಕೆ ಬಳಕೆ ಮಾಡಲಾಗುತ್ತದೆ. ಇಂತಹ ದುಷ್ಕೃತ್ಯದಿಂದಾಗಿ ಸಮಾಜದ ಸ್ವಾಸ್ಥ್ಯ ಹಾಳಾಗಲಿದೆ ಎಂದು ಹೇಳಿದರು. ಜಿಲ್ಲಾ ನಿರೂಪಾಣಾಧಿಕಾರಿ ನಟರಾಜು ಮಾತನಾಡಿ ಸಮಾಜದಲ್ಲಿ ಮಹಿಳೆಯರು ಮತ್ತು ಪುರುಷರ ನಡುವೆ ಸಮಾನಾಂತರ ಕಂಡುಕೊಂಡಿದ್ದರೂ ಮಹಿಳೆಯರನ್ನು ಶೋಷಣೆ ಮಾಡುವ ಮಂದಿಗೇನೂ ಸಮಾಜದಲ್ಲಿ ಕೊರತೆ ಇಲ್ಲ. ಮಾನವ ಕಳ್ಳಸಾಗಣೆಯಿಂದಾಗಿ ದಿಢೀರನೆ ಹಣಗಳಿಸಬಹುದು ಎಂಬ ದುರಾಲೋಚನೆಯಿಂದ ಇಂತಹ ಸಮಾಜಘಾತುಕ ಕೃತ್ಯಗಳು ನಡೆಯುತ್ತಿವೆ. ಇವುಗಳನ್ನು ತಡೆಗಟ್ಟಲು ಸಾಕ್ಷರತೆಯ ಅಗತ್ಯವಿದೆ ಎಂದರು. ಮಾನವ ಕಳ್ಳಸಾಗಣೆ ಮಾಡುವವರಿಗೆ ಕಠಿಣವಾದ ಕಾನೂನು ಇದೆ. ಆದ್ದರಿಂದ ಮಹಿಳೆಯರು ಹಾಗೂ ಮಕ್ಕಳು ಹೆದರದೆ ಕಾನೂನಿನ ಮೊರೆ ಹೋಗಲು ತಿಳಿಸಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ, ಶಿಶು ಅಭಿವೃಧ್ಧಿ ಯೋಜನಾಧಿಕಾರಿ ಎನ್.ಜಿ.ರವೀಂದ್ರ, ವಕೀಲರ ಸಂಘದ ಅಧ್ಯಕ್ಷ ದೇವರಾಜು, ಮಾಜಿ ಅಧ್ಯಕ್ಷ ಚನ್ನಕೇಶವಸ್ವಾಮಿ, ವಕೀಲರಾದ ಮುದ್ದೇಗೌಡ, ನಾಗೇಶ್, ಶಿವಮೂರ್ತಿ, ನಂಜೇಗೌಡ, ಡಿ.ಟಿ.ರಾಜಶೇಖರ್, ಕಾರ್ಯನಿರ್ವಾಹಕ ಅಧಿಕಾರಿ ವಾಳ್ವೇಕರ್, ಬಿ ಇ ಓ ರಂಗಧಾಮಯ್ಯ, ಸಿಡಿಪಿಓ ಇಲಾಖೆಯ ಟಿ.ಆರ್.ಸ್ವಾಮಿ, ಮೇಲ್ವಿಚಾರಕರಾದ ಉಷಾರಾಣಿ, ಎಸ್.ಕೆ.ಗೀತಾ, ಯಶೋಧಾ, ಬಿ.ಕೆ.ಇಂದ್ರ ಮೊದಲಾದವರು ಇದ್ದರು. ಸಮಾರಂಭದ ನಂತರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥಾವನ್ನು ಏರ್ಪಡಿಸಲಾಗಿತ್ತು. ಜ್ಯೋತಿ ಸ್ವಾಗತಿಸಿದರು. ತೀರ್ಥಕುಮಾರಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

